ಇಸ್ಕಾನ್ ಶ್ರೀಚೈತನ್ಯ ಮಹಾಪ್ರಭುಗಳ ಕನ್ನಡ ಕಾದಂಬರಿ ಲೋಕಾರ್ಪಣೆ ಮಾಡಿದ ರಾಜ್ಯಪಾಲರು

iskon
Published on

ಬೆಂಗಳೂರು: ಹರಿನಾಮ ಸಂಕೀರ್ತನೆಗೆ ಚಳುವಳಿಯ ಸ್ವರೂಪ ನೀಡಿ ವಿಶ್ವದಾದ್ಯಂತ ಕೃಷ್ಣಪ್ರಜ್ಞೆಯನ್ನು ಜಾಗೃತಗೊಳಿಸಿದ ಇಸ್ಕಾನ್ ಸಂಸ್ಥೆಯ ಶ್ರೀ ಚೈತನ್ಯ ಮಹಾಪ್ರಭುಗಳ ಕುರಿತ ಮೊಟ್ಟ ಮೊದಲ ಕನ್ನಡ ಕಾದಂಬರಿ ಭಾನುವಾರ ಲೋಕಾರ್ಪಣೆಯಾಯಿತು. ಕನ್ನಡದ ಖ್ಯಾತ ಕವಿ, ಕಾದಂಬರಿಕಾರ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಡಾ. ನಾ. ಮೊಗಸಾಲೆಯವರು ರಚಿಸಿರುವ ‘ವಿಶ್ವಂಭರ’ ಪುಸ್ತಕವನ್ನು ಇಸ್ಕಾನ್ ಬೆಂಗಳೂರಿನ ಹರೇಕೃಷ್ಣ ಗಿರಿಯಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಲೋಕಾರ್ಪಣೆ ಮಾಡಿದರು. ಈ ವೇಳೆ ಮಾತನಾಡಿದ ರಾಜ್ಯಪಾಲರು, ಶ್ರೀ ಚೈತನ್ಯ ಮಹಾಪ್ರಭುಗಳು ಓರ್ವ ಮಹಾನ್ ಸಂತರು. ಭಕ್ತಿ ಚಳುವಳಿಯ ಮೂಲಕ ಸಮಾಜವನ್ನು ಜಾಗೃತಗೊಳಿಸಿದ ಕ್ರಾಂತಿಪುರುಷ. ಅವರ ಜೀವನದ ಕುರಿತು ಇಂದು ಪ್ರಕಟವಾದ ಕಾದಂಬರಿ ದೇಶದ ಎಲ್ಲ ಭಾಷೆಗಳಿಗೂ ಅನುವಾದವಾಗಬೇಕು. ಪ್ರಭುಪಾದರ ತತ್ವಾದರ್ಶಗಳನ್ನು ಜಾಗತಿಕಗೊಳಿಸಿದ ಶ್ರೀಲ ಪ್ರಭುಪಾದರ ಕಾರ್ಯ ಕೂಡಾ ಅಷ್ಟೇ ಪ್ರಮುಖವಾಗಿದ್ದು, ಅವರನ್ನು ಆದರ್ಶವಾಗಿರಿಸಿಕೊಂಡು ಬೆಂಗಳೂರು ಇಸ್ಕಾನ್ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಶ್ರೀಮಧುಪಂಡಿತ ದಾಸರ ಕಾರ್ಯ ಸುತ್ಯಾರ್ಹವೆಂದು ಶ್ಲಾಸಿದರು. ಕಾರ್ಯಕ್ರಮದ ಸಾನ್ನಿಧ್ಯವನ್ನು ವ್ಯಾಸರಾಜ ಮಠದ ಪೀಠಾಧಿಪತಿ ಶ್ರೀ ವಿದ್ಯಾಶ್ರೀಶ ತೀರ್ಥರು ವಹಿಸಿದ್ದರು. ಇಸ್ಕಾನ್ ಮೈಸೂರಿನ ಅಧ್ಯಕ್ಷರಾದ ಶ್ರೀ ಶ್ಲೋಕಕೃಷ್ಣ ಸ್ವಾಮಿ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಮಲ್ಲೇಪುರಂ ವೆಂಕಟೇಶ, ರಂಗಕರ್ಮಿ ಪ್ರಕಾಶ ಬೆಳವಾಡಿ, ಇಸ್ಕಾನ್ ಬೆಂಗಳೂರಿನ ಉಪಾಧ್ಯಕ್ಷ ಶ್ರೀ ಚಂಚಲಪತಿ ದಾಸರು ಮತ್ತಿತರರು ಪಾಲ್ಗೊಂಡಿದ್ದರು.

ಯುವಜನರಿಗೆ ಸ್ಪೂರ್ತಿಯಾಗುವ ಕೃತಿ

ಚೈತನ್ಯ ಪ್ರಭುಪಾದರ ಜೀವನದರ್ಶನ ಮತ್ತು ಮಾನವೀಯತೆಗೆ ಚೈತನ್ಯರು ನೀಡಿರುವ ಕೊಡುಗೆಗಳನ್ನು ಕನ್ನಡ ಜನತೆಗೆ ತಲುಪಿಸಲು ಶ್ರಮಿಸಿರುವ ಮೊಗಸಾಲೆಯವರು ಅಭಿನಂದನಾರ್ಹರು. ಈ ಪುಸ್ತಕವು ಎಲ್ಲ ಜನರಿಗೆ ಅದರಲ್ಲೂ ವಿಶೇಷವಾಗಿ ಯುವಜನತೆಗೆ ಸ್ಪೂರ್ತಿ ತುಂಬುವುದರ ಜೊತೆಗೆ ಜೀವನದಲ್ಲಿ ಉನ್ನತ ಗುರಿಯನ್ನು ಹೊಂದಲು ಪ್ರೇರೇಪಿಸುವಲ್ಲಿ ಯಶಸ್ವಿಯಾಗಲಿದೆ ಎಂಬ ವಿಶ್ವಾಸವಿದೆ ಎಂದು ಇಸ್ಕಾನ್ ಬೆಂಗಳೂರಿನ ಹಿರಿಯ ಉಪಾಧ್ಯಕ್ಷ ಶ್ರೀ ಚಂಚಲಪತಿ ದಾಸರು ಅಭಿಪ್ರಾಯಿಸಿದ್ದಾರೆ. ಶಾಸ್ತ್ರೀಯ ಭಾಷೆಯಾದ ಕನ್ನಡದಲ್ಲಿ ಮೊದಲ ಬಾರಿಗೆ ಶ್ರೀಚೈತನ್ಯ ಮಹಾಪ್ರಭುಗಳ ಜೀವನಚರಿತ್ರೆಯನ್ನು ರಾಜ್ಯದ ರಾಜ್ಯಪಾಲರು ಲೋಕಾರ್ಪಣೆ ಮಾಡಿದ್ದಾರೆ. ಪ್ರತಿಯೊಬ್ಬರೂ ಈ ಪುಸ್ತಕವನ್ನು ಓದುವ ಮೂಲಕ ಶ್ರೀಕೃಷ್ಣನ ಪವಿತ್ರನಾಮ ಮತ್ತು ಭಾರತೀಯ ಸಂಸ್ಕೃತಿಯನ್ನು ಹರಡುವ ಗುರಿ ಹೊಂದಿದ್ದ ಶ್ರೀ ಚೈತನ್ಯ ಮಹಾಪ್ರಭುಗಳ ಆಂದೋಲನದಲ್ಲಿ ಪಾಲ್ಗೊಳ್ಳಬಹುದು ಎಂದು ಕರೆ ನೀಡಿದರು.

"ವಿಶ್ವವನ್ನು ರಕ್ಷಿಸಿ, ಪೋಷಿಸುವವನು ಎಂಬ ಅರ್ಥವುಳ್ಳ ವಿಶ್ವಂಭರ ನಾಮವು ಮಹಾಪ್ರಭುಗಳ ಧೈರ್ಯವನ್ನು ಸೂಚಿಸುತ್ತದೆ. ಹರಿನಾಮ ಸಂಕೀರ್ತನಾ ಚಳವಳಿಯ ಮೂಲಕ ಭಾರತದಾದ್ಯಂತ ಆಧ್ಯಾತ್ಮಿಕ ಕ್ರಾಂತಿಯನ್ನು ಉಂಟುಮಾಡಿದ ದಾರ್ಶನಿಕ ಚೈತನ್ಯ ಪ್ರಭುಪಾದರ ಜೀವನದ ವಿವರವನ್ನು ಕಾದಂಬರಿಯಲ್ಲಿ ಚಿತ್ರಿಸುವ ಪ್ರಯತ್ನ ಮಾಡಿದ್ದೇನೆ. ಇಸ್ಕಾನ್ ಬೆಂಗಳೂರು ನನ್ನ ಈ ಕಾರ್ಯಕ್ಕೆ ಪ್ರಭುಪಾದರ 18 ಸಾಹಿತ್ಯ ಸಂಪುಟಗಳನ್ನು ನೀಡಿತ್ತು. ನಾನು ಸ್ವತಃ ಪ್ರಭುಪಾದರ ಜನ್ಮಸ್ಥಳವಾದ ನವದ್ವೀಪ ಮಾಯಾಪುರ ಮತ್ತು ಜಗನ್ನಾಥಪುರಿಗೆ ಭೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸಿ ಸುಮಾರು 8 ಸಾವಿರ ಪುಟಗಳನ್ನು ಅಧ್ಯಯನ ಮಾಡಿ ಈ ಕಾದಂಬರಿಯನ್ನು ರಚಿಸಿದ್ದೇನೆ."-ಡಾ.ನಾ.ಮೊಗಸಾಲೆ, ಕಾದಂಬರಿಕಾರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net