ಬಿಜೆಪಿ ಬಲ ಆಯವ್ಯಯ ಆದೀತೇ ಸಬಲ?

Budget
Published on

ಕಾರವಾರ : ಆರ್ಥಿಕ ವರ್ಷ ಕೊನೆಯಾಗುತ್ತಾ ಬರುತ್ತಿದ್ದಂತೆ ಸರ್ಕಾರ ಘೊಷಿಸುವ ಬಜೆಟ್​ನ ಬಗ್ಗೆ ಜನ ನಿರೀಕ್ಷೆಯ ಇಟ್ಟುಕೊಳ್ಳುವುದು ಸಾಮಾನ್ಯ. ಕರೊನಾ ಸಂಕಷ್ಟದಿಂದ ಬಳಲಿದವರಿಗೆ ಸರ್ಕಾರದ ಯಾವುದಾದರೂ ನೆರವು ಸಿಕ್ಕೀತೇ ಎಂಬ ಆಸೆಯಲ್ಲಿ ಹಲವರದ್ದಾಗಿದೆ.

ಈ ಹಿಂದಿನ ಬಜೆಟ್​ಗಳ ಸಾಕಷ್ಟು ಘೊಷಣೆಗಳು ಜಾರಿಗೆ ಬಾಕಿ ಇವೆ. ದಶಕಗಳಿಂದ ಜಿಲ್ಲೆಯ ಜನ ಆಗ್ರಹಿಸುತ್ತಿರುವ ಅಂಶಗಳೂ ಜಾರಿಯಾಗಿಲ್ಲ. ಆದರೂ ಜನ ಮತಷ್ಟು ಬೇಡಿಕೆಗಳ ಮೂಟೆಯನ್ನು ಸರ್ಕಾರದ ಮುಂದಿಟ್ಟು ಕುಳಿತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಜಿಲ್ಲೆಯ 6 ರಲ್ಲಿ 5 ಶಾಸಕರು, ಒಬ್ಬ ಸಂಸದ, ಒಬ್ಬ ಎಂಎಲ್​ಸಿ ಬಿಜೆಪಿಯವರೇ ಇದ್ದಾರೆ ಇದರಿಂದ ಜಿಲ್ಲೆಗೆ ಹೆಚ್ಚಿನ ಕೊಡುಗೆ ಸಿಗಬಹುದು ಎಂಬ ಸಹಜ ನಿರೀಕ್ಷೆ ಜನರದ್ದು.

*ಕರಾವಳಿಯಲ್ಲಿ ಕೃಷಿ ಜಮೀನುಗಳಿಗೆ ಉಪ್ಪು ನೀರು ನುಗ್ಗಿ ಸಾವಿರಾರು ಎಕರೆ ಭೂಮಿ ಉಳುಮೆಗೆ ಅಯೋಗ್ಯವಾಗಿದೆ. ಅದನ್ನು ಮರುಪೂರಣ ಹಾಗೂ ಉಪ್ಪು ನೀರು ನುಗ್ಗದಂತೆ ತಡೆಯಲು ಒಂದು ಸಮಗ್ರ ಶಾಶ್ವತ ಯೋಜನೆ ರೂಪಿಸಬೇಕು ಎಂಬ ಆಗ್ರಹ ಮೊದಲಿನಿಂದಲೂ ಇದೆ. ವೆಂಟೆಡ್ ಬ್ಯಾರೇಜ್​ಗಳ ನಿರ್ಮಾಣ ಮಾಡಲಾಗುವುದು ಎಂದು ಸರ್ಕಾರ ಕಳೆದ ಬಜೆಟ್​ನಲ್ಲಿ ಘೊಷಿಸಿದ್ದರೂ ಯೋಜನೆ ಜಾರಿಯಾಗಿಲ್ಲ.

*ರೈತರ ಸಾಲ ಮನ್ನಾ ಮಾಡಿದಂತೆ ಎಲ್ಲ ಮೀನುಗಾರರ ಸಾಲ ಮನ್ನಾ ಮಾಡಬೇಕು ಎಂದು ಬೆಸ್ತರು ಸಾಕಷ್ಟು ಹೋರಾಟ ಮಾಡಿದ್ದಾರೆ. ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ ಅದಿನ್ನೂ ಜಾರಿಯಾಗಿಲ್ಲ.

*ಜಿಲ್ಲೆಯ ಕರಾವಳಿಯಲ್ಲಿ ತುರ್ತು ಚಿಕಿತ್ಸೆ ನೀಡಬಲ್ಲ ಎಮರ್ಜೆನ್ಸಿ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಬೇಡಿಕೆ ಆಗಾಗ ಮಾರ್ಧನಿಸುತ್ತಲೇ ಇದೆ. ಆ ನಿಟ್ಟಿನಲ್ಲಿ ಸರ್ಕಾರ ಇನ್ನಷ್ಟು ಸ್ಪಷ್ಟ ಹೆಜ್ಜೆ ಇಡಬೇಕಿದೆ.

*ಜಿಲ್ಲೆಯಲ್ಲಿ ದೊಡ್ಡ ಉದ್ಯಮಗಳಿಲ್ಲ. ಇದರಿಂದ ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ಪರಿಸರ ಸ್ನೇಹಿ ಕೈಗಾರಿಕೆಗಳನ್ನು ಪ್ರಾರಂಭಿಸಬೇಕಿದೆ. ಪ್ರವಾಸೋದ್ಯಮ ಮೂಲ ಸೌಕರ್ಯ ಬೆಳೆಯುವಂಥ ನಿರ್ದಿಷ್ಟ ಹೆಜ್ಜೆ ಇಡಬೇಕಿದೆ.

*ಘಟ್ಟದ ಮೇಲಿನ ತಾಲೂಕುಗಳನ್ನು ಸೇರಿಸಿ ಪ್ರತ್ಯೇಕ ಶಿರಸಿ ಜಿಲ್ಲೆ ಮಾಡಬೇಕು ಎಂಬ ಬಹು ವರ್ಷಗಳ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ. ಬನವಾಸಿ ಪ್ರತ್ಯೇಕ ತಾಲೂಕು ಘೊಷಣೆ ಮಾಡಬೇಕು ಎಂಬ ಆಗ್ರಹವೂ ಇದರ ಜತೆ ಸೇರಿಕೊಂಡಿದೆ. ಈ ಬಜೆಟ್​ನಲ್ಲಿ ಕಾಲ ಕೂಡಿ ಬರಲಿದೆಯೇ ಕಾದು ನೋಡಬೇಕಿದೆ.

*ದೀರ್ಘಕಾಲೀನ ನೀಡುವ ಆಸಾಮಿ ಖಾತೆ ಸಾಲ ಮನ್ನಾ ಮಾಡಬೇಕು ಎಂಬ ಅಡಕೆ ಬೆಳೆಗಾರರ ಬೇಡಿಕೆ ಬಹುದಿನಗಳಿಂದ ಇದೆ.

*ಶಿರಸಿಗೆ ಪ್ರತ್ಯೇಕ ಹಾಲು ಒಕ್ಕೂಟ ನೀಡಬೇಕು ಎಂದು ದಶಕಗಳಿಂದ ಪ್ರತಿಭಟನೆಗಳು ನಡೆಯುತ್ತ ಬಂದಿವೆ.

ಹಿಂದಿನ ಬಜೆಟ್​ಗಳಲ್ಲಿ ಘೊಷಣೆಯಾಗಿ ಜಾರಿಗೆ ಬಾಕಿ ಇರುವುದು

*150 ಕೋಟಿ ರೂ.ವೆಚ್ಚದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜ್ ಜತೆ 400 ಹಾಸಿಗೆಗಳ ಆಸ್ಪತ್ರೆ ನಿರ್ವಣ.

*15 ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜ್​ನ ಆಸ್ಪತ್ರೆ ಜತೆ ಕ್ಯಾನ್ಸರ್ ಆಸ್ಪತ್ರೆ ಪ್ರಾರಂಭ.

*3 ಕೋಟಿಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜ್​ನಲ್ಲಿ ಸಿಮ್ಯುಲೇಶನ್ ಲ್ಯಾಬ್ ಹಾಗೂ 30 ಲಕ್ಷ ರೂ.ಗಳಲ್ಲಿ ಬಯಾಲಜಿಕಲ್ ಲ್ಯಾಬ್.

*ಮುಂಡಗೋಡಿನಲ್ಲಿ ಶಾಶ್ವತ ಅಗ್ನಿಶಾಮಕ ಠಾಣೆ.

*ಭಟ್ಕಳ ತೆಂಗಿನಗುಂಡಿ ಬಂದರು ಹೂಳೆತ್ತುವ ಕಾಮಗಾರಿ.

*ಕರಾವಳಿಯಲ್ಲಿ ರಾಜ್ಯದ ಮೊದಲ ಕಡಲ ಧಾಮ.

*ಕಾರವಾರ ಜಿಲ್ಲಾ ಕಾರಾಗೃಹ ಸ್ಥಳಾಂತರ.

*ಕಾರವಾರ ವಾಣಿಜ್ಯ ಬಂದರಿನಲ್ಲಿ ಕಾಯಂ ಅಗ್ನಿಶಾಮಕ ಉಪಕರಣ ಅಳವಡಿಕೆ.

*ಮೀನುಗಾರ ಮಹಿಳೆಯರಿಗೆ ಬೈಕ್ ವಿತರಣೆ ಯೋಜನೆ.

ಸ್ಥಳೀಯರಿಗೆ ಉದ್ಯೋಗ ಸಿಗುವಂಥ ಕೈಗಾರಿಕೆಗಳು ಮಲೆನಾಡು ಪ್ರದೇಶಕ್ಕೆ ಬರಬೇಕು. ಅದಕ್ಕೆ ಅರಣ್ಯದ ಕೆಲ ನಿಯಮಾವಳಿಗಳನ್ನು ಸಡಿಲಗೊಳಿಸಬೇಕು. ಸಣ್ಣ ನೀರಾವರಿ ಯೋಜನೆಗಳು ಜಾರಿಯಾಗಬೇಕು. ಲಿಂಗನಮಕ್ಕಿ ವರದಾ ನದಿ ಜೋಡಣೆ ಕಾರ್ಯವಾಗಬೇಕು. ಪ್ರೊ. ಸುರೇಂದ್ರ ದಫೆದಾರ್ , ನಿವೃತ್ತದ ಪ್ರಾಧ್ಯಾಪಕರು ಸಿದ್ದಾಪುರ

ಬಂದರು ಹಾಗೂ ವಿಮಾನ ನಿಲ್ದಾಣ ಎರಡೂ ಮೂಲ ಸೌಕರ್ಯ ಜಿಲ್ಲೆಗೆ ಬರುತ್ತಿದೆ. ಈಗ ಪರಿಸರ ಸ್ನೇಹಿ ಕೈಗಾರಿಕೆಗಳನ್ನು ಸ್ಥಾಪಿಸಲು ಸಕಾಲ. ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕು. ಜಿಲ್ಲೆಗೆ ಪ್ರವಾಸಕ್ಕೆ ಬಂದ ಜನ ಇಲ್ಲಿ ಕಾಲ ಕಳೆಯುವಂಥ ಗಮನಾರ್ಹ ಯೋಜನೆಗಳನ್ನು ರೂಪಿಸಬೇಕು. ರಾಜೀವ ಗಾಂವಕರ್ , ಪ್ರವಾಸೋದ್ಯಮಿ,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net