ಪರಿಶಿಷ್ಟ ಪಂಗಡಕ್ಕೆ ದಕ್ಕುವುದೇ ಅಧ್ಯಕ್ಷ ಸ್ಥಾನ?

ಗುಡಿಬಂಡೆ ಪಟ್ಟಣ ಪಂಚಾಯಿತಿ
1 Gudi Photo-1
ಗುಡಿಬಂಡೆ ಪಟ್ಟಣ ಪಂಚಾಯಿತಿ
Published on

ಮುಂದಿನ ಅವಧಿಗಾದರೂ ಮೀಸಲಾತಿ ಸಿಗಲಿ ಎಂದು ಸದಸ್ಯರ ಆಶಯ- ಗುಡಿಬಂಡೆ ಪ.ಪಂಗೆ ತಹಸೀಲ್ದಾರ್ ಆಡಳಿತಾಧಿಕಾರಿ


ಎನ್.ವಿ.ವೆಂಕಟೇಶ್ ಗುಡಿಬಂಡೆ
ಪಟ್ಟಣ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಎರಡೂವರೆ ವರ್ಷದ ಅಧಿಕಾರಾವಧಿ ಮೇ 1ಕ್ಕೆ ಮುಕ್ತಾಯವಾಗಿದ್ದು, ಆಡಳಿತ ಅಧಿಕಾರಿಯಾಗಿ ಜೂ.22ರಂದು ತಹಸೀಲ್ದಾರ್ ಎನ್.ಮನೀಷಾ ಅಧಿಕಾರ ವಹಿಸಿಕೊಂಡಿದ್ದಾರೆ.
ಅಧಿಕಾರಾವಧಿ ಮುಗಿಯುತ್ತಿದ್ದಂತೆ ಅಧ್ಯಕ್ಷ - ಉಪಾಧ್ಯಕ್ಷರ ಮೀಸಲಾತಿ ಲೆಕ್ಕಾಚಾರದ ಬಗ್ಗೆ ಸದಸ್ಯರು ಚರ್ಚೆ ಶುರು ಮಾಡಿದ್ದಾರೆ. ಪಪಂ ಪ್ರಾರಂಭವಾದಾಗಿನಿಂದ 1990ರಿಂದ 1995ರವರೆಗೆ ಅಧ್ಯಕ್ಷ ಸ್ಥಾನಕ್ಕೆ ಬಿಸಿಎಂ(ಬಿ), ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಗೆ ಮೀಸಲಾಗಿತ್ತು. 1996ರಿಂದ 2001ರವರೆಗೆ ಅಧ್ಯಕ್ಷ ಸ್ಥಾನ ಬಿಸಿಎಂ (ಬಿ), ಉಪಾಧ್ಯಕ್ಷ ಸ್ಥಾನ ಬಿಸಿಎಂ(ಎ)ಗೆ ಮೀಸಲಾಗಿತ್ತು. 2002ರಿಂದ 2007ರವರೆಗೆ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗ, ಉಪಾಧ್ಯಕ್ಷ ಸ್ಥಾನ ಬಿಸಿಎಂ - ಎ (ಮಹಿಳೆ) ವರ್ಗಕ್ಕೆ ಮೀಸಲಾಗಿತ್ತು. 2008ರಿಂದ 2013ರವರೆಗೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ (ಮಹಿಳೆ), ಉಪಾಧ್ಯಕ್ಷ ಸ್ಥಾನ ಬಿಸಿಎಂ-ಎ (ಮಹಿಳೆ) ವರ್ಗಕ್ಕೆ ಮೀಸಲಾಗಿತ್ತು. 2013ರಿಂದ 2014ರವರೆಗೆ ಆಡಳಿತಾಧಿಕಾರಿಗಳನ್ನು ನೇಮಿಸಲಾಗಿತ್ತು. 2014ರಿಂದ 2018ರವರೆಗೆ ಅಧ್ಯಕ್ಷ ಸ್ಥಾನ ಬಿಸಿಎಂ (ಎ), ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. 2019ರಿಂದ 2021ರವರೆಗೆ ಆಡಳಿತಾಧಿಕಾರಿ ನೇಮಕವಾಗಿದ್ದರೆ, 2021ರಿಂದ 2024ರವರೆಗೆ ಅಧ್ಯಕ್ಷ ಸ್ಥಾನ ಬಿಸಿಎಂ-ಎ (ಮಹಿಳೆ), ಉಪಾಧ್ಯಕ್ಷರ ಸ್ಥಾನ ಬಿಸಿಎಂ (ಬಿ) ವರ್ಗಕ್ಕೆ ನಿಗದಿಯಾಗಿತ್ತು. ಮುಂದಿನ ಎರಡೂವರೆ ವರ್ಷಗಳ ಅವಧಿಗೆ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಯಾವ ವರ್ಗಕ್ಕೆ ನಿಗದಿಯಾಗಲಿದೆ ಎಂಬ ಚರ್ಚೆ ಕಾವು ಪಡೆದಿದೆ.
ಪಟ್ಟಣದಲ್ಲಿ ಶೇ.30ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಪರಿಶಿಷ್ಟ ಪಂಗಡವರಿಗೆ ಪಟ್ಟಣ ಪಂಚಾಯಿತಿ ಆರಂಭವಾಗಿದಾಗಿಂದಲೂ ಅಧ್ಯಕ್ಷ ಸ್ಥಾನದ ಮೀಸಲಾತಿ ದೊರಕಿಲ್ಲ. ಈ ಬಾರಿಯಾದರೂ ಈ ಜನಾಂಗಕ್ಕೆ ಮೀಸಲಾತಿ ಪ್ರಕಟವಾಗುತ್ತದೆಯೇ ಎಂದು ಸಮುದಾಯದ ಸದಸ್ಯರು ಎದುರು ನೋಡುತ್ತಿದ್ದಾರೆ.

ಭಾರಿ ರಾಜಕೀಯ
ಎರಡು ತಿಂಗಳ ಹಿಂದೆ ಪಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅಧಿಕಾರ ಅವಧಿ ಮುಗಿಯುತ್ತಿದ್ದಂತೆ ಮುಂದಿನ ಅವಧಿಗೆ ತಮಗೆ ಬೇಕಾದವರಿಗೆ ಅಧ್ಯಕ್ಷ ಸ್ಥಾನ ನೀಡಲು ಈಗಾಗಲೇ ಸದಸ್ಯರು, ಶಾಸಕರು ಸೇರಿ ಪ್ರಭಾವಿಗಳೊಂದಿಗೆ ಮೀಸಲಾತಿ ಸಂಬಂಧ ಲಾಬಿ ನಡೆಸುತ್ತಿದ್ದು, ಜಿಲ್ಲಾಧಿಕಾರಿಗಳು ಯಾವ ಮೀಸಲಾತಿ ಘೋಷಿಸುತ್ತಾರೋ ಕಾದು ನೋಡಬೇಕಾಗಿದೆ.


ಪ.ಪಂ ಆರಂಭವಾದಾಗಿನಿಂದಲೂ ಇದುವರೆಗೆ ಪರಿಶಿಷ್ಟ ಪಂಗಡಕ್ಕೆ ಅಧ್ಯಕ್ಷ ಸ್ಥಾನದ ಮೀಸಲಾತಿ ದೊರೆತಿಲ್ಲ. ಪಟ್ಟಣದಲ್ಲಿ ಶೇ.30ಕ್ಕೂ ಹೆಚ್ಚು ಪರಿಶಿಷ್ಟ ಪಂಗಡದವರಿದ್ದಾರೆೆ. ಜತೆಗೆ 11 ಸದಸ್ಯರ ಪೈಕಿ ಇಬ್ಬರು ಸದಸ್ಯರು ಇದ್ದೇವೆ. ಆದರೂ ಅವಕಾಶ ಸಿಕ್ಕಿಲ್ಲ. ಈ ಬಾರಿಯಾದರೂ ಜಿಲ್ಲಾಧಿಕಾರಿಗಳು ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡದವರಿಗೆ ಸಿಗುವಂತೆ ಮೀಸಲಾತಿ ಪ್ರಕಟಿಸಬೇಕು.
ವೀಣಾ, 9ನೇ ವಾರ್ಡ್ ಪ.ಪಂ ಮೀಸಲಾತಿ ಸದಸ್ಯೆ, ಗುಡಿಬಂಡೆ


ಮೇ1ಕ್ಕೆ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನ ತೆರವಾಗಿದೆ. ಈ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಜೂ.22ರಿಂದ ತಹಸೀಲ್ದಾರ್ ಅವರು ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೊಸ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯಾಗುವವರೆಗೂ ಕರ್ತವ್ಯ ನಿರ್ವಹಿಸುತ್ತಾರೆ.
ಶ್ರೀನಿವಾಸ, ಪ್ರಭಾರಿ ಮುಖ್ಯಾಧಿಕಾರಿ, ಗುಡಿಬಂಡೆ ಪಪಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net