ಇಸ್ಕಾನ್ ಹರೇಕೃಷ್ಣ ಗಿರಿಯಲ್ಲಿ ವೈಭವದ ಬ್ರಹ್ಮರಥೋತ್ಸವ

Iskcon - 1
Published on

ಬೆಂಗಳೂರು: ಇಸ್ಕಾನ್‌ನ ಪ್ರಮುಖ ಉತ್ಸವವಾಗಿರುವ ವಾರ್ಷಿಕ ಬ್ರಹ್ಮರಥೋತ್ಸವ ಮತ್ತು ರಜತ ಮಹೋತ್ಸವ ಬುಧವಾರ ವೈಭವಯುತವಾಗಿ ನೆರವೇರಿತು. ಉತ್ಸವ ನಿಮಿತ್ತ ಶ್ರೀ ರಾಧಾಕೃಷ್ಣಚಂದ್ರ, ಶ್ರೀಕೃಷ್ಣ ಬಲರಾಮ ಮತ್ತು ಶ್ರೀನಿತಾ ಗೌರಂಗ ವಿಗ್ರಹಗಳನ್ನು ಬ್ರಹ್ಮರಥದಲ್ಲಿ ಇರಿಸಿ ದೇವಾಲಯದ ಸುತ್ತಲೂ ಮೆರವಣಿಗೆ ನಡೆಸಲಾಯಿತು.

ಹರೇಕೃಷ್ಣಗಿರಿಯ ದೇವಾಲಯದ ಎಲ್ಲ ವಿಗ್ರಹಗಳನ್ನು 1997ರಲ್ಲಿ ಚೈತ್ರ ಮಾಸದ ಪೂರ್ವಾಷಾಢ ನಕ್ಷತ್ರದ ಅಷ್ಟಮಿಯಂದು ಪ್ರತಿಷ್ಠಾಪಿಸಲಾಯಿತು. ಇದೀಗ ದೇವಾಲಯದ ರಜತ ಮಹೋತ್ಸವದ ನೆನಪಿಗಾಗಿ ಬ್ರಹ್ಮೋತ್ಸವ ಆಚರಿಸಲಾಯಿತು. ಶ್ರೀ ರಾಧಾಕೃಷ್ಣ ಚಂದ್ರರನ್ನುವಿಶೇಷವಾಗಿ ಅಲಂಕರಿಸಿ, 108 ರೀತಿಯ ನಾನಾ ಬಗೆಯ ವಿಶೇಷ ನೈವೇದ್ಯಗಳನ್ನು ಅರ್ಪಿಸಿ ನಂತರ ಭಕ್ತರಿಗೆ ವಿತರಿಸಲಾಯಿತು.

ಏ. 21 ರಂದು ಧ್ವಜಾರೋಹಣದೊಂದಿಗೆ (ಶ್ರೀ ಗರುಡ ಪಟ ಆರೋಹಣ) ಪ್ರಾರಂಭವಾದ 13 ದಿನಗಳ ಧಾರ್ಮಿಕ ಕಾರ್ಯಕ್ರಮದಲ್ಲಿ ದೇಶಾದ್ಯಂತ ಆಧ್ಯಾತ್ಮಿಕ ನಾಯಕರು ಸೇರಿ ಲಕ್ಷಾಂತರ ಭಕ್ತರು ಭಾಗವಹಿಸಿದ್ದರು. ನಿತ್ಯವೂ ದೇವಾಲಯದ ಸುತ್ತಲೂ ಶ್ರೀ ರಾಧಾ ಕೃಷ್ಣ ಚಂದ್ರರ ಉತ್ಸವ ಮೂರ್ತಿಗಳ ಮೆರವಣಿಗೆ ನಡೆಸಲಾಯಿತು. ಜೊತೆಗೆ ನೃತ್ಯ ಮತ್ತು ಸಂಗೀತ ಸೇವೆಯಂತಹ ಸಾಂಸ್ಕೃತಿಕ ಕಾರ್ಯಕ್ರಮ ಸಹ ಹಮ್ಮಿಕೊಳ್ಳಲಾಗಿತ್ತು. ವಿಗ್ರಹಗಳಿಗೆ ಡೋಲೋತ್ಸವ ಸೇವೆ, ಭಜನೆ, ಉಯ್ಯಲೋತ್ಸವ ನಡೆಸಲಾಯಿತು.

ಮಹಾಕುಂಭಾಭಿಷೇಕ: ಗುರುವಾರ (ಮೇ 2ರಂದು) ಮೂಲ ವಿಗ್ರಹಗಳಿಗೆ ಮಹಾಕುಂಭಾಭಿಷೇಕ ಅರ್ಪಿಸಲಾಗುತ್ತದೆ. 12 ವರ್ಷಗಳಿಗೊಮ್ಮೆ ನಡೆಸಲಾಗುವ ಈ ಅಭಿಷೇಕ ಕಾರ್ಯಕ್ರಮದ ಮರುದಿನ ದೇವರಿಗೆ ಕಲ್ಯಾಣಿಯಲ್ಲಿ ಅದ್ದೂರಿಯಾಗಿ ತೆಪ್ಪೋತ್ಸವ ನಡೆಯಲಿದ್ದು, ಮೇ 3ರಂದು ಧ್ವಜಾವರೋಹಣದೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ.

ಕೋಟ್:

ವಾರ್ಷಿಕ ಬ್ರಹ್ಮೋತ್ಸವ ಮತ್ತು ರಜತ ಮಹೋತ್ಸವ ಆಚರಣೆಯಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸುವುದನ್ನು ನೋಡಿ ನನಗೆ ಅಪಾರ ಸಂತೋಷವಾಗಿದೆ. ಹರೇಕೃಷ್ಣಗಿರಿಯ ಮೇಲೆ ನೆಲೆಸಿರುವ ಶ್ರೀ ರಾಧಾಕೃಷ್ಣ ಚಂದ್ರರು ಎಲ್ಲರಿಗೂ ಉತ್ತಮ ಅರೋಗ್ಯ, ಮನಶಾಂತಿ, ಸಂತೋಷವನ್ನು ಕರುಣಿಸಲಿ ಎಂದು ಪ್ರಾರ್ಥಿಸುವೆ.

-ಮಧುಪಂಡಿತ ದಾಸ, ಇಸ್ಕಾನ್ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net