

ಪ್ರಶಾಂತ ರಿಪ್ಪನ್ಪೇಟೆ ಬೆಂಗಳೂರು : ಬೆಂಗಳೂರಿನಲ್ಲಿ ವಿವಿಧ ಕಾರಣಗಳಿಗಾಗಿ ರಸ್ತೆ ಅಗೆಯುವುದು ಸಾಮಾನ್ಯ. ಬಿಡಬ್ಲ್ಯೂಎಸ್‌ಎಸ್‌ಬಿ, ಬಿಬಿಎಂಪಿ, ಎಲ್‌ಪಿಜಿ ಸಂಪರ್ಕದ ಪೈಪ್ ಜೋಡಣೆಗಾಗಿ ರಸ್ತೆಯನ್ನು ಅಗೆದು ಕಾಮಗಾರಿ ನಡೆಸಲಾಗುತ್ತದೆ. ಈ ಎಲ್ಲ ಕಾಮಗಾರಿಗಳಿಂದ ಸಂಚಾರ ಸಿಕ್ಕು ಸಮಸ್ಯೆ ಉಂಟಾಗಿ ಜನ ಹೈರಾಣಾಗುವುದು ಸಹಜ. ಆದರೆ ಮತ್ತಿಕೆರೆ ಮುಖ್ಯರಸ್ತೆಯಲ್ಲಿ ಕಳೆದ ಎರಡು ತಿಂಗಳಿನಿಂದ ಕೆಪಿಟಿಸಿಎಲ್ ಬೃಹತ್ ವಿದ್ಯುತ್ ಕೇಬಲ್ ಅಳವಡಿಸುವ ಕಾಮಗಾರಿ ಕೈಗೆತ್ತಿಕೊಂಡಿದ್ದು, ಬೃಹತ್ತಾದ ಗುಂಡಿಗಳನ್ನು ಮುಚ್ಚದೇ ಹಾಗೇ ಬಿಟ್ಟಿರುವುದರಿಂದ ಸಂಚಾರ ಸಿಕ್ಕು ಜೊತೆಗೆ ರಸ್ತೆಬದಿ ವ್ಯಾಪಾರಿಗಳಿಗೆ ನಷ್ಟ ಉಂಟಾಗಿದೆ. ಮತ್ತಿಕೆರೆಯ ಶ್ಯಾಮ್‌ಪ್ರಸಾದ ಮುಖರ್ಜಿ ಮೇಲ್ಸೇತುವೆ ಪಕ್ಕದಲ್ಲಿ ವಿದ್ಯುತ್ ಸ್ಟೇಷನ್ ಇದ್ದು, ಇಲ್ಲಿಗೆ ಸಂಪರ್ಕಿಸುವ ನೂತನ ಕೇಬಲ್ ಅಳವಡಿಕೆ ಕಾಮಗಾರಿಯನ್ನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಕೈಗೆತ್ತಿಕೊಂಡಿದೆ. ಸರಿಸುಮಾರು ನಾಲ್ಕೈದು ಅಡಿ ಆಳ, ಎರಡೂವರೆ ಅಡಿ ಅಗಲದ ಬೃಹತ್ ಟ್ರಂಚ್ ತೆಗೆದು ಮಧ್ಯ ಮಧ್ಯದಲ್ಲಿ ಕೆಲವು ಕಡೆ ಮಾತ್ರ ಮುಚ್ಚಲಾಗಿದೆ. ಬಹಳ ಕಡೆ ಓಪನ್ ಆಗಿ ಹಾಗೆಯೇ ಉಳಿದಿವೆ. ಮೊದಲೇ ಕಿರಿದಾದ ರಸ್ತೆ ಇದ್ದು, ಜೊತೆಗೆ ಗುಂಡಿ ಪಕ್ಕದಲ್ಲಿ ಕೆಪಿಟಿಸಿಎಲ್ ಬ್ಯಾರಿಕೇಡ್ ಅಳವಡಿಸಿರುವುದು ಒಂದರ ಹಿಂದೆ ಒಂದರಂತೆ ವಾಹನಗಳು ಸಂಚರಿಸಬೇಕಾಗಿದೆ. ಇದರಿಂದ ಸಂಚಾರ ದಟ್ಟಣೆ ಹೆಚ್ಚಾಗುವುದರ ಜೊತೆಗೆ ರಸ್ತೆಯ ಉದ್ದಕ್ಕೂ ಇರುವ ವಿವಿಧ ವ್ಯಾಪರಸ್ಥರಿಗೆ ಗಿರಾಕಿಗಳು ಬರುವುದು ಕಷ್ಟವಾಗಿದೆ. ಒಂದು ಕಡೆ ದೊಡ್ಡ ಗುಂಡಿಯನ್ನು ದಾಟುವುದು ಅಸಾಧ್ಯದಾದರೆ ಮತ್ತೊಂದು ಕಡೆ ವಾಹನ ನಿಲ್ಲಿಸಲು ಅವಕಾಶವಿಲ್ಲದೆ ಅನಿವಾರ್ಯವಾಗಿ ಗಿರಾಕಿಗಳು ಮುಂದೆ ಹೋಗುತ್ತಿದ್ದು, ಇದರಿಂದ ನಮಗೆ ನಷ್ಟವಾಗುತ್ತಿದೆ ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ. ಇನ್ನು ರಸ್ತೆ ಬದಿಯಲ್ಲಿ ತಳ್ಳುವ ಗಾಡಿ ನಿಲ್ಲಿಸಿಕೊಂಡು ಸೊಪ್ಪು, ತರಕಾರಿ, ಹಣ್ಣು ಮಾರುತ್ತಿದ್ದ ಬೀದಿಬದಿ ವ್ಯಾಪಾರಿಗಳಂತು ಸ್ಥಳವನ್ನೇ ಖಾಲಿ ಮಾಡಿಕೊಂಡು ಹೋಗಿದ್ದಾರೆ.
ಕೆಪಿಟಿಸಿಎಲ್ ಅಧಿಕಾರಿಗಳು ಸಾರ್ವಜನಿಕರಿಗೆ ನೇರವಾಗಿ ಸಂಪರ್ಕಕ್ಕೆ ಸಿಕ್ಕುತ್ತಿಲ್ಲ. ಬೆಸ್ಕಾಂ ಅಧಿಕಾರಿಗಳನ್ನ ಕೇಳಿದರೆ ಕಾಮಗಾರಿಗೂ ನಮಗೂ ಸಂಬಂಧವಿಲ್ಲ ಎಂದು ನುಣುಚಿಕೊಳ್ಳುತ್ತಿದ್ದಾರೆ. ಕಾಮಗಾರಿಯನ್ನು ಗುತ್ತಿಗೆಪಡೆದವರು ಸಾರ್ವಜನಿಕರಿಗೆ ದಿನಕ್ಕೊಂದು ಉತ್ತರ ನೀಡುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ. ಮೂಲದಲ್ಲಿ ಕೇಬಲ್ ಅಳವಡಿಕೆ ಕಾಮಗಾರಿಯಲ್ಲೇ ದೋಷ ಉಂಟಾಗಿದ್ದು, ಆದ್ದರಿಂದ ಇನ್ನೂ ವಿಳಂಬವಾಗುತ್ತದೆ ಎಂದು ಹೇಳಲಾಗುತ್ತಿದೆ. ಇನ್ನೊಂದೆಡೆ ಗುಂಡಿ ಮುಚ್ಚಿರುವ ಕಡೆಯಲ್ಲಿ ಇತ್ತೀಚೆಗೆ ಚಂಡಮಾರುತದಿಂದ ಸುರಿದ ಮಳೆಯಿಂದ ಒಂದು ಅಡಿಯಷ್ಟು ಮಣ್ಣು ಕುಸಿದಿದ್ದು, ವಾಹನ ಸವಾರರು ಕಷ್ಟ ಹೇಳತೀರದು. ಮತ್ತೊಂದೆಡೆ ಕೇಬಲ ಅಳವಡಿಸಿದ ನಂತರ ಬೃಹತ್ ಕೇಬಲ್ ರೋಲರ್‌ಗಳನ್ನು ರಸ್ತೆ ಬದಿಯಲ್ಲೇ ಬಿಟ್ಟಿದ್ದು, ಒಂದೇ ವೇಳೆ ಎರಡು ವಾಹನಗಳು ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಗುಂಡಿಮುಚ್ಚಲು ಮರಳು ಬಳಸಿದ್ದು, ಮಳೆ ನಿಂತಮೇಲೆ ಬಿಸಿಲಿಗೆ ಮಿತಿಮೀರಿದ ಧೂಳು ಉಂಟಾಗಿದೆ. ಬೃಹತ್ ವಾಹನಗಳ ಹಿಂದೆ ಹೋಗುವ ದ್ವಿಚಕ್ರ ವಾಹನ ಸವಾರರ ಕಣ್ಣಿಗೆ ಮರಳು ಬೀಳುತ್ತಿದ್ದು ಅಪಾಯಕ್ಕೆ ಕಾರಣವಾಗುತ್ತಿದೆ. ಧೂಳಿನಲ್ಲಿ ದಿನಪೂರ್ತಿ ನಿಂತು ಕೆಲಸ ಮಾಡುವುದು ಕಷ್ಟವಾಗಿದೆ ಎಂದು ಸಂಚಾರ ಪೊಲೀಸರು ಕಳವಳ ವ್ಯಕ್ತಪಡಿಸಿದ್ದಾರೆ. ಗುಂಡಿ ತೆಗೆಯುವಾಗ ತೆಗೆದ ಮಣ್ಣು ಮತ್ತು ಗುಂಡಿಮುಚ್ಚಲು ತಂದ ಮರಳನ್ನು ುಟ್‌ಪಾತ್ ಮೇಲೆ ಸುರಿಯಲಾಗಿದ್ದು, ಪಾದಾಚಾರಿಗಳಿಗೆ ಓಡಾಡುವುದಕ್ಕೆ ಸ್ಥಳವೂ ಇಲ್ಲದಂತಾಗಿದೆ.