

ಉಡುಪಿ: ಅಂಕೋಲಾ ತಾಲೂಕಿನ ಶಿರೂರು ಗ್ರಾಮದಲ್ಲಿ ಮಣ್ಣು ಕುಸಿತ ದುರ್ಟನೆಯಲ್ಲಿ ಲಾರಿ ಸಮೇತ ನಾಪತ್ತೆಯಾದ ಚಾಲಕನ ಪತ್ತೆಗೆ ಮುಳುಗುತಜ್ಞ, ಆಪದ್ಭಾಂಧವ, ಮಲ್ಪೆಯ ಈಶ್ವರ್ ಮಲ್ಪೆ ಮತ್ತು ತಂಡ ಶಿರೂರಿಗೆ ಶನಿವಾರ ತೆರಳಿದೆ.
ಶಿರೂರು ದುರಂತದಲ್ಲಿ ಈವರೆಗೆ 8 ಜನರ ಮೃತದೇಹ ಪತ್ತೆಯಾಗಿದ್ದು, ನದಿಯಲ್ಲಿ ಸಿಲುಕಿರುವ ಲಾರಿ ಚಾಲಕ ಅರ್ಜುನ್ ಮತ್ತು ಇತರ ಇಬ್ಬರು ಇನ್ನೂ ಪತ್ತೆ ಆಗಿಲ್ಲ. ಇದೀಗ ನದಿಯೊಳಗೆ ಲಾರಿ ಇದೆ ಎಂದು ಶಂಕಿಸಲಾದ ಸ್ಥಳದಲ್ಲಿ ಲಾರಿ ಇದೆಯೇ ಅಥವಾ ಇಲ್ಲವೇ ಎನ್ನುವುದನ್ನು ಖಾತ್ರಿಪಡಿಸಲು ಮತ್ತು ಲಾರಿ ಒಳಗಡೆ ಇರುವ ಚಾಲಕನನ್ನು ಹೊರತೆಗೆಯಲು ಈಶ್ವರ್ ಮಲ್ಪೆ ತಂಡ ಕಾರ್ಯಾಚರಣೆ ನಡೆಸಲಿದೆ. ಅಲ್ಲಿನ ಪೊಲೀಸರಿಂದ ಕರೆ ಬಂದಿರುವ ಹಿನ್ನೆಲೆಯಲ್ಲಿ 8 ಜನರ ನಮ್ಮ ತಂಡ ಶಿರೂರಿಗೆ ತೆರಳುತ್ತಿದ್ದು, ಎಲ್ಲ ದೇವ-ದೈವಗಳ ಹಾಗೂ ಜನರ ಆಶೀರ್ವಾದದಿಂದ ಕಾರ್ಯಾಚರಣೆ ಯಶ ಕಾಣಲಿ ಎಂದು ಈಶ್ವರ್ ಮಲ್ಪೆ ಆಶಿಸಿದ್ದಾರೆ.