

ಹವಾಮಾನ ವೈಪರೀತ್ಯ ಮತ್ತೊಮ್ಮೆ ಮಾವು ಬೆಳೆಗಾರರನ್ನು ಕಾಡುತ್ತಿದೆ. ಮುಂಗಾರು ಕೈಕೊಟ್ಟರೂ ಈ ಬಾರಿ ಮಾವಿನ ಫಸಲಿಗೆ ಕೊರತೆ ಇಲ್ಲ ಎನ್ನುತ್ತಿದ್ದ ರೈತರಿಗೆ ಹವಾಮಾನ ವೈಪರೀತ್ಯದ ಆತಂಕ ಎದುರಾಗಿದೆ.
ಜಿಲ್ಲೆಯಷ್ಟೇ ಅಲ್ಲ, ಇಡೀ ರಾಜ್ಯಾದ್ಯಂತ ಮುಂಗಾರು-ಹಿಂಗಾರು ಸಂಪೂರ್ಣ ಕೈಕೊಟ್ಟಿದ್ದರೂ ಅಷ್ಟಿಷ್ಟು ಬಿದ್ದ ಮಳೆಯಿಂದಲೇ ಜೀವ ಹಿಡಿದಿರುವ ಮಾವಿನ ಮರಗಳು ಹೂವು ಬಿಡಲು ಆರಂಭಿಸಿವೆ. ಆದರೆ ವಾತಾವರಣದಲ್ಲಿನ ಬದಲಾವಣೆಯಿಂದ ಮುಂದೇನಾಗುವುದೋ ಎನ್ನುವ ಭಯ ರೈತರನ್ನು ಕಾಡುತ್ತಿದೆ.
ರಾಜ್ಯಕ್ಕೆ ಜಿಲ್ಲೆಯೇ ಮೊದಲು: ರಾಜ್ಯದಲ್ಲಿ ಮೊದಲು ಮಾವು ಮಾರುಕಟ್ಟೆಗೆ ಬರುವುದು ರಾಮನಗರದಿಂದಲೇ. 27 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಹೆಚ್ಚಿನ ಪ್ರಮಾಣ ಬಾದಾಮಿ ಜಾತಿಯ ಆಗಿದ್ದು, ಜಿಲ್ಲೆಯ ವಿವಿಧ ಭಾಗಗಳಲ್ಲಿ ಈಗಾಗಲೇ ಹೂವು ಬಿಡಲು ಆರಂಭಿಸಿದೆ. ಇಂತಹ ಸಂದರ್ಭದಲ್ಲಿ ಮುಂಜಾನೆ ಇಬ್ಬನಿ ಹಾಗೂ ಹಗಲು ಹೊತ್ತಿನಲ್ಲಿ ಬಿಸಿಲು ಇದ್ದಷ್ಟು ಹೂವು ಹೆಚ್ಚಾಗಲಿದ್ದು, ಫಸಲು ಉತ್ತಮವಾಗಿರುತ್ತದೆ. ಆದರೆ ಅಕಾಲಿಕ ಮಳೆ ಮತ್ತು ಕಳೆದ ಕೆಲ ವಾರಗಳಿಂದ ಬೀಸುತ್ತಿರುವ ಶೀತಗಾಳಿ ರೈತರ ಲೆಕ್ಕಾಚಾರವನ್ನು ತಲೆಕೆಳಗೆ ಮಾಡುತ್ತಿದೆ.
ಕಳೆದ ಬಾರಿಯೂ ಸಂಕಷ್ಟ: ಕಳೆದ ವರ್ಷ ಬಿದ್ದ ಕುಂಭದ್ರೋಣ ಮಳೆಗೆ ಮಾವಿನ ಬೆಳೆ ರೈತರ ಕೈ ತಪ್ಪಿತ್ತು. ಜತೆಗೆ ಹೂ ಬಿಡುವ ಕಾಲದಲ್ಲಿ ಉಂಟಾದ ಅಕಾಲಿಕ ಮಳೆ, ಶೀತಗಾಳಿ ಮಾವಿನ ಹೂವು ಕಪ್ಪು ಬಣ್ಣಕ್ಕೆ ತಿರುಗುವಂತೆ ಮಾಡಿತ್ತು. ಬಹುತೇಕ ಎಲ್ಲ ಬೆಳೆಗಾರರು ಹೂವು ರಕ್ಷಣೆ ಮಾಡಿಕೊಳ್ಳಲು ಹಲವು ಬಾರಿ ಔಷಧ ಸಿಂಡಪಣೆ ಮಾಡಿದ್ದರೂ ಸಹ ಹತೋಟಿಗೆ ಬರಲೇ ಇಲ್ಲ.
ಬೂದು ರೋಗ ಮತ್ತು ಕೀಟ ಬಾಧೆೆಯಿಂದ ಬೆಳೆ ರಕ್ಷಣೆಗಾಗಿ ಔಷಧ ಸಿಂಪಡಣೆ ಹಾಗೂ ತೋಟಕ್ಕೆ ಗೊಬ್ಬರ ಮತ್ತು ನಿರ್ವಹಣೆ ಸೇರಿದಂತೆ ಪ್ರತಿ 10 ಎಕರೆ ಜಮೀನಿಗೆ ಅಂದಾಜು 3 ಲಕ್ಷ ರೂ. ಖರ್ಚಾಗುತ್ತಿದೆ. ಕಳೆದ ಬಾರಿ ಎರಡು ಬಾರಿ ಹೂವು ಬಿಟ್ಟ ಕಾರಣ ಬೆಲೆ ಸಿಗದೆ ರೈತರು ನಷ್ಟ ಅನುಭವಿಸಿದ್ದರು. ಎರಡನೇ ಬಾರಿ ಹೂವು ಬಿಟ್ಟ ಕಾರಣ, ಕೋಲಾರ ಸೇರಿದಂತೆ ರಾಜ್ಯದ ಇತರೆ ಭಾಗಗಳಿಂದ ಬರುವ ಮಾವಿನ ಜತೆಗೆ ದರಸಮರ ನಡೆಸಬೇಕಿದ್ದು, ನಿರೀಕ್ಷಿತ ಲಾಭವೂ ರೈತರಿಗೆ ದೊರೆಯುವುದಿಲ್ಲ.
ಕಳೆದ ಬಾರಿಯೂ ಕೇವಲ ಶೇ.20-25 ರೈತರಿಗೆ ಫಸಲು ಸಿಕ್ಕಿತ್ತು. ಈ ಸಲ ಹವಾಮಾನ ವೈಪರೀತ್ಯ ನಿರಾಸೆ ಮೂಡಿಸಿದೆ. ಆದರೆ ಪ್ರತಿ ಬಾರಿ ರೈತರು ತಾವು ಕಟ್ಟಿದ ವಿಮೆಗಷ್ಟೇ ಪರಿಹಾರ ಪಡೆದುಕೊಳ್ಳುವಂತಾಗಿದ್ದು, ಸರ್ಕಾರ ಯಾವುದೇ ನೆರವು ನೀಡುತ್ತಿಲ್ಲ ಎನ್ನುವ ಆರೋಪ ರೈತರದ್ದು. ಸರ್ಕಾರ ಈ ಬಾರಿಯಾದರೂ ಪರಿಹಾರ ಕೊಡುವ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಬೇಕು ಎನ್ನುವುದು ಬೆಳೆಗಾರರ ಆಗ್ರಹ.
ಈಗಾಗಲೇ ಬಿಟ್ಟಿರುವ ಹೂ ಕಾಯಾಗಲು ಅನುಭವಾಗುವಂತೆ ಹಾಗೂ ಜೋನೆ ಸೇರಿದಂತೆ ಇತರೆ ರೋಗಳಿಗೆ ತುತ್ತಾಗದಂತೆ ರೈತರು ಔಷಧಿ ಸಿಂಪಡಣೆಗೆ ಮುಂದಾಗಿದ್ದಾರೆ. ಬಹುತೇಕ ಎಲ್ಲ ತೋಟಗಳ ಮಾಲೀಕರು ಈ ಬಾರಿಯಾದರೂ ಹೆಚ್ಚಿನ ಫಸಲು ಪಡೆಯಬೇಕು ಎನ್ನುವ ಕಾರಣಕ್ಕೆ ಈ ಕಾರ್ಯಕ್ಕೆ ಮುಂದಾಗಿದ್ದಾರೆ. ಆದರೆ ಎರಡು ದಿನ ಬಿಸಿಲು, ಮತ್ತೆ ಒಂದು ವಾರ ಮೋಡ ಮುಸುಕಿದ ವಾತಾವರಣ ಮಾವು ಮತ್ತು ರೈತ ಭವಿಷ್ಯವನ್ನು ಮಂಕಾಗಿಸಿದೆ.
ಪ್ರತಿ ಹೆಕ್ಟೇರ್ ಮಾವಿಗೆ ಗರಿಷ್ಠ 80 ಸಾವಿರ ರೂ.ಗಳ ವಿಮಾ ಮೊತ್ತವನ್ನು ಸರ್ಕಾರ ನಿಗದಿ ಪಡಿಸಿದೆ. ಪ್ರೀಮಿಯಂ ಮೊತ್ತ ಶೇ.35ರಷ್ಟು ಇರಲಿದೆ. ಕೇಂದ್ರದ ಶೇ.12.5 ಮತ್ತು ರಾಜ್ಯದ ಶೇ.17.5 ಮೊತ್ತ ಹೊರತುಪಡಿಸಿ ರೈತರು ಶೇ.5 ಅಂದರೆ, 4 ಸಾವಿರ ರೂ.ಗಳ ಕಂತನ್ನು ಪಾವತಿ ಮಾಡಬೇಕು. ಪ್ರತಿ ಬಾರಿ ಮಾವು ಬೆಳೆಗಾರರು ವಿಮೆ ಮಾಡಿಸಲು ಮುಂದೆ ಬರುತ್ತಿಲ್ಲ. ಆದರೂ ಈ ಬಾರಿ ದಾಖಲೆಯ 11,949 ಮಂದಿ ವಿಮೆ ಮಾಡಿಸಿದ್ದಾರೆ. ಇದರಿಂದ ಜಿಲ್ಲೆಯ ಮಾವು ಬೆಳೆ ವ್ಯಾಪ್ತಿಯ ಶೇ.22 ಪ್ರದೇಶ ಹಾಗೂ ಉತ್ಪಾದನೆಯ ಶೇ.30 ಬೆಳೆ ವಿಮೆ ವ್ಯಾಪ್ತಿಗೆ ಒಳಪಟ್ಟಂತಾಗಿದೆ.
ಕಳೆದ ಬಾರಿಯೂ ನಿರೀಕ್ಷಿತ ಪ್ರಮಾಣದಲ್ಲಿ ಮಾವು ಸಿಗಲಿಲ್ಲ. ಈ ಬಾರಿ ಮಳೆ ಕಡಿಮೆ ಆಗಿದ್ದರಿಂದ ಉತ್ತಮ ಬೆಳೆ ತೆಗೆಯಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಪದೇಪದೆ ಹವಾಮಾನ ವೈಪರೀತ್ಯ ನಮ್ಮನ್ನು ಆತಂಕಕ್ಕೆ ದೂಡಿದೆ. ಈಗಾಗಲೇ ಬಿಟ್ಟಿರುವ ಹೂವಿನ ಅರ್ಧದಷ್ಟು ಭಾಗ ಕಂದು ಬಣ್ಣಕ್ಕೆ ತಿರುಗಿ ಉದುರುತ್ತಿದೆ.
ವಾಸು, ಪ್ರಗತಿ ಪರ ರೈತ, ಬಿಳಗುಂಬ