

ಬೇಲೂರು: ವಿಶ್ವವಿಖ್ಯಾತ ಶ್ರೀ ಚನ್ನಕೆಶವಸ್ವಾಮಿ ದೇಗುಲ ವಿಶ್ವ ಪರಂಪಾರಿಕ ಪಟ್ಟಿಗೆ ಸೇರಿದ ಹಿನ್ನೆಲೆಯಲ್ಲಿ ಕರ್ನಾಟಕದ ಆದಾಯ ತೆರಿಗೆ ಇಲಾಖೆಯವರು ದೇಗುಲ ಆವರಣ ಸ್ವಚ್ಛತೆಗೆ ಮುಂದಾಗಿರುವುದು ಶ್ಲಾಘನೀಯ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ಕರ್ನಾಟಕ ಮತ್ತು ಗೋವಾ ಆದಾಯ ತೆರಿಗೆ ಇಲಾಖೆಯ ಪ್ರಧಾನ ಆಯುಕ್ತೆ ಚೈತಾಲಿ ಪನ್ಮೆಯಿ ನೇತೃತ್ವದಲ್ಲಿ ‘ಸ್ವಚ್ಛತೆಯ ಸೇವೆ ಮತ್ತು ತ್ಯಾಜ್ಯ ಮುಕ್ತ ಭಾರತ’ ಅಭಿಯಾನದಡಿ ಚನ್ನಕೇಶವಸ್ವಾಮಿ ದೇಗುಲ ಆವರಣ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆದಾಯ ತೆರಿಗೆ ಇಲಾಖೆಯವರು ಬೇಲೂರು ದೇಗುಲದ ಆವರಣ ಸ್ವಚ್ಛತೆಗೆ ಮುಂದಾಗಿದ್ದು, ಇವರಿಗೆ ಬೇಲೂರಿನ ವಿವಿಧ ಸಂಘ ಸಂಸ್ಥೆಗಳು ಕೈಜೋಡಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಅದೇ ರೀತಿ ಇಲಾಖೆಯವರು ದೇಗುಲದ ಅಭಿವೃದ್ಧಿಗೂ ಸಹಕಾರ ನೀಡಬೇಕಿದೆ. ಸಾರ್ವಜನಿಕರೂ ತಮ್ಮ ಮನೆಗಳೂ ಸೇರಿದಂತೆ ಅಕ್ಕಪಕ್ಕದ ಸ್ಥಳಗಳಲೂ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.
ಕರ್ನಾಟಕ ಮತ್ತು ಗೋವಾ ಆದಾಯ ತೆರಿಗೆ ಇಲಾಖೆಯ ಪ್ರಧಾನ ಆಯುಕ್ತೆ ಚೈತಾಲಿ ಪನ್ಮೆಯಿ ಮಾತನಾಡಿ, ನಾವು ನಮ್ಮ ಸುತ್ತ ಮುತ್ತಲಿನ ವಾತಾವರಣವನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು. ಜತೆಗೆ ನಮ್ಮ ಸ್ಮಾರಕಗಳು ಮತ್ತು ನಮ್ಮ ಪರಿಸರವನ್ನು ಅಕ್ಕರೆ, ಪ್ರೀತಿಯಿಂದ ಕಾಪಾಡಬೇಕು. ಹಾಗೆ ಕಾಪಾಡಿದಾಗ ಮಾತ್ರ ನಾವು ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಜಗತ್ತನ್ನು ಬಿಟ್ಟುಕೊಡಬಹುದು ಎಂದರು.
ಬೆಂಗಳೂರು ಆದಾಯ ತೆರಿಗೆ ಇಲಾಖೆ ಆಯುಕ್ತ ದೇವರತ್ನ ಕುಮಾರ್, ಅಧಿಕಾರಿ ಅಮೃತ್‌ರಾಜ್‌ಸಿಂಗ್, ರಘು, ಚಾಮರಾಜನಗರ, ಪುರಸಭೆ ಮುಖ್ಯಾಧಿಕಾರಿ ಎಸ್.ಡಿ.ಮಂಜುನಾಥ್, ರೋಟರಿ ಸಂಸ್ಥೆ ಗಣೇಶ್, ಲೋಕೇಶ್, ವಾಸವಿ ಯುವಜನ ಸಂಘದ ಅಧ್ಯಕ್ಷ ಸುಧೀಂದ್ರ ಸೇರಿದಂತೆ ಇತರರಿದ್ದರು. ಇದೇ ಸಂದರ್ಭದಲ್ಲಿ ದೇಗುಲ ಆಡಳಿತ ಹಾಗೂ ಪುರಸಭೆಗೆ ಆದಾಯ ತೆರಿಗೆ ಇಲಾಖೆಯಿಂದ ಕಸದ ಬುಟ್ಟಿಗಳನ್ನು ವಿತರಿಸಲಾಯಿತು.