

ವಿಜಯವಾಣಿ ಸುದ್ದಿಜಾಲ ಬಾಗೇಪಲ್ಲಿ
ತಾಲೂಕಿನ ಪೂಲವಾರಪಲ್ಲಿ ತಹಸೀಲ್ದಾರ್ ವಶಪಡಿಸಿಕೊಂಡಿದ್ದ ಲಕ್ಷಾಂತರ ರೂ.ಮೌಲ್ಯದ ಅಕ್ರಮ ಪಡಿತರ ಪ್ರಕರಣದಲ್ಲಿ ಕಾಂಗ್ರೆಸ್‌ನ ಪ್ರಭಾವಿ ಮುಖಂಡನ ಹೆಸರು ಕೇಳಿ ಬಂದಿದೆ.
ತಾಲೂಕಿನ ಪೂಲವಾರಪಲ್ಲಿ ಗ್ರಾಮದ ಗೋದಾಮಿನ ಮೇಲೆ ಜು.19ರಂದು ತಹಸೀಲ್ದಾರ್ ಎನ್.ಮನೀಷಾ ದಾಳಿ ನಡೆಸಿ ಲಕ್ಷಾಂತರ ರೂ. ಮೌಲ್ಯದ ಸರ್ಕಾರದ ವಿವಿಧ ಯೋಜನೆಗಳ ಪಡಿತರವನ್ನು ವಶಪಡಿಸಿಕೊಂಡು ಈ ಸಂಬಂಧ ಗೋಮಾಮು ಮಾಲೀಕ ನಾಗರಾಜು ಹಾಗೂ ಮಂಡಿ ವ್ಯಾಪಾರಿ ವೆಂಕಟೇಶ್‌ನನ್ನು ಬಂಧಿಸಲಾಗಿತ್ತು. ಸದ್ಯ ಕಾಂಗ್ರೆಸ್‌ನ ಪ್ರಭಾವಿ ಮುಖಂಡ ಆಂಜನೇಯ ರೆಡ್ಡಿ ಎಂಬಾತನ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಏನಿದು ಪ್ರಕರಣ ?
ಕೇಂದ್ರ ಸರ್ಕಾರದ ಗರೀಬ್ ಕಲ್ಯಾಣ ಯೋಜನೆಯ ಪಡಿತರ ಚೀಟಿದಾರರ ಅನ್ನಭಾಗ್ಯ ಅಕ್ಕಿ, ಗೋಧಿ, ಹಾಸ್ಟೆಲ್ ಪಡಿತರ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅಂಗನವಾಡಿ ಕೇಂದ್ರಗಳ ಪುಷ್ಟಿ ಯೋಜನೆಯ ಅಕ್ಕಿ, ಮೆಣಸಿನ ಪುಡಿ, ಮಸಲಾ ಪುಡಿ ಸೇರಿ 5.50 ಲಕ್ಷ ರೂ. ಮೌಲ್ಯದ ವಿವಿಧ ಆಹಾರ ಪದಾರ್ಥಗಳನ್ನು ಪೂಲವಾರಪಲ್ಲಿ ಗ್ರಾಮದ ಗೋದಾಮಿನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದೆ ಎಂಬ ಖಚಿತ ಮಾಹಿತಿ ಆಧರಿಸಿ ತಹಸೀಲ್ದಾರ್ ದಾಳಿ ನಡೆಸಿ, ದಾಸ್ತಾನು ವಶಪಡಿಸಿಕೊಂಡು, ಗೋದಾಮಿಗೆ ಬೀಗ ಜಡಿದು, ಮಂಡಿ ವ್ಯಾಪಾರಿಹಾಗೂ ಮಾಲೀಕನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ಆದರೆ ಪಡಿತರ ಅಕ್ರಮ ದಾಸ್ತಾನು ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ಭಾಗಿಯಾಗಿದ್ದಾರೆ ಎಂದು ವಿವಿಧ ಸಂಘಟನೆಗಳು ಪ್ರತಿಭಟನೆ ಸಹ ನಡೆಸಿದ್ದು, ಇಲಾಖೆಯ ತನಿಖೆ ವೇಳೆ ಆಂಜನೇಯ ರೆಡ್ಡಿ ಹೆಸರು ಕೇಳಿ ಬಂದಿದ್ದು, ಈ ಸಂಬಂಧ ಬಾಗೇಪಲ್ಲಿ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿದೆ.
ಇಲಾಖಾ ಹಂತದ ತನಿಖೆ ಹೆಸರು ಬಯಲು
ಪಡಿತರ ಅಕ್ರಮ ಮಾರಾಟ ಪ್ರಕರಣ ಸಂಬಂಧ ಸಿಪಿಎಂ ಸೇರಿ ವಿವಿಧ ಸಂಘಟನೆಗಳು ಆಗ್ರಹಿಸಿದ್ದವು. ಪರಿಣಾಮ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆಗೆ ಸೂಚಿಸಿದ್ದರು. ಬಾಗೇಪಲ್ಲಿ ಪೊಲೀಸರ ತನಿಖೆಯಲ್ಲಿ ಮುಖಂಡನ ಹೆಸರು ಬೆಳಕಿಗೆ ಬಂದಿದೆ. ಆಂಜನೇಯರೆಡ್ಡಿ ಬಾಗೇಪಲ್ಲಿ ತಾಲೂಕಿನ ಅಂಗನವಾಡಿ ಕೇಂದ್ರಗಳ, ನ್ಯಾಯಬೆಲೆ ಅಂಗಡಿ, ಅಕ್ಷರ ದಾಸೋಹ ಸೇರಿ ಸರ್ಕಾರಿ ಯೋಜನೆಗಳ ಪಡಿತರ ಸಾಗಣೆ ಸರಬರಾಜು ಗುತ್ತಿಗೆ ಪಡೆದಿದ್ದು, ಲಕ್ಷಾಂತರ ರೂ. ಮೌಲ್ಯದ ಅಕ್ಕಿ, ಗೋಧಿ ಸೇರಿ ಇತರ ಪಡಿತರ ಪದಾರ್ಥಗಳನ್ನು ನನಗೆ ಮಾರಾಟ ಮಾಡಿ, ನನ್ನಿಂದ ಹಣ ಪಡೆದುಕೊಂಡಿದ್ದಾರೆ. ಆನ್‌ಲೈನ್ ಪೋನ್ ಪೇ ಮೂಲಕವೇ ಆಂಜನೇಯರೆಡ್ಡಿ ಹಣಕಾಸು ವ್ಯವಹಾರ ನಡೆಸಿದ್ದಾರೆ ಎಂದು ಬಂಧಿತ ಆರೋಪಿ, ಮಂಡಿ ವ್ಯಾಪಾರಸ್ಥ ವೆಂಕಟೇಶ್ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.