

ಬೆಂಗಳೂರು: ರಾಜ್ಯದ ಗಮನ ಸೆಳೆದಿದ್ದ ಚಾಮರಾಜನಗರ ಆಮ್ಲಜನಕ ದುರಂತ ಪ್ರಕರಣದ ಉಸಿರಲ್ಲಿ ನಾಳೆ ಏರುಪೇರಾಗುವ ಸಾಧ್ಯತೆ ಇದೆ. ಏಕೆಂದರೆ ಘಟನೆ ನಡೆದ 29 ದಿನಗಳ ಬಳಿಕ ತನಿಖೆಗೆ ಚುರುಕು ಮುಟ್ಟಿದ್ದು, ನಾಳೆಯ ಮಟ್ಟಿಗೆ ಒಂದು ಸಂಚಲನ ಸೃಷ್ಟಿಯಾಗುವ ಸಾಧ್ಯತೆಯೂ ಇದೆ.
ಆಕ್ಸಿಜನ್ ಕೊರತೆಯಿಂದಾಗಿ 24 ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ನ್ಯಾಯಾಂಗಕ್ಕೆ ಒಪ್ಪಿಸಿರುವ ಸರ್ಕಾರ, ಅದರ ತನಿಖೆಗಾಗಿ ನಿವೃತ್ತ ನ್ಯಾಯಮೂರ್ತಿ ಬಿ.ಎ. ಪಾಟೀಲ್ ಅವರನ್ನು ನೇಮಿಸಿದೆ. ಈ ಹಿನ್ನೆಲೆಯಲ್ಲಿ ನ್ಯಾ. ಪಾಟೀಲ್ ಅವರು ನಾಳೆ ಚಾಮರಾಜನಗರಕ್ಕೆ ಭೇಟಿ ನೀಡಲಿದ್ದು, ಇದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮರಾಜನಗರಕ್ಕೆ ಇವರ ಮೊದಲ ಭೇಟಿ ಆಗಿರಲಿದೆ.
ಪ್ರಕರಣ ನಡೆದು 29 ದಿನಗಳು ಕಳೆದಿದ್ದು, ನಾಳೆ ನಿವೃತ್ತ ನ್ಯಾಯಮೂರ್ತಿ ಅವರ ಭೇಟಿ ಮಹತ್ವವನ್ನು ಪಡೆಯಲಿದೆ. ಮಧ್ಯಾಹ್ನ 1.30ಕ್ಕೆ ಜಿಲ್ಲಾಸ್ಪತ್ರೆ ಹಾಗೂ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಭೇಟಿ ನೀಡಲಿರುವ ನ್ಯಾ. ಪಾಟೀಲ್, ಪರಿಶೀಲನೆ ಕೈಗೊಳ್ಳಲಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ನಿಂದ ನಿವೃತ್ತ ನ್ಯಾಯಮೂರ್ತಿ ವೇಣುಗೋಪಾಲಗೌಡ ನೇತೃತ್ವದಲ್ಲಿ ಈಗಾಗಲೇ ಸಮಿತಿ ರಚನೆಯಾಗಿದೆ. ಕಾನೂನು ಸೇವಾ ಪ್ರಾಧಿಕಾರದ ಉನ್ನತಮಟ್ಟದ ಈ ಸಮಿತಿ ಹೈಕೋರ್ಟ್ ಸೂಚನೆ ಮೇರೆಗೆ ಈಗಾಗಲೇ ಮಧ್ಯಂತರ ವರದಿ ನೀಡಿದೆ. ಇನ್ನು ನಾಳೆ ನ್ಯಾ. ಪಾಟೀಲ್ ಭೇಟಿ ನೀಡಲಿರುವುದು ಪ್ರಕರಣಕ್ಕೆ ಸಂಬಂಧಿಸಿದಂತೆ ಕುತೂಹಲ ಕೆರಳಿಸಿದೆ.