ಜಾಗತಿಕ ರಾಜತಾಂತ್ರಿಕ ಸಂಸ್ಥೆಯಾಗಿಯೂ ಇಸ್ರೋ ಕಾರ್ಯನಿರ್ವಹಣೆ: ಡಾ. ಟಿ.ಕೆ. ಅನುರಾಧ

Science
Published on

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಇಸ್ರೋ ಡಿಜಿಟಲ್ ತಂತ್ರಜ್ಞಾನ ವಲಯದಲ್ಲಿ ಮಹತ್ವದ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುವುದರ ಜೊತೆಗೆ, ಜಾಗತಿಕ ಮಟ್ಟದಲ್ಲಿ ರಾಜತಾಂತ್ರಿಕ ಸಂಸ್ಥೆಯಾಗಿಯೂ ಕಾರ್ಯನಿರ್ವಹಿಸುತ್ತಿದೆ ಎಂದು ಇಸ್ರೋ ವಿಜ್ಞಾನಿ ಡಾ.ಟಿ.ಕೆ ಅನುರಾಧ ತಿಳಿಸಿದ್ದಾರೆ.

ಜಯನಗರದ ನ್ಯಾಷನಲ್ ಕಾಲೇಜಿನ ಡಾ. ಎಚ್.ಎನ್. ಮಲ್ಟಿ ಮೀಡಿಯಾ ಹಾಲ್ ನಲ್ಲಿ ಆಯೋಜಿಸಿರುವ ಎರಡು ದಿನಗಳ ‘ಸೈನ್ಸ್ ಇನ್ ಆಕ್ಷನ್’ವಿಜ್ಞಾನ ಮೇಳದಲ್ಲಿ ಪಾಲ್ಗೊಂಡ ಅವರು, ‘ಸುಸ್ಥಿರತೆಯಲ್ಲಿ ನಾವೀನ್ಯತೆ’ ವಿಷಯ ಕುರಿತು ಮಾತನಾಡಿದರು.

ಇಸ್ರೋ ಬಗ್ಗೆ ವಿಜ್ಞಾನ ಸಂಸ್ಥೆಗಳು, ಪ್ರತಿಷ್ಠಿತ ವ್ಯಕ್ತಿಗಳು ಸಹ ಅಧ್ಯಯನ ಮಾಡುತ್ತಿದ್ದಾರೆ. ಇಸ್ರೋ ಎಲ್ಲವನ್ನೂ ಒಳಗೊಂಡಿದ್ದು, ಜಾಗತಿಕ ರಾಜತಾಂತ್ರಿಕ ಕ್ಷೇತ್ರದಲ್ಲೂ ಹೊಸ ಆಯಾಮ ಪಡೆದುಕೊಂಡು ಮುನ್ನಡೆಯುತ್ತಿದೆ ಎಂದರು.

ಇಸ್ರೋ ರಸ್ತೆ, ಸೇತುವೆಗಳಂತಹ ಭೌತಿಕ ಸಂಪರ್ಕ ವ್ಯವಸ್ಥೆ ಕಲ್ಪಿಸದೇ ಇರಬಹುದು. ಆದರೆ ಜನರ ಸುಗಮ ಜೀವನ, ದೇಶ ರಕ್ಷಣೆ, ಡಿಜಿಟಲ್ ತಂತ್ರಜ್ಞಾನದ ಸಂಬಂಧ ಸೇತುವೆಯಾಗಿ ಕೆಲಸ ಮಾಡುತ್ತಿದೆ. ಅರಣ್ಯ, ಸಾಗರ ಸೇರಿ ಪ್ರತಿಯೊಂದು ವಲಯದ ಮೇಲೂ ಕಣ್ಗಾವಲು ವ್ಯವಸ್ಥೆಯನ್ನು ನಿರ್ಮಿಸಿದೆ. ಗಡಿಗಳಲ್ಲಿ ಯೋಧರಿಗೆ ಸಂದೇಶ ರವಾನಿಸುತ್ತಿದ್ದು, ದೂರ ಸಂವೇದಿ ತಂತ್ರಜ್ಞಾನದ ಮೂಲಕ ರೈತರು, ಮೀನುಗಾರರು, ಇತರೆ ವ್ಯಾಪಾರ ವಲಯಗಳಿಗೆ ಹಲವಾರು ಸೇವೆಗಳನ್ನು ಒದಗಿಸುತ್ತಿದೆ. ಇ ಕಾಮರ್ಸ್, ಬ್ಯಾಂಕಿಂಗ್ ಸಂಪರ್ಕ ವಲಯದಲ್ಲೂ ಕೆಲಸ ಮಾಡುತ್ತಿದೆ. 6 ಸಾವಿರಕ್ಕೂ ಅಧಿಕ ಹಳ್ಳಿಗಳಿಗೆ ಉಪಗ್ರಹಗಳ ಮೂಲಕ ನೇರ ಸಂಪರ್ಕ ವ್ಯವಸ್ಥೆ ಕಲ್ಪಿಸುವ ಸೇವೆಯನ್ನು ಒದಗಿಸುತ್ತಿವೆ ಎಂದು ಮಾಹಿತಿ ನೀಡಿದರು.

ಸ್ವಾವಲಂಬಿ ಭಾರತ: ಉತ್ತಮ ಸಮಾಜ ನಿರ್ಮಾಣದ ಧ್ಯೇಯದೊಂದಿಗೆ ಸಾಗುತ್ತಿರುವ ಇಸ್ರೋ ಕಾರ್ಯಕ್ರಮಗಳು ನಾವೀನ್ಯತೆಯಿಂದ ಕೂಡಿದ್ದು, ವಿಕ್ರಮ್ ಸಾರಭಾಯಿ ಅವರ ನಾವೀನ್ಯತೆಯ ಚಿಂತನೆಗಳನ್ನು ಮುಂದುವರೆಸುತ್ತಿದೆ. ಬಾಹ್ಯಾಕಾಶ ವಲಯದಲ್ಲಿ ಭಾರತ ಸ್ವಾವಲಂಬಿಯಾಗಿದೆ. ಚಂದ್ರನಲ್ಲಿಗೆ ಮಾನವನ್ನು ಕಳುಹಿಸುವ ಕಾರ್ಯಕ್ರಮ ಬಗ್ಗೆ ಇಡೀ ಜಗತ್ತಿನ ಗಮನ ಸೆಳೆದಿದೆ ಎಂದರು.

ಸೂಪರ್ ಪವರ್: ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸ್‌ಸಿ) ಬಾಹ್ಯಾಕಾಶ ಇಂಜನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಪ್ರೊ.ಕೆ.ಪಿ.ಜೆ ರೆಡ್ಡಿ ಮಾತನಾಡಿ, ಶಿಕ್ಷಣವನ್ನು ವಿಭಿನ್ನವಾಗಿ ನೋಡುವ ಪರಿಪಾಠ ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಉತ್ಸುಕತೆ ಅಳವಡಿಸಿಕೊಳ್ಳಬೇಕು. ಬರುವ 2047 ರ ವೇಳೆಗೆ ಭಾರತವನ್ನು ಸೂಪರ್ ಪವರ್ ದೇಶವನ್ನಾಗಿ ಮಾಡಲು ಯುವ ಸಮೂಹ ಸನ್ನದ್ಧವಾಗಬೇಕು. ಇದಕ್ಕಾಗಿ ದೇಶಾದ್ಯಂತ ಅತ್ಯುತ್ತಮ ಪ್ರಯೋಗಾಲಯಗಳನ್ನು ಸ್ಥಾಪಿಸಬೇಕಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಾ.ಬಿ.ವಿ. ಜಗದೀಶ್, ಎನ್.ಇ.ಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಚ್.ಎನ್. ಸುಬ್ರಮಣ್ಯ, ಕಾರ್ಯದರ್ಶಿಗಳಾದ ವೆಂಕಟಶಿವ ರೆಡ್ಡಿ, ಬಿ.ಎಸ್ ಅರುಣ್ ಕುಮಾರ್, ಖಚಾಂಚಿ ತಲ್ಲಂ ದ್ವಾರಕಾನಾಥ್, ಜಂಟಿ ಕಾರ್ಯದರ್ಶಿ ಸುಧಾಕರ್ ಎಸ್ತೂರಿ, ಜಯನಗರ ನ್ಯಾಷನಲ್ ಕಾಲೇಜಿನ ಅಧ್ಯಕ್ಷರಾದ ಡಾ. ಪಿ. ಎಲ್ ವೆಂಕಟರಾಮರೆಡ್ಡಿ, ವರ್ಕ್ಸ್ ಕಮಿಟಿ ಅಧ್ಯಕ್ಷರಾದ ಜಿ ಎಂ ರವೀಂದ್ರ, ಪ್ರಾಂಶುಪಾಲ ಡಾ. ಪಿ. ಎಲ್. ರಮೇಶ್, ಪ್ರೊ. ಎಸ್. ಮಮತಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net