

| ಮಂಜುನಾಥ ಕೋಳಿಗುಡ್ಡ ಬೆಳಗಾವಿ
ಹೆತ್ತವರು ಯಾರೋ ಗೊತ್ತಿಲ್ಲ. ಜಾತಿ, ಧರ್ಮವಂತೂ ಯಾವುದೆಂದು ಮೊದಲೇ ತಿಳಿದಿಲ್ಲ. ಅನಾಥಾಲಯಗಳೇ ಈ ಇವರ ಪಾಲಿಗೆ ಸರ್ವಸ್ವ. ಇಂತಹ ಅನಾಥ ಮಕ್ಕಳಿಗೆ ಶೈಕ್ಷಣಿಕ ಮೀಸಲಾತಿ, ಉದ್ಯೋಗ ನೀಡಿ ಸಮಾಜದ ಮುಖ್ಯವಾಹಿನಿಗೆ ತರಲು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಮುಂದಾಗಿದೆ.
ರಾಜ್ಯದಲ್ಲಿ ಸರ್ಕಾರಿ, ಖಾಸಗಿ ಸೇರಿ 240ಕ್ಕೂ ಅಧಿಕ ಅನಾಥಾಲಯಗಳಿದ್ದು, 7,540ಕ್ಕೂ ಅಧಿಕ ಅನಾಥರಿದ್ದಾರೆ. ಇವರಲ್ಲಿ ಕೆಲವರು ಪದವಿ, ಪಿಯುಸಿ, ಎಸ್ಎಸ್ಎಲ್ಸಿ ಮುಗಿಸಿದವರೂ ಇದ್ದಾರೆ. ಆದರೆ ಇವರಾರಿಗೂ ಸರ್ಕಾರದ ವಿವಿಧ ಸವಲತ್ತು ಲಭಿಸುತ್ತಿರಲಿಲ್ಲ. ಮೀಸಲಾತಿ ಸೌಲಭ್ಯ ಸಿಗದಿರುವುದು, ಆರ್ಥಿಕ ಸಮಸ್ಯೆ ಹಾಗೂ ಇನ್ನಿತರ ಕಾರಣಗಳಿಂದ ಅರ್ಧದಲ್ಲಿಯೇ ಅನೇಕರು ಶಿಕ್ಷಣ ಮೊಟಕುಗೊಳಿಸಿ ಅಲ್ಲಲ್ಲಿ ದುಡಿದು ಬದುಕು ಸಾಗಿಸುತ್ತಿದ್ದಾರೆ. ಹೀಗಾಗಿ ಅನಾಥ ಮಕ್ಕಳಿಗೂ ಸೂಕ್ತ ವೇದಿಕೆ ಕಲ್ಪಿಸಿ, ಅವರೂ ಸಮಾಜದಲ್ಲಿ ಉತ್ತಮ ಬದುಕು ನಿರ್ವಹಿಸುವಂತಾಗಲು ಆಯೋಗ ನಿರ್ಧರಿಸಿದ್ದು, ಆ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡುತ್ತಿದೆ.
ಆಯೋಗದಿಂದ ಅಧ್ಯಯನ: ತಂದೆ-ತಾಯಿ ಇಲ್ಲದಿದ್ದರೂ ಎಲ್ಲ ಮಕ್ಕಳಿಗೆ ಸಿಗುವಂತೆ ಗುಣಮಟ್ಟದ ಶಿಕ್ಷಣ, ಸರ್ಕಾರಿ ಉದ್ಯೋಗ ನೀಡಿ ಅನಾಥರಿಗೂ ಬದುಕು ನೀಡುವ ಮಹತ್ವಾಕಾಂಕ್ಷೆಯನ್ನು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ಹೊಂದಿದ್ದಾರೆ. ಆ ನಿಟ್ಟಿನಲ್ಲಿ ಅವರು, ಆಯೋಗದ ಸದಸ್ಯರೊಂದಿಗೆ ರಾಜ್ಯದಲ್ಲಿರುವ ಅನಾಥಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಅಲ್ಲಿರುವ ಮಕ್ಕಳ ಸ್ಥಿತಿ-ಗತಿ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ತಮಿಳುನಾಡು ಮತ್ತು ತೆಲಂಗಾಣ ಸರ್ಕಾರಗಳು ಅಲ್ಲಿನ ಅನಾಥ ಮಕ್ಕಳ ಅಭ್ಯುದಯಕ್ಕಾಗಿ ಜಾರಿಗೆ ತಂದಿರುವ ಮೀಸಲಾತಿ ಕುರಿತಂತೆಯೂ ಅಧ್ಯಯನ ನಡೆಸಿದ್ದಾರೆ.
ಅನಾಥ ಮಕ್ಕಳಿಗೂ ಉತ್ತಮ ಭವಿಷ್ಯ ಲಭಿಸುವಂತಾಗಲು ಶೈಕ್ಷಣಿಕ, ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವುದು ಅವಶ್ಯಕವಾಗಿದೆ. ಆಯೋಗದ ಮೂಲಕ ಆಸರೆ ಆಗಬೇಕೆಂದು ತೀರ್ವನಿಸಲಾಗಿದೆ. ಹೀಗಾಗಿ ರಾಜ್ಯದ ಎಲ್ಲ ಅನಾಥಾಲಯಗಳಿಗೆ ತೆರಳಿ ಅಲ್ಲಿನ ಮಕ್ಕಳ ಸ್ಥಿತಿ-ಗತಿ ಪರಿಶೀಲಿಸುತ್ತಿದ್ದೇನೆ. ಶೀಘ್ರದಲ್ಲಿಯೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. | ಕೆ.ಜಯಪ್ರಕಾಶ ಹೆಗ್ಡೆ ಅಧ್ಯಕ್ಷ, ರಾಜ್ಯ ಹಿಂದುಳಿದ ವರ್ಗಗಳ ಆಯೋಗ
ಕಾನೂನುಬಾಹಿರ ಚಟುವಟಿಕೆ: ಅನಾಥಾಲಯಗಳಲ್ಲಿ 25 ವಯಸ್ಸಿನವರೆಗೆ ಮಾತ್ರ ನೋಡಿಕೊಳ್ಳಲಾಗುತ್ತದೆ. ದೊಡ್ಡವರಾಗಿ ಅನಾಥಾಲಯ ಗಳಿಂದ ಹೊರಬಂದ ಬಳಿಕ ಬಹುತೇಕರು ಉದ್ಯೋಗಾವಕಾಶ ಸಿಗದಿರುವುದರಿಂದ ಕಾನೂನುಬಾಹಿರ ಚಟುಚಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಅನಾಥ ಹೆಣ್ಣು ಮಕ್ಕಳನ್ನು ಬೇರೆಡೆ ಸಾಗಿಸುವ ಕೆಲಸವೂ ವ್ಯವಸ್ಥಿತವಾಗಿ ನಡೆಯುತ್ತಿದೆ. ಕೆಲ ಮಕ್ಕಳು ಹೋಟೆಲ್, ಮದ್ಯದ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನೂ ಕೆಲ ಅನಾಥ ಮಕ್ಕಳು ದತ್ತು ಪಡೆದುಕೊಂಡವರ ಬಳಿ ಮನೆಗೆಲಸ ಮಾಡಿಕೊಂಡು ಇರುವುದೂ ತಿಳಿದುಬಂದಿದೆ. ಇಂತಹ ಅನಾಥರಿಗೆ ಪುನರ್ವಸತಿ ಕೇಂದ್ರಗಳ ಸೌಲಭ್ಯ ನೀಡುವಂತೆ ಅನೇಕ ಬಾರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಇದೀಗ ಆಯೋಗವೇ ಮೀಸಲಾತಿ ಸೌಲಭ್ಯ ಕಲ್ಪಿಸಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಆರ್ಥಿಕ ಮತ್ತು ಸಾಂಖಿಕ ಇಲಾಖೆ ನಿವೃತ್ತ ಅಧಿಕಾರಿ ಆರ್.ಜಿ. ಬನಶಂಕರಿ.