ಪ್ರಕೃತಿ ರಕ್ಷಿಸುವ ಜವಾಬ್ದಾರಿ ಎಲ್ಲರದ್ದು

ಪ್ರಕೃತಿ ರಕ್ಷಿಸುವ ಜವಾಬ್ದಾರಿ ಎಲ್ಲರದ್ದು
Published on

ವಿರಾಜಪೇಟೆ: ಪ್ರಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಕೇವಲ ಸರ್ಕಾರ ಹಾಗೂ ಸಂಘ ಸಂಸ್ಥೆಗಳದಲ್ಲ. ಪ್ರತಿಯೊಬ್ಬರೂ ಈ ಕುರಿತು ಜವಾಬ್ದಾರಿ ವಹಿಸಬೇಕು ಎಂದು ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.

ವಿರಾಜಪೇಟೆಯ ಪುರಸಭೆ ವತಿಯಿಂದ ಸೋಮವಾರ ವಿರಾಜಪೇಟೆ ನಗರದ ಮಲೆ ತಿರಿಕೆ ಬೆಟ್ಟದ ಮೇಲಿನ ವ್ಯೆ ಪಾಯಿಂಟ್‌ನಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೆಲವು ಪ್ರವಾಸಿಗರು ಹಾಗೂ ಸ್ಥಳೀಯರ ಬೇಜವಾಬ್ದಾರಿತನದಿಂದ ಸುಂದರ ಪರಿಸರದಲ್ಲಿ ಎಲ್ಲೆಂದರಲ್ಲಿ ಕಸ ಎಸೆಯಲಾಗುತ್ತಿದೆ. ಬೆಟ್ಟದ ಮೇಲೆ ಮೋಜು ಮಸ್ತಿ ಮಾಡಿ ಮದ್ಯದ ಬಾಟಲಿ, ತಿನಿಸುಗಳ ಪೊಟ್ಟಣವನ್ನು ಎಸೆಯಲಾಗಿದೆ. ಸುಂದರ ಪರಿಸರವನ್ನು ಮಲಿನಗೊಳಿಸುತ್ತಿರುವುದು ದುರದೃಷ್ಟದ ಸಂಗತಿ. ಇಂತಹವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಲಾಗಿದ್ದು, ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಅರಿತು ನಡೆದುಕೊಳ್ಳಬೇಕೆಂದರು. ಪರಿಸರವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಎಲ್ಲರೂ ಸಹಕರಿಸಬೇಕೆಂದರು.

ವಿರಾಜಪೇಟೆ ಪುರಸಭೆಯ ಅಧ್ಯಕ್ಷರಾದ ದೇಚಮ್ಮ ಕಾಳಪ್ಪ ಮಾತನಾಡಿ, ವ್ಯೆ ಪಾಯಿಂಟ್‌ನಲ್ಲಿ ಮದ್ಯ ಸೇರಿದಂತೆ, ಆಹಾರ ಪೊಟ್ಟಣಗಳನ್ನು ಎಲ್ಲೆಂದರಲ್ಲಿ ಎಸೆದು ಮಲಿನಗೊಳಿಸಿದ್ದಾರೆ. ನಾಗರಿಕರು ಎಚ್ಚೆತ್ತುಕೊಳ್ಳಬೇಕು. ಶಾಸಕರ ನೇತೃತ್ವದಲ್ಲಿ ಪೌರಕಾರ್ಮಿಕರ ಒಳಗೂಡಿ ಸ್ವಚ್ಛತಾ ಶ್ರಮದಾನ ಕೈಗೊಳ್ಳಲಾಗಿದೆ. ವ್ಯೆ ಪಾಯಿಂಟ್‌ನ್ನು ಪ್ರವಾಸಿ ತಾಣವಾಗಿ ಮಾರ್ಪಡಿಸಲು ಚಿಂತಿಸಿದ್ದು, ಶಾಸಕರಿಂದ ಅನುದಾನ ಕೋರಲಾಗಿದೆ ಎಂದರು.

ಸ್ವಚ್ಛತೆ ಹಾಗೂ ಸುರಕ್ಷತೆ ದೃಷ್ಟಿಯಿಂದ ರಾತ್ರಿ 7ಗಂಟೆ ನಂತರ ಪ್ರವಾಸಿಗರನ್ನು ನಿರ್ಬಂಧಿಸಲಾಗುತ್ತದೆ ಹಾಗೂ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗುವುದು ಎಂದರು.

ವಿರಾಜಪೇಟೆ ಪುರಸಭೆ ಸದಸ್ಯ ರಂಜಿ ಪೂಣಚ್ಚ, ರಾಜೇಶ್ ಪದ್ಮನಾಭ, ಮತೀನ್, ಮೊಹಮ್ಮದ್ ರಾಫಿ, ಸುಶ್ಮಿತಾ, ಅನಿತಾ, ಆತೀಫ್ ಮನ್ನಾ, ಶಭರೀಶ್, ಹಮೀದ್, ಪುರಸಭೆ ಮುಖ್ಯಾಧಿಕಾರಿ ಚಂದ್ರಕುಮಾರ್, ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಹನೀಫ್, ವಿರಾಜಪೇಟೆ ಬ್ಲಾಕ್ ಅಧ್ಯಕ್ಷ ರಫೀಕ್, ಪುರಸಭಾ ಸ್ವಚ್ಛತಾ ಕಾರ್ಮಿಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net