

* ಅನುಮಾನ ಮೂಡಿಸಿದ ರಾಮನಗರ ಜಿಲ್ಲಾಸ್ಪತ್ರೆ ಪ್ರಕರಣ
* ತನಿಖೆ ಬಳಿಕ ಮಾಹಿತಿ
ಗಂಗಾಧರ ಬೈರಾಪಟ್ಟಣ ರಾಮನಗರ
ಮನುಕುಲಕ್ಕೆ ಕಂಟಕವಾದ ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಪಕ್ಕದ ಮಂಡ್ಯ ಜಿಲ್ಲೆಯಲ್ಲಿ ತಲ್ಲಣ ಸೃಷ್ಟಿಸಿ ತಣ್ಣಗಾಗುತ್ತಿರುವ ಬೆನ್ನಲ್ಲೇ ರಾಮನಗರದಲ್ಲೂ ಇಂತಹದ್ದೇ ಬೆಚ್ಚಿ ಬೀಳಿಸುವ ಪ್ರಕರಣ ಬೆಳಕಿಗೆ ಬಂದಿದ್ದು, ದುಷ್ಕರ್ಮಿಗಳ ಜಾಲ ಜಿಲ್ಲೆಯಲ್ಲೂ ಸಕ್ರಿಯವಾಗಿದೆಯೇ? ಎನ್ನುವ ಅನುಮಾನ ಮೂಡಿಸಿದೆ.
ರಾಮನಗರ ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಪತ್ತೆಯಂತಹ ಪ್ರಕರಣಗಳು ಆಗೊಮ್ಮೆ- ಈಗೊಮ್ಮೆ ಸದ್ದು ಮಾಡುತ್ತಲೇ ಇವೆ. ಪ್ರಕರಣಗಳು ಪತ್ತೆಯಾದಾಗ ತಿಂಗಳಮಟ್ಟಿಗೆ ಸ್ಕಾೃನಿಂಗ್ ಕೇಂದ್ರಗಳನ್ನು ಮುಚ್ಚಲಾಗುತ್ತಿತ್ತು. ಆದರೆ, ಜಿಲ್ಲಾ ಕೇಂದ್ರದ ಸರ್ಕಾರಿ ಆಸ್ಪತ್ರೆಯಲ್ಲಿಯೇ ಭ್ರೂಣ ಪತ್ತೆ ಮಾಡಲಾಗಿದೆ ಎನ್ನುವ ಪ್ರಕರಣ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ಇದಾದ ನಂತರ ಬೆಂಗಳೂರಿನ ಪ್ರಸವ ಪೂರ್ವ ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆ ತಡೆ (ಪಿಸಿ ಆ್ಯಂಡ್ ಪಿಎನ್‌ಡಿಟಿ) ವಿಭಾಗದ ಅಧಿಕಾರಿಗಳು ರಾಮನಗರ ಜಿಲ್ಲಾಸ್ಪತ್ರೆ ಮೇಲೆ ದಾಳಿ ನಡೆಸಿ, ಸ್ಕಾೃನಿಂಗ್ ಯಂತ್ರವನ್ನು ಸೀಜ್ ಮಾಡಿರುವ ಜತೆಗೆ, ನಂತರ ರೆಡಿಯಾಲಜಿಸ್ಟ್ ಡಾ.ಶಶಿ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಆದರೆ ಜಿಲ್ಲಾಸ್ಪತ್ರೆಯಲ್ಲೇ ಕೃತ್ಯ ನಡೆದಿರುವ ಕಾರಣ ಮಂಡ್ಯ ಜಾಲ ಇಲ್ಲಿಯೂ ಸಕ್ರಿಯವಾಗಿದೆಯೇ? ಎಂಬ ಅನುಮಾನ ಮೂಡಿಸಿದೆ.
ಬೆಂಗಳೂರಿನ ಗರ್ಭಿಣಿಯೊಬ್ಬರಿಗೆ ರಾಮನಗರ ಸ್ಕಾೃನಿಂಗ್ ನಡೆಸಿರುವ ಪ್ರಕರಣದ ಹಿಂದೆ ಮಧ್ಯವರ್ತಿಗಳ ಬಲವಾದ ಕೈವಾಡದ ಶಂಕೆ ಎದುರಾಗಿದೆ. ರೆಡಿಯಾಲಜಿಸ್ಟ್ ಅಮಾನತುಗೊಂಡ ಆದೇಶ ಪ್ರತಿಯಲ್ಲಿ ಶಾರದಾ ಮತ್ತು ಲಕ್ಷ್ಮೀ ಎನ್ನುವವರ ಹೆಸರನ್ನು ಉಲ್ಲೇಖ ಮಾಡಲಾಗಿದೆ. ಇದರಲ್ಲಿ ಇವರ ಮೂಲಕವೇ ರಾಮನಗರ ಜಿಲ್ಲಾಸ್ಪತ್ರೆಯ ಸ್ಕಾೃನಿಂಗ್ ಕೇಂದ್ರದಲ್ಲಿ ಭ್ರೂಣ ಪತ್ತೆ ನಡೆದಿದೆ ಎನ್ನುವ ಬಲವಾದ ಶಂಕೆ ಮೂಡಿದ್ದು, ಇದರ ವಿಚಾರಣೆ ಸಹ ಆರೋಗ್ಯ ಇಲಾಖೆ ಬೆಂಗಳೂರಿನಲ್ಲಿ ನಡೆಸುತ್ತಿದೆ. ಇದರಲ್ಲಿ ಶಾರದಾ ಎನ್ನುವ ಮಧ್ಯವರ್ತಿ ಈ ಹಿಂದೆಯೂ ಇಂತಹದ್ದೇ ಪ್ರಕರಣದಲ್ಲಿ ಜೈಲು ಸೇರಿದ್ದಳು ಎನ್ನಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಿದರೆ ಮತ್ತಷ್ಟು ಸತ್ಯಗಳು ಹೊರಬರಲಿವೆ.
ಗರ್ಭಪಾತದ ನಂತರ ಮಹಿಳೆ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಪ್ರಕರಣಗಳನ್ನು ಆರೋಗ್ಯ ಇಲಾಖೆ ದಾಖಲಿಸಿದೆ. ರಾಮನಗರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನ್ಯಾಯಾಲಯದ ಮೂಲಕ ಪ್ರಕರಣ ದಾಖಲು ಮಾಡಿದ್ದರೆ ಅತ್ತ ಪ್ರಸವ ಪೂರ್ವ ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆ ತಡೆ (ಪಿಸಿ ಆ್ಯಂಡ್ ಪಿಎನ್‌ಡಿಟಿ) ವಿಭಾಗದಿಂದಲೂ ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಇದರ ಹೊರತಾಗಿಯೂ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಬೆಂಗಳೂರಿನಲ್ಲಿ ಮಹಿಳೆಯ ಪತಿ, ಮಧ್ಯವರ್ತಿ ಎನ್ನಲಾದ ಮಹಿಳೆ, ರೇಡಿಯಾಲಜಿಸ್ಟ್ ಸೇರಿ ಇತರರನ್ನು ವಿಚಾರಣೆಗೆ ಒಳಪಡಿಸಿದೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ರಾಮನಗರ ಜಿಲ್ಲಾಸ್ಪತ್ರೆಯ ಸ್ಕಾೃನಿಂಗ್ ಕೇಂದ್ರದ ಯಂತ್ರವನ್ನು ಬಳಕೆ ಮಾಡದಂತೆ ಸೀಜ್ ಮಾಡಲಾಗಿದೆ. ಇದರಿಂದಾಗಿ ಕಳೆದ 20 ದಿನಗಳಿಂದಲೂ ಜಿಲ್ಲಾಸ್ಪತ್ರೆಯಲ್ಲಿ ಸ್ಕಾೃನಿಂಗ್ ಯಂತ್ರವಿಲ್ಲದೆ, ರೋಗಿಗಳು ಪರದಾಡುವಂತೆ ಆಗಿದೆ. ಈ ಹಿನ್ನೆಲೆಯಲ್ಲಿ ತಾಲೂಕು ಆಸ್ಪತ್ರೆಯೊಂದರಲ್ಲಿ ಹೆಚ್ಚುವರಿಯಾಗಿ ಇದ್ದ ಸ್ಕಾೃನಿಂಗ್ ಯಂತ್ರವನ್ನು ಜಿಲ್ಲಾಸ್ಪತ್ರೆಗೆ ಸ್ಥಳಾಂತರ ಮಾಡಲು ಅನುಮತಿಯನ್ನು ಅಧಿಕಾರಿಗಳು ಪಡೆದುಕೊಂಡಿದ್ದಾರೆ. ಜಿಲ್ಲೆಯಲ್ಲಿರುವ ಇರುವ ಏಕೈಕ ರೆಡಿಯಾಲಜಿಸ್ಟ್ ಒಬ್ಬರನ್ನು ಮೂರು ದಿನಗಳ ಜಿಲ್ಲಾಸ್ಪತ್ರೆಗೆ ನಿಯೋಜನೆ ಮಾಡಲು ಸಹ ಕ್ರಮ ವಹಿಸಿದೆ.
ತಾಲೂಕು ಆಸ್ಪತ್ರೆಯೊಂದರ ಹೆಚ್ಚುವರಿ ಸ್ಕಾೃನಿಂಗ್ ಯಂತ್ರವನ್ನು ಜಿಲ್ಲಾಸ್ಪತ್ರೆಗೆ ಸ್ಥಳಾಂತರ ಮಾಡಲು ಅನುಮತಿಯನ್ನು ಪಡೆದುಕೊಳ್ಳಲಾಗಿದೆ. ರೆಡಿಯಾಲಜಿಸ್ಟ್ ಅವರನ್ನು ಸಹ ಮೂರು ದಿನಗಳ ಕಾಲ ರಾಮನಗರ ಜಿಲ್ಲಾಸ್ಪತ್ರೆಗೆ ಬಳಕೆ ಮಾಡಿಕೊಳ್ಳಲಾಗುತ್ತದೆ.ಡಾ.ಮಂಜುನಾಥ್ಜಿಲ್ಲಾ ಶಸ್ತ್ರ ಚಿಕಿತ್ಸಕ, ಜಿಲ್ಲಾಸ್ಪತ್ರೆ ರಾಮನಗರರಾಮನಗರ ಜಿಲ್ಲಾಸ್ಪತ್ರೆ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈಗಾಗಲೇ ನ್ಯಾಯಾಲಯದ ಮೂಲಕ ಪ್ರಕರಣ ದಾಖಲು ಮಾಡಲಾಗಿದೆ. ಅಲ್ಲದೆ, ಇನ್ನು ಪ್ರತಿ ಒಂದು ತಿಂಗಳಿಗೆ ಒಮ್ಮೆ ಸ್ಕಾೃನಿಂಗ್ ಸೆಂಟರ್‌ಗಳ ಪರಿಶೀಲನೆ ಮಾಡಲು ಸಹ ಕ್ರಮವಹಿಸಲಾಗಿದೆ.ಡಾ.ಬಿ.ಎಸ್.ನಿರಂಜನ್, ಜಿಲ್ಲಾ ಆರೋಗ್ಯಾಧಿಕಾರಿ, ಬೆಂ. ದಕ್ಷಿಣ ಜಿಲ್ಲೆ