

ಹಾಸನ: ಸರ್ಕಾರಿ ಶಾಲೆಗಳ ಉಳಿಸುವುದು, ನಮ್ಮ ಮಕ್ಕಳಿಗೆ ಶಿಕ್ಷಣ ಕಲ್ಪಿಸುವುದು, ಗುಣಮಟ್ಟದ ಶಿಕ್ಷಣ ನೀಡುವುದು ಕೇವಲ ಸರ್ಕಾರದ ಮತ್ತು ಶಿಕ್ಷಕರ ಹಾಗೂ ಸಿಬ್ಬಂದಿಯ ಕೆಲಸವಲ್ಲ. ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಎಂದು ಜಿಲ್ಲಾಧಿಕಾರಿ ಲತಾ ಕುಮಾರಿ ಹೇಳಿದರು.
ನಗರದ ಪೆನ್ಷನ್ ಮೊಹಲ್ಲಾದ ಬಳಿಯಿರುವ ಸರ್ಕಾರಿ ಉರ್ದು, ಇಂಗ್ಲಿಷ್ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ದಿವಂಗತ ಸೈಯದ್ ಅಬ್ದುಲ್ ರಶೀದ್ ಸ್ಮರಣಾರ್ಥ ಗುರುವಾರ ಬ್ಯಾಂಡ್‌ಸೆಟ್ ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ನಮ್ಮ ಜೀವನದಲ್ಲಿಯೂ ಶಿಕ್ಷಣ ಬದಲಾವಣೆ ಮಾಡುತ್ತದೆ, ಹಾಗೆಯೇ ಕೆಲಸದಲ್ಲೂ ಶಿಕ್ಷಣ ಬದಲಾವಣೆ ತರಲಿದೆ. ಯಾವ ವಿಷಯ ಬಂದರೂ ಮೊದಲ ಆದ್ಯತೆ ಶಿಕ್ಷಣಕ್ಕೆ ಕೊಡುತ್ತೇವೆ. ಇದೊಂದು ಸಣ್ಣ ಕಾರ್ಯಕ್ರಮವಾದರೂ ಇದರಲ್ಲಿ ದೊಡ್ಡ ಸಂದೇಶ ಇದೆ. ಅಂದರೆ ಸರ್ಕಾರಿ ಶಾಲೆಗಳನ್ನು ಬಲಪಡಿಸುವಲ್ಲಿ ಪ್ರತಿಯೊಬ್ಬರ ಪಾತ್ರವಿದೆ ಎಂದರು.
ಒಟ್ಟಾಗಿ ಪ್ರಯತ್ನ ಮಾಡಿದಾಗ ಉತ್ತಮ ಫಲಿತಾಂಶ ಬರುತ್ತದೆ. ಸರ್ಕಾರಿ ಶಾಲೆ ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಕೊಡುಗೆ ನೀಡಬೇಕು. ಈಗಾಗಲೇ ಈ ಶಾಲೆಗೆ ಬೇಕಾಗಿರುವ ಸೌಲಭ್ಯಗಳ ಬಗ್ಗೆ ತಿಳಿಸಲಾಗಿದೆ. ಏನೇ ಇರಲಿ ಶಿಕ್ಷಣಕ್ಕೆ ಮೊದಲ ಗಮನಹರಿಸಬೇಕು. ಆರ್ಥಿಕವಾಗಿ ಸುಸ್ಥಿತಿಯಲ್ಲಿರುವವರು ಸರ್ಕಾರಿ ಶಾಲೆಗೆ ಕೊಡುಗೆ ನೀಡಿದರೆ ಇಂತಹ ಶಾಲೆಯನ್ನು ಉಳಿಸಿ ಬೆಳೆಸಬಹುದು. ಶಿಕ್ಷಣದಿಂದಲೇ ಮಕ್ಕಳಲ್ಲಿ ಬದಲಾವಣೆ ತರಬಹುದು ಎಂದು ಹೇಳಿದರು.
ವಿದ್ಯಾರ್ಥಿಗಳು ಸ್ವಾವಲಂಬನೆಯ ಜೀವನದ ಬಗ್ಗೆ ಹೆಚ್ಚಿನ ಒತ್ತು ಕೊಡಬೇಕು. ಹೆಣ್ಣುಮಕ್ಕಳು ಯಾರ ಮೇಲೂ ಭಾರ ಹೊರಿಸದೆ ಸ್ವತಂತ್ರವಾಗಿ ಬದುಕಲು ಪ್ರೋತ್ಸಾಹಿಸಬೇಕು. ಗಂಡು ಮಕ್ಕಳು ಈಗಿನಿಂದಲೇ ವ್ಯಸನ ಮತ್ತು ಇತರ ದುಶ್ಚಟಗಳಿಂದ ದೂರ ಇರಲು ಪ್ರಯತ್ನಿಸಬೇಕು ಮನವರಿಕೆ ಮಾಡಿಕೊಟ್ಟರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಎಂ.ಬಲರಾಮ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ರಂಗನಾಥ್, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಕಾಂತರಾಜು, ಜನಪ್ರಿಯ ಆಸ್ಪತ್ರೆಯ ಚೇರ್ಮನ್ ಡಾ.ಅಬ್ದೂಲ್ ಬಶೀರ್, ಮಹಾನಗರ ಪಾಲಿಕೆ ಸದಸ್ಯ ರಫೀಕ್ ಅಹಮದ್, ಆಲೆ-ಅಮೀನ್ ಶಿಕ್ಷಣ ಸಂಸ್ಥೆಯ ಸಯ್ಯದ್ ತಾಜ್, ಹಸಿರುಭೂಮಿ ಪ್ರತಿಷ್ಠಾನದ ಸಂಸ್ಥಾಪಕ ಆರ್.ಪಿ. ವೆಂಕಟೇಶ್ ಮೂರ್ತಿ, ಛಾಯಾಗ್ರಹಕ ಅತೀಖುರಮಾನ್, ಶಾಲಾ ಶಿಕ್ಷಕರ ಸಂಘದ ಚೈತ್ರ ಮಂಜೇಗೌಡ, ಸಯ್ಯದ್ ಉಮರ್ ಫಾರೂಖ್, ಎಸ್.ಎಸ್. ಪಾಷಾ, ಕಸಾಪ ಮಾಜಿ ಗೌರವಾಧ್ಯಕ್ಷ ರವಿನ ಅಕಲಗೂಡು, ಮಾಜಿ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ ಇತರರು ಇದ್ದರು.