ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ‘ಬೆಂಗಳೂರು ಟ್ವಿನ್ ಟನಲ್ ಪ್ರಾಜೆಕ್ಟ್’ ಅನುಷ್ಠಾನ ಸಂಬಂಧ ಬಿಬಿಎಂಪಿ ಆಹ್ವಾನಿಸಿದ್ದ ಬಂಡವಾಳ ಹೂಡಿಕೆಗಾಗಿ ಆಸಕ್ತಿ ವ್ಯಕ್ತಪಡಿಸುವಿಕೆ (ಇಒಐ) ಪ್ರಸ್ತಾಪದಲ್ಲಿ ತುಸು ಮಾರ್ಪಾಡು ಮಾಡಲಾಗಿದೆ.
ಖಾಸಗಿ ಹಣಕಾಸು ಸಂಸ್ಥೆಗಳಿಂದ ನಿಧಿ ಸಂಗ್ರಹಿಸಲು ಪಾಲಿಕೆಯು ಡಿ.7ರಂದು ಇಒಐ ಪ್ರಕಟಣೆ ಹೊರಡಿಸಿತ್ತು. ಇದರನ್ವಯ 19 ಸಾವಿರ ಕೋಟಿ ರೂ. ನಿಧಿ ಸಂಗ್ರಹಿಸಲು ಪಾಲಿಕೆ ಮುಂದಾಗಿತ್ತು. ಆದರೆ, ಶುಕ್ರವಾರ ಮಾರ್ಪಡಿತ ಪ್ರಸ್ತಾಪವನ್ನು ಆಹ್ವಾನಿಸಿ ಉತ್ತರ-ದಕ್ಷಿಣ ಕಾರಿಡಾರ್ ಯೋಜನೆಯ ಭೂಸ್ವಾಧೀನಕ್ಕೆ ವೆಚ್ಚವಾಗುವ 8 ಸಾವಿರ ಕೋಟಿ ರೂ. ಮೊತ್ತಕ್ಕೆ ಮಾತ್ರ ಸಾಲ ಎತ್ತುವಳಿ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ.
ಟನಲ್ ಯೋಜನೆಯಲ್ಲಿ ಎರಡು ಕಾರಿಡಾರ್ ಇದ್ದು, ಮೊದಲ ಹಂತದಲ್ಲಿ 18 ಕಿ.ಮೀ. ಉದ್ದದ ಉತ್ತರ-ದಕ್ಷಿಣ ಕಾರಿಡಾರ್‌ಗೆ ಆದ್ಯತೆ ನೀಡಲಾಗಿದೆ. ಇದು ಹೆಬ್ಬಾಳದ ಎಸ್ಟೀಮ್ ಮಾಲ್ ಜಂಕ್ಷನ್‌ನಿಂದ ಸಿಲ್ಕ್ ಬೋರ್ಡ್‌ನ ಕೆಎಸ್‌ಆರ್‌ಪಿ ಜಂಕ್ಷನ್ ವರೆಗೆ ನಿರ್ಮಾಣವಾಗಲಿದೆ. ಪೂರ್ವ-ಪಶ್ಚಿಮ ಕಾರಿಡಾರ್ ನಂತರದಲ್ಲಿ ಅನುಷ್ಠಾನಕ್ಕೆ ಬರಲಿದ್ದು, ಇದಕ್ಕೆ ಖರ್ಚಾಗುವ ಭೂಸ್ವಾಧೀನ ಹಾಗೂ ಇನ್ನಿತರ ವೆಚ್ಚವನ್ನು ನಂತರದಲ್ಲಿ ಪ್ರತ್ಯೇಕವಾಗಿ ಸಾಲ ಪಡೆಯುವ ಚಿಂತನೆ ಇದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಟನಲ್ ಯೋಜನೆಗೆ ಹೂಡಿಕೆ ಮಾಡಲಾಗುವ ನಿಧಿಗೆ ರಾಜ್ಯ ಸರ್ಕಾರ ಗ್ಯಾರಂಟಿ ನೀಡಿರುವುದರಿಂದ ಭಾರತಿಯ ಅಭಿವೃದ್ಧಿ ಹಣಕಾಸು ಸಂಸ್ಥೆ, ಷೆಡ್ಯೂಲ್ ಪಬ್ಲಿಕ್ ಆ್ಯಂಡ್ ಪ್ರೈವೇಟ್ ಕಮರ್ಷಿಯಲ್ ಬ್ಯಾಂಕ್‌ಗಳು ಸೇರಿ ಯಾವುದೇ ವಿತ್ತೀಯ ಸಂಸ್ಥೆಗಳು ಇಒಐ ಬಿಡ್ ಮಾಡಬಹುದಾಗಿದೆ. ಬಿಡ್ ಸಂಬಂಧ ಪಾಲಿಕೆ ಮುಖ್ಯ ಆಯುಕ್ತರು ಈ ತಿಂಗಳ 23ರಂದು ಪೂರ್ವಭಾವಿ ಸಭೆ ನಡೆಸುವವರಿದ್ದಾರೆ. ಬಿಡ್‌ಅನ್ನು ಪಾಲಿಕೆಯ ವಿಶೇಷ ಆಯುಕ್ತರಿಗೆ (ಹಣಕಾಸು) ಮುಚ್ಚಿದ ಲಕೋಟೆಯಲ್ಲಿ ಮುಂಬರುವ ಜ.3ರ ಸಂಜೆ 4 ಗಂಟೆಯೊಳಗೆ ಸಲ್ಲಿಸಬೇಕಿದ್ದು, ಅಂದೇ ಬಿಡ್ ತೆರೆಯಲಾಗುತ್ತದೆ ಎಂದು ಇಒಐ ತಿದ್ದುಪಡಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.