

*ಉಪಚುನಾವಣೆಗೆ ಟಿಕೆಟ್ ನೀಡದ್ದಕ್ಕೆ ಬಂಡಾಯ
*ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ
ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ಚನ್ನಪಟ್ಟಣ ಉಪ ಚುನಾವಣೆಯ ಟಿಕೆಟ್ ಗೊಂದಲ ಮೈತ್ರಿ ಪಕ್ಷಗಳ ಮಧ್ಯೆ ಬಿರುಗಾಳಿ ಎಬ್ಬಿಸಿದೆ. ಉಪಕದನದ ಟಿಕೆಟ್‌ಗೆ ಪಟ್ಟು ಹಿಡಿದಿರುವ ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ್ ಮೈತ್ರಿ ವಿರುದ್ಧವೇ ಬಂಡಾಯದ ಕಹಳೆ ಮೊಳಗಿಸಲು ಸನ್ನದ್ಧಗೊಂಡಿದ್ದಾರೆ.
ಈಗಾಗಲೇ ಮುಡಾ ಪಾದಯಾತ್ರೆಯೂ ಮೈತ್ರಿ ಪಕ್ಷದ ಒಡಕನ್ನು ಬಹಿರಂಗಪಡಿಸಿದೆ. ಇದರ ಮಧ್ಯೆಯೇ, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ರೂವಾರಿಗಳಲ್ಲಿ ಒಬ್ಬರಾದ ಸಿ.ಪಿ.ಯೋಗೇಶ್ವರ್ ಮೈತ್ರಿಯ ವಿರುದ್ದವೇ ಸಿಡಿದೇಳಲು ಸಿದ್ಧಗೊಂಡಿದ್ದಾರೆ. ಕ್ಷೇತ್ರದ ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಲು ಸಜ್ಜಾಗಿದ್ದ ಸಿಪಿವೈಗೆ ಟಿಕೆಟ್ ಸಿಗುವುದಿಲ್ಲ ಎಂಬುದು ಖಾತ್ರಿಯಾಗುತ್ತಲೇ ಮೈತ್ರಿ ವಿರುದ್ಧ ಬಂಡಾಯ ಸಾರಲು ಅಣಿಯಾಗಿದ್ದಾರೆ. ಇದರ ಮೊದಲ ಹಂತವಾಗಿ ಕ್ಷೇತ್ರದಲ್ಲಿ ಶಕ್ತಿ ಬಹಿರಂಗಪಡಿಸಲು ವೇದಿಕೆ ಸಿದ್ಧಪಡಿಸುತ್ತಿದ್ದಾರೆ.
ಪ್ರಸುತ್ತ ಕೇಂದ್ರ ಸಚಿವ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆಯಿಂದ ಕ್ಷೇತ್ರದಲ್ಲಿ ಎದುರಾಗಿರುವ ಉಪಚುನಾವಣೆಯಲ್ಲಿ ಮೈತ್ರಿ ಪಕ್ಷದಿಂದ ಸ್ಪರ್ಧಿಸಲು ಸಿ.ಪಿ.ಯೋಗೇಶ್ವರ್ ಉತ್ಸುಕರಾಗಿದ್ದರು. ಸದ್ಯ ಮೇಲ್ಮನೆ ಸದಸ್ಯರಾಗಿರುವ ಅವರು ಸಾರ್ವಜನಿಕ ರಾಜಕೀಯ ಪ್ರವೇಶಕ್ಕೆ ಸಿಕ್ಕಿರುವ ಈ ಅವಕಾಶವನ್ನು ಬಳಸಿಕೊಳ್ಳಲು ತೀರ್ಮಾನಿಸಿದ್ದರು. ಅದಕ್ಕಾಗಿ ಬೇಕಾದ ರಾಜಕೀಯ ತಂತ್ರಗಳಲ್ಲೂ ತೊಡಗಿಸಿಕೊಂಡಿದ್ದರು. ಜೆಡಿಎಸ್ ಅವರನ್ನು ಬೆಂಬಲಿಸಿದ ಕಾರಣ ಟಿಕೆಟ್ ಸಿಗಲಿದೆ ಎಂಬ ಆಶಾಭಾವದಲ್ಲಿದ್ದರು. ಆದರೆ, ಮೈತ್ರಿ ಪಾಲನೆಯಲ್ಲಿ ಕ್ಷೇತ್ರದ ಟಿಕೆಟ್ ಜೆಡಿಎಸ್ ಪಾಲಾಗಲಿದೆ ಎಂದು ತಿಳಿಯುತ್ತಲೇ, ಅಂತಿಮವಾಗಿ ಯೋಗೇಶ್ವರ್ ಮೈತ್ರಿ ಪಕ್ಷದ ವರಿಷ್ಠರಿಗೆ ಬಂಡಾಯದ ಮುನ್ಸೂಚನೆ ನೀಡಲು ಸಜ್ಜಾಗಿದ್ದಾರೆ.
ಕ್ಷೇತ್ರದ ಟಿಕೆಟ್ ಪಡೆಯಲು ಜೆಡಿಎಸ್ ಆಸಕ್ತಿವಹಿಸಿರುವುದು ಹಾಗೂ ರಾಜ್ಯ ಬಿಜೆಪಿ ನಾಯಕರು ಮೌನವಹಿಸಿರುವುದರ ವಿರುದ್ಧ ಸಿಡಿದೆಡ್ಡಿರುವ ಸಿ.ಪಿ.ಯೋಗೇಶ್ವರ್, ಕ್ಷೇತ್ರದಲ್ಲಿ ಶಕ್ತಿ ಹಾಗೂ ಸಾಮರ್ಥ್ಯ ಪ್ರದರ್ಶಿಸುವ ನಿಟ್ಟಿನಲ್ಲಿ ಆ.11 ರಂದು ನಗರದಲ್ಲಿ ಬೃಹತ್ ಸಮಾವೇಶ ನಡೆಸಲು ಉದ್ದೇಶಿಸಿದ್ದು, ಸುಮಾರು 30 ಸಾವಿರ ಕಾರ್ಯಕರ್ತರನ್ನು ಒಗ್ಗೂಡಿಸುವ ಮೂಲಕ ಮೈತ್ರಿ ನಾಯಕರಿಗೆ ಬಂಡಾಯದ ಬಿಸಿ ಮುಟ್ಟಿಸಲು ಸಿದ್ಧವಾಗುತ್ತಿದ್ದಾರೆ. ಕೆಲ ಜೆಡಿಎಸ್ ಕಾರ್ಯಕರ್ತರ ಬಲವಿರುವ ಕಾರಣ, ತಾಲೂಕು ಸಮಾನ ಮನಸ್ಕರ ವೇದಿಕೆ ಹಾಗೂ ಸಿಪಿವೈ ಅಭಿಮಾನಿ ಬಳಗದ ಹೆಸರಿನಲ್ಲಿ ಈ ಬೃಹತ್ ಸಮಾವೇಶಕ್ಕೆ ಸಿದ್ಧತೆ ನಡೆಯುತ್ತಿದೆ. ‘ತನ್ನನ್ನು ಕಡೆಗಣಿಸಿದರೆ ಜೋಕೆ’ ಎಂಬ ಸಂದೇಶ ಮೈತ್ರಿ ಪಕ್ಷಗಳಿಗೆ ರವಾನಿಸುವುದು ಉದ್ದೇಶವಾಗಿದೆ. ನಗರದ ಬಾಲಕರ ಪದವಿಪೂರ್ವ ಕಾಲೇಜು ಆವರಣ ಅಥವಾ ಮಹದೇಶ್ವರ ದೇವಾಲಯದ ಬಳಿ ಈ ಸಮಾವೇಶ ಆಯೋಜಿಸಲು ತೀರ್ಮಾನಿಸಿದ್ದು, ಅದಕ್ಕಾಗಿ ಈಗಾಗಲೇ ಸಿದ್ಧತೆ ಆರಂಭಗೊಂಡಿವೆ. ಈ ಸಮಾವೇಶದ ಬಗ್ಗೆ ಮಾಹಿತಿ ನೀಡಲು ಸಮಾನ ಮನಸ್ಕರ ವೇದಿಕೆ ಹಾಗೂ ಸಿಪಿವೈ ಅಭಿಮಾನಿ ಬಳಗ ಶುಕ್ರವಾರ ಪತ್ರಿಕಾಗೋಷ್ಠಿ ಹಮ್ಮಿಕೊಂಡಿದೆ.
ಚನ್ನಪಟ್ಟಣ ರಾಜಕೀಯ ಹಾಗೂ ಮುಂಬರುವ ಉಪಚುನಾವಣೆ ಹಿನ್ನೆಲೆಯಲ್ಲಿ ಇದೊಂದು ಮಹತ್ತರವಾದ ಸಭೆ ಎನ್ನಬಹುದಾಗಿದ್ದು, ಈ ಸಭೆಯಲ್ಲಿ ಯೋಗೇಶ್ವರ್ ನಿರ್ಧಾರ ಬಹಿರಂಗಗೊಳ್ಳುವ ಸಾಧ್ಯತೆ ಇದೆ. ಶತಾಯ ಗತಾಯ ಈ ಉಪಚುನಾವಣೆಯಲ್ಲಿ ತನ್ನ ಸ್ಥಾನ ಭದ್ರಗೊಳಿಸಲು ಯೋಗೇಶ್ವರ್ ಯೋಜಿಸಿದ್ದು, ಮತ್ತೊಮ್ಮೆ ಪಕ್ಷಾಂತರ ಮಾಡುವರೇ ಅಥವಾ ಬಂಡಾಯ ಸಾರುವರೇ ಎಂಬ ಕುತೂಹಲ ಮೂಡಿದೆ. ಈ ಸಮಾವೇಶದಲ್ಲಿ ಕಾರ್ಯಕರ್ತರಿಂದ ಪಕ್ಷ ಬದಲಾವಣೆಗೆ ಒತ್ತಾಯ ಕೇಳಿಬರುವ ಸಾಧ್ಯತೆಯಿದ್ದು, ಬಂಡಾಯ ತೀರ್ಮಾನದ ಸಾಧ್ಯತೆ ಹೆಚ್ಚಾಗಿದೆ.
ಸಿ.ಪಿ.ಯೋಗೇಶ್ವರ್ ತಾಲೂಕು ರಾಜಕೀಯ ಕಂಡ ವರ್ಣರಂಜಿತ ರಾಜಕಾರಣಿಯಾಗಿದ್ದು, ಇದುವರೆಗೂ ಒಂದು ಲೋಕಸಭೆ ಸೇರಿ ಒಟ್ಟು 9 ಚುನಾವಣೆ ಎದುರಿಸಿದ್ದಾರೆ. 5 ಬಾರಿ ಗೆಲುವು ಹಾಗೂ 4 ಸೋಲು ಅನುಭವಿಸಿರುವ ಅವರು, ತಮ್ಮ ರಾಜಕೀಯ ಜೀವನ ಆರಂಭಿಸಿದ್ದು ಬಂಡಾಯದ ಮೂಲಕವೇ. 4 ಸೋಲು ಅನುಭವಿಸಿರುವುದು ಬಿಜೆಪಿಯಿಂದಲೇ ಎಂಬುದು ಮತ್ತೊಂದು ವಿಶೇಷ. ಒಟ್ಟಾರೆ ಯೋಗೇಶ್ವರ್ ಅವರ ನಡೆ ತೀವ್ರ ಕುತೂಹಲಕ್ಕೆ ಕಾರಣವಾಗುತ್ತಿದೆ.