

ಗೌರಿಬಿದನೂರು : ನಗರಸಭೆಯಲ್ಲಿ ಈ ಹಿಂದೆ ಆಡಳಿತಾಧಿಕಾರಿ ಅಧಿಕಾರದಲ್ಲಿದ್ದಾಗ ಸಾಕಷ್ಟು ಅವ್ಯವಹಾರಗಳು ನಡೆದಿದ್ದು, ಈ ಬಗ್ಗೆ ಲೋಕಾಯುಕ್ತ ಹಾಗೂ ಪೌರಾಡಳಿತ ನಿರ್ದೇಶನಾಲಯದಿಂದ ತನಿಖೆ ನಡೆಸಲು ಶಿಫಾರಸು ಮಾಡಬೇಕು ಎಂದು ನಗರಸಭೆ ಕೆಲ ಸದಸ್ಯರು ಆಗ್ರಹಿಸಿದರು.
ನಗರಸಭೆಯ ನೂತನ ಅಧ್ಯಕ್ಷ ಲಕ್ಷ್ಮೀನಾರಾಯಣಪ್ಪ ಅಧ್ಯಕ್ಷತೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಅವ್ಯವಹಾರ ತನಿಖೆಯಾಗಬೇಕು ಎಂದು ಪಟ್ಟು ಹಿಡಿದರು.
ಅಧ್ಯಕ್ಷ ಲಕ್ಷ್ಮೀನಾರಾಯಣಪ್ಪ ಮಾತನಾಡಿ, ನಗರದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಿ ಸಲಹೆ ಸೂಚನೆಗಳನ್ನು ನೀಡಬೇಕು. ಉಳಿದಿರುವ ಅವಧಿಯಲ್ಲಿ ಉತ್ತಮ ಆಡಳಿತ ನೀಡುವ ಕೆಲಸ ನಮ್ಮ ನಿಮ್ಮೆಲ್ಲರದ್ದಾಗಬೇಕು ಎಂದು ಮನವಿ ಮಾಡಿದರು.
ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಮಾತನಾಡಿ, ನಗರದ ಅಭಿವೃದ್ಧಿ ಹಾಗೂ ಸಮಸ್ಯೆಗೆ ಸಂಬಂಧಪಟ್ಟಂತೆ ಮಾತ್ರ ಸಭೆ ಸೀಮಿತವಾಗಿರಲಿ. ಅಜೆಂಡಾದಲ್ಲಿರುವ ವಿಷಯಗಳ ಮೇಲೆ ಮಾತ್ರ ಚರ್ಚೆ ನಡೆಯಲಿ ಎಂದು ಸಲಹೆ ನೀಡಿದರು.
ಸದಸ್ಯ ಖಲೀಂ ಮಾತನಾಡಿ, ನೂತನ ಅಧ್ಯಕ್ಷರ ಆಯ್ಕೆ ಸೆ.9ರಂದು ನಡೆದಿದೆ. ಇದಾದ ಬಳಿಕ ವಿಷಯಗಳಿಗೆ ಮತ್ತು ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಮಾತ್ರ ನಾವು ಅನುಮೋದನೆ ಜವಾಬ್ದಾರರಾಗಿರುತ್ತೇವೆ. ಈ ಹಿಂದೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ
ನಡೆದಿರುವ ವಿಷಯಗಳನ್ನು ಮತ್ತು ಅನುಮೋದನೆಗಳನ್ನು ಈಗ ಮಂಡಿಸಲು ಸಾಧ್ಯವಿಲ್ಲ. ನಮಗೆ ಗಮನಕ್ಕೆ ಬಾರದ
ಯೋಜನೆಗಳಿಗೆ ಅನುಮೋದನೆ ನೀಡಲು ಆಗುವುದಿಲ್ಲ ಎಂದರು. ಈ ಮಾತಿಗೆ ಸದಸ್ಯ ವಿ.ರಮೇಶ್ ಧ್ವನಿಗೂಡಿಸಿ, ನಗರಸಭೆಯಲ್ಲಿ ಆಡಳಿತ ಅಧಿಕಾರಿ ಇದ್ದಾಗ ಭಾರೀ ಅವ್ಯವಹಾರಗಳು ನಡೆದಿದೆ. ಈ ಬಗ್ಗೆ ಲೋಕಾಯುಕ್ತ ಸಂಸ್ಥೆ ಮತ್ತು ಡಿಎನ್‌ಎಯಿಂದ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಮಧ್ಯಪ್ರವೇಶಿಸಿದ ಶಾಸಕ ಪುಟ್ಟಸ್ವಾಮಿಗೌಡ, ಜಿಲ್ಲಾಧಿಕಾರಿ ಸರ್ಕಾರ ನಿಯೋಜಿಸಿದ ಆಡಳಿತಾಧಿಕಾರಿಯಾಗಿದ್ದಾರೆ. ಅವರ ಅವಧಿಯಲ್ಲಿ ಯಾವುದಾದರೂ ವಿಷಯಕ್ಕೆ
ಸಂಬಂಧಪಟ್ಟಂತೆ ನಿಮಗೆ ಸಂದೇಹ ಅಥವಾ ಅನುಮಾನಗಳಿದ್ದರೆ ಆ ಬಗ್ಗೆ ವರದಿ ತರಿಸಿಕೊಳ್ಳೋಣ. ತಪ್ಪು ಕಂಡು ಬಂದರೆ ದೂರು ನೀಡಿ ಕ್ರಮ ತೆಗೆದುಕೊಳ್ಳಲು ಶಿಫಾರಸು ಮಾಡೋಣ ಎಂದು ಸಲಹೆ ನೀಡಿದರು. ಬಹುತೇಕ ಎಲ್ಲ ಸದಸ್ಯರು ಹಾಗೂ ನಾಮ ನಿರ್ದೇಶಿತ ಸದಸ್ಯರು ಇದ್ದರು.
ನಗರಸಭೆ ಪೌರಾಯುಕ್ತೆ ಡಿ.ಎಂ.ಗೀತಾ, ಉಪಾಧ್ಯಕ್ಷ ಫರೀದ್, ಹಿರಿಯ ಸದಸ್ಯರಾದ ಆರ್. ಪಿ.ಗೋಪಿನಾಥ್ ಇದ್ದರು.
ಅನುಮೋದನೆ
ನಗರದಲ್ಲಿ ಒಣ ತ್ಯಾಜ್ಯ ವಿಲೇವಾರಿಗೆ ಸಂಬಂಧಪಟ್ಟ ವಾಹನಗಳು, ಸಕ್ಕಿಂಗ್ ಯಂತ್ರ, ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಕಕ್ಕೆ ಅನುಮೋದನೆ ಪಡೆಯಲಾಯಿತು.
ಸದಸ್ಯರು ತಮ್ಮ ವಾರ್ಡ್‌ನ ಸಮಸ್ಯೆಗಳ ಬಗ್ಗೆ ಸಭೆಯ ಗಮನ ಸೆಳೆದು, ಮೂಲಸೌಲಭ್ಯಗಳ ಕೊರತೆ ಕಾಡುತ್ತಿದೆ. ಅಭಿವೃದ್ಧಿಗೆ ಅಗತ್ಯ ಅನುದಾನ ನೀಡಬೇಕು. ಸರ್ಕಾರದಿಂದ ವಿವಿಧ ಯೋಜನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದರೂ, ಈವರೆಗೆ ಸವಲತ್ತು ವಿತರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.