ಪತ್ರಿಕಾ ವಿತರಕರಿಗೆ ಇ-ಶ್ರಮ ಕಾರ್ಡ್ ವಿತರಣೆ

09 yelandur 03
Published on

ಯಳಂದೂರು: ಪಟ್ಟಣದ ಕಾರ್ಮಿಕ ಇಲಾಖೆಯ ಕಚೇರಿಯಲ್ಲಿ ಮಂಗಳವಾರ ವಿಜಯವಾಣಿ ದಿನಪತ್ರಿಕೆಯ ಸಹಯೋಗದೊಂದಿಗೆ ಕಾರ್ಮಿಕ ಇಲಾಖೆ ವತಿಯಿಂದ ತಾಲೂಕಿನ ಪತ್ರಿಕಾ ವಿತರಕರಿಗೆ ಅಪಘಾತ ಪರಿಹಾರ, ವೈದ್ಯಕೀಯ ಸೌಲಭ್ಯ ಯೋಜನೆಯ ಸೌಲಭ್ಯವುಳ್ಳ ಇ-ಶ್ರಮ ಕಾರ್ಡ್ ನೋಂದಣಿ ಕಾರ್ಯಕ್ರಮ ನಡೆಯಿತು.


ಪಟ್ಟಣವೂ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಪತ್ರಿಕಾ ವಿತರಕರು ತಮ್ಮ ಹೆಸರನ್ನು ನೋಂದಾಯಿಸಿಕೊಂಡರು. ಸ್ಥಳದಲ್ಲೇ ಅವರಿಗೆ ಇ-ಶ್ರಮ ಕಾರ್ಡ್ ವಿತರಣೆ ಮಾಡಲಾಯಿತು.


ಹಿರಿಯ ಕಾರ್ಮಿಕ ನಿರೀಕ್ಷಕಿ ವೀಣಾ ಮಾತನಾಡಿ, ರೈತ, ಸೈನಿಕ ದೇಶದ ಬೆನ್ನಲುಬಾಗಿದ್ದಾರೆ. ಇದನ್ನು ಹೊರತುಪಡಿಸಿ ದೇಶದ ಬೆನ್ನುಲುಬಾಗಿರುವುದು ಕಾರ್ಮಿಕರಾಗಿದ್ದಾರೆ. ಇದರಲ್ಲಿ ಸಂಘಟಿತ ವರ್ಗ ಶೇ.20ರಷ್ಟಿದ್ದರೆ, ಅಸಂಘಟಿತ ಕಾರ್ಮಿಕರು ಶೇ.80ರಷ್ಟಿದ್ದಾರೆ. ಒಟ್ಟು 379 ವರ್ಗಗಳಲ್ಲಿ ಇದನ್ನು ವಿಂಗಡಣೆ ಮಾಡಲಾಗಿದೆ. ಈ ಪಟ್ಟಿಗೆ ಈಗ ಹೊಸದಾಗಿ ಸರ್ಕಾರವು ಪತ್ರಿಕಾ ವಿತರಕರನ್ನು ಸೇರಿಸಿದೆ. ಪ್ರತಿನಿತ್ಯ ಮಳೆ, ಚಳಿ, ಗಾಳಿ ಎನ್ನದೆ ಮುಂಜಾನೆ ಪ್ರತಿ ಮನೆ, ಅಂಗಡಿ, ವಾಣಿಜ್ಯ ಮಳಿಗೆ, ಕಚೇರಿಗಳಿಗೆ ಪತ್ರಿಕೆ ವಿತರಣೆ ಮಾಡುವ ಪತ್ರಿಕಾ ವಿತರಕರನ್ನು ಈ ವ್ಯಾಪ್ತಿಗೆ ತಂದಿದೆ ಎಂದರು.


ಇದು ವಿಮೆ ವ್ಯಾಪ್ತಿಗೆ ಬರಲಿದ್ದು ಇದರಲ್ಲಿ ಹೃದ್ರೋಗ, ಕಿಡ್ನಿ ಜೋಡಣೆ, ಕ್ಯಾನ್ಸರ್, ಮೂಳೆ ಶಸ್ತ್ರಚಿಕಿತ್ಸೆ, ಪಾರ್ಶ್ವವಾಯು, ಆಸ್ತಮಾ, ಗರ್ಭಪಾತ, ಗರ್ಭಕೋಶ ಚಿಕಿತ್ಸೆ, ಪಿತ್ತಕೋಶದ ತೊಂದರೆಗಳು, ಮಿದುಳಿನ ಶಸ್ತ್ರಚಿಕಿತ್ಸೆ, ಸೇರಿದಂತೆ ಅನೇಕ ಚಿಕಿತ್ಸೆಗಳಿಗೆ ವಿಮೆ ಸೌಲಭ್ಯ ದೊರಕಲಿದೆ. ಇವೆಲ್ಲದಕ್ಕೂ ಇ-ಶ್ರಮನಲ್ಲಿ ನೋಂದಾಯಿತ ವ್ಯಕ್ತಿ ವರ್ಷದೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅಗತ್ಯ ದಾಖಲಾತಿಗಳನ್ನು ನೀಡಬೇಕಾಗುತ್ತದೆ. ವೈದ್ಯಕೀಯ ವೆಚ್ಚದಲ್ಲಿ 1 ಲಕ್ಷ ರೂ.ವರೆಗೆ ಪರಿಹಾರವನ್ನು ಪಡೆದುಕೊಳ್ಳಲು ಅವಕಾಶವಿದೆ. ಅಪಘಾತದಿಂದ ಸಾವು ಸಂಭವಿಸಿದರೆ 2 ಲಕ್ಷ ರೂ.ವರೆಗೆ ಪರಿಹಾರ ಲಭಿಸಲಿದೆ. ಪ್ರತಿಯೊಬ್ಬ ಪತ್ರಿಕಾ ವಿತರಕರೂ ಇದರ ಲಾಭವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.


ಬೆಳಗ್ಗೆ 10ರಿಂದ ಸಂಜೆ 5.50 ರವರೆಗೆ ಈ ನೋಂದಣಿ ಪ್ರಕ್ರಿಯೆ ನಡೆಯಿತು. ಇದರಲ್ಲಿ 30ಕ್ಕೂ ಹೆಚ್ಚು ಪತ್ರಿಕಾ ವಿತರಕರು ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಕಾರ್ಡ್ ಪಡೆದುಕೊಂಡರು.


ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಂಬಳೆ ವೀರಭದ್ರನಾಯಕ, ಪತ್ರಿಕಾ ವಿತರಕರಾದ ಹೊನ್ನೂರು ಎಸ್.ಪುಟ್ಟಸ್ವಾಮಿ, ಯರಿಯೂರು ನಾಗೇಂದ್ರ, ಫೈರೋಜ್‌ಖಾನ್, ಗೌಡಹಳ್ಳಿ ಮಹದೇವಸ್ವಾಮಿ, ಮಾಂಬಳ್ಳಿ ವಿಷ್ಣು, ಕಿನಕಹಳ್ಳಿ ರಾಚಯ್ಯ, ವೈ.ಎಂ.ಭಾನುಪ್ರಕಾಶ್, ಸೈಯದ್ ಇರ್ಫಾನ್, ಮುಷರಫ್, ವಿವೇಕ್, ಸುಭಾಷ್, ನವಾಜ್‌ಬೇಗ್, ಮಣಿಕಂಠ, ಅನಿಲ್, ಚಿನ್ನಸ್ವಾಮಿ, ಗುಂಬಳ್ಳಿ ನಾಗೇಂದ್ರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net