ಯೋಗೇಶ್ವರ್​​ಗೆ ಸೋಲಿನ ಭಯ? CPY ಬಗ್ಗೆ ಡಿ.ಕೆ.ಸುರೇಶ್​ ಹೇಳಿದ್ದಿಷ್ಟು

CPY
Published on

ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲಿದೆ. ಕಾರ್ಯಕರ್ತರು ಬೆಟ್ಟಿಂಗ್ ಜಾಲಕ್ಕೆ ಸಿಲುಕಿ ತೊಂದರೆ ಅನುಭವಿಸದಿರಲಿ ಎಂಬ ಉದ್ದೇಶದಿಂದ ಯೋಗೇಶ್ವರ್ ಹೇಳಿಕೆ ನೀಡಿರಬಹುದು ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ತಿಳಿಸಿದರು.

ಸದಾಶಿವನಗರ ನಿವಾಸದಲ್ಲಿ ಶುಕ್ರವಾರ(ನ.15) ಸುದ್ದಿಗಾರರ ಜತೆ ಮಾತನಾಡಿದರು.

ಚನ್ನಪಟ್ಟಣ ಉಪಚುನಾವಣೆ ಸಂಬಂಧ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್(CPY) ಫಲಿತಾಂಶಕ್ಕೂ ಮುನ್ನವೇ ಸೋಲುವ ಬಗ್ಗೆ ನೀಡಿರುವ ಹೇಳಿಕೆ ಬಗ್ಗೆ ಕೇಳಿದಾಗ ಡಿಕೆ ಸುರೇಶ್​ ಮಾತಿದು. ಒಬ್ಬೊಬ್ಬರ ಭಾವನೆ ಒಂದೊಂದು ರೀತಿ ಇದೆ. ಅವರು ಹಾಗೂ ನಮಗೆ ಗೆಲ್ಲುವ ವಿಶ್ವಾಸವಿದೆ. ನಮ್ಮ ಕಾರ್ಯಕರ್ತರು ಅನಗತ್ಯವಾಗಿ ಬೆಟ್ಟಿಂಗ್ ಕಟ್ಟಿಕೊಂಡು ತೊಂದರೆ ಮಾಡಿಕೊಳ್ಳುತ್ತಾರೋ?, ತಮ್ಮಿಂದ ಅವರ ಮನೆಗಳಲ್ಲಿ ಆರ್ಥಿಕ ಸಂಕಷ್ಟವಾಗುತ್ತದೆಯೋ? ಎಂದು ಆ ರೀತಿ ಹೇಳಿರಬಹುದು ಎಂದರು.

ದೇವೇಗೌಡರ ಬಗ್ಗೆ ವೈಯಕ್ತಿಕ ಗೌರವವಿದೆ

ಒಕ್ಕಲಿಗ ಸಮುದಾಯ ದೇವೇಗೌಡರ ಕುಟುಂಬದ ಮೇಲೆ ಹೆಚ್ಚಿನ ಒಲವು ಇಟ್ಟಿದ್ದಾರೆ ಎಂಬ ಸಿಪಿವೈ ಹೇಳಿಕೆಗೆ ಪ್ರತಿಕ್ರಿಯಿಸಿ, ದೇವೇಗೌಡರು ದೇಶದ ಪ್ರಧಾನಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಸಮಾಜದಲ್ಲಿ ಹಾಗೂ ದಕ್ಷಿಣ ಭಾರತದಿಂದ ಅತ್ಯುನ್ನತ ಸ್ಥಾನಕ್ಕೆ ಏರಿದ ನಾಯಕ. ಹೀಗಾಗಿ ಸಮಾಜದವರು ಅವರ ಮೇಲೆ ಗೌರವ ಇಟ್ಟುಕೊಂಡಿದ್ದಾರೆ. ನನಗೂ ಅವರ ಮೇಲೆ ಗೌರವವಿದೆ. ರಾಜಕಾರಣ ವಿಚಾರ ಬಂದಾಗ ನಾನು ಹೋರಾಟ ಮಾಡುತ್ತೇನೆ. ಅದರ ಹೊರತಾಗಿ ವೈಯಕ್ತಿಕವಾಗಿ ನನಗೆ ಅವರ ಮೇಲೆ ಗೌರವವಿದೆ ಎಂದು ತಿಳಿಸಿದರು.

ಜಮೀರ್​ ಹೇಳಿಕೆಯು ಪ್ರತಿಪಕ್ಷಗಳಿಗೆ ಇದು ಅಸ್ತ್ರವಾಯಿತೇ ಎಂದು ಕೇಳಿದಾಗ, ಇದು ಮಾಧ್ಯಮಗಳ ಸೃಷ್ಟಿ. ಪ್ರತಿಪಕ್ಷಗಳು ಅನೇಕ ಸಂದರ್ಭದಲ್ಲಿ ಅನೇಕ ಹೇಳಿಕೆ ನೀಡುತ್ತವೆ. ಡಿ.ಕೆ. ಶಿವಕುಮಾರ್ ಕಳ್ಳ, ಲೂಟಿಕೋರ, 100 ರೂ.ಗೆ ಕೂಲಿಗೆ ಇದ್ದ ಎಂದು ವಿರೋಧ ಪಕ್ಷಗಳು ಆರೋಪ ಮಾಡಿದಾಗ, ಅವರು ಎಲ್ಲಿ ಕದ್ದಿದ್ದಾರೆ ಎಂದು ಮಾಧ್ಯಮಗಳು ಏಕೆ ಪ್ರಶ್ನೆ ಮಾಡಲಿಲ್ಲ ಎಂದು ಮಾಧ್ಯಮಗಳ ಮೇಲೆ ಹರಿಹಾಯ್ದರು.

ರಾಜಕೀಯದಲ್ಲಿ ನಮ್ಮನ್ನು ಅವರು ಟೀಕಿಸುವುದು, ಅವರನ್ನು ನಾವು ಟೀಕಿಸುವುದು ಸರ್ವೇ ಸಾಮಾನ್ಯ. ಈ ಚುನಾವಣೆ ವೈಯಕ್ತಿಕ ಹೇಳಿಕೆ ಹೊರತಾಗಿ ಅಭಿವೃದ್ಧಿ ವಿಚಾರ, ರಾಜಕೀಯ ದೃಷ್ಟಿಕೋನ, ಜನರ ಕಷ್ಟ ಸುಖದ ಬಗ್ಗೆ ಚರ್ಚೆ ಮಾಡಲಿಲ್ಲ. ಕೇವಲ ವೈಯಕ್ತಿಕ ಟೀಕೆಗಳ ಮೇಲೆ ರಾಜಕೀಯ ಮಾಡಿದರು. ಮೋದಿ, ಕುಮಾರಸ್ವಾಮಿ, ದೇವೇಗೌಡರು ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಚರ್ಚೆ ಮಾಡಲಿಲ್ಲ. ಸಿದ್ದರಾಮಯ್ಯ ಹಾಗೂ ಡಿಕೆಶಿ ಬಗ್ಗೆ ಬಾಯಿಗೆ ಬಂದಂತೆ ಬೈದಿದ್ದು ಬಿಟ್ಟರೆ ಬೇರೆ ಮಾಡಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net