

ವಿರಾಜಪೇಟೆ: ಇಂದಿನ ಯುವ ಜನತೆಗೆ ಮೂಲ ಆಚರಣೆಗಳನ್ನು ಕಲಿಸಿಕೊಡುವ ಅನಿವಾರ್ಯತೆ ಇದೆ ಎಂದು ಹಿರಿಯ ನಾಗರಿಕ ಕಾಳಿಮಡ ಮೋಟಯ್ಯ ಅಭಿಪ್ರಾಯಪಟ್ಟರು.
ಬುಡಕಟ್ಟು ಸಂಸ್ಕೃತಿ ಅಧ್ಯಯನ ಕೇಂದ್ರವು ವಿರಾಜಪೇಟೆ ಕಾವೇರಿ ಕಾಲೇಜಿನ ಸಹಕಾರದೊಂದಿಗೆ ಇತ್ತೀಚೆಗೆ ಕೊಡವ ಸಂಸ್ಕೃತಿ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಕೊಡವ ಆಟ್ ಪಾಟ್ ಕಳಿ ವಿಷಯ ಕುರಿತು ಮಾತನಾಡಿದ ಅವರು, ನಾವು ಬಾಲ್ಯದಲ್ಲಿ ಮಂದ್ ಕೋಲಾಟದಲ್ಲಿ ಭಾಗವಹಿಸಿದ ಪರಿ ಮತ್ತು ಹಿರಿಯರು ಯಾವುದನ್ನು ತಿಳಿಸಿ ಹೇಳುತ್ತಿದ್ದರೋ ಅದನ್ನು ಶಿಸ್ತುಬದ್ಧವಾಗಿ ಕಲಿಯುತ್ತಿದ್ದೆವು. ಅಲ್ಲದೆ, ಮಂದ್ ಕೋಲಾಟವನ್ನು ಪ್ರದರ್ಶಿಸುತ್ತಿದ್ದ ರೀತಿಯನ್ನು ನೋಡಿಯೇ ನಾವು ಕಲಿಯುತ್ತಿದ್ದೆವು. ಹೊರ ದೇಶಗಳ ಆಕರ್ಷಣೆಯಿಂದ ಕೃಷಿ ಪದ್ಧತಿ ತೊರೆದು ವಲಸೆ ಹೋಗುವುದು ಹೆಚ್ಚಾದ್ದರಿಂದ ಅನಿವಾರ್ಯವಾಗಿ ಗ್ರಾಮ ತೊರೆಯಬೇಕಾಯಿತು. ಆದರೆ, ಚಿಕ್ಕವರಿದ್ದಾಗ ಕಲಿತ ವಿದ್ಯೆಯನ್ನು ಇಂದಿಗೂ ಮರೆತಿಲ್ಲ. ಆದರೆ, ಇಂದಿನ ಯುವಕರಿಗೆ ಇವುಗಳ ಪರಿಚಯವೇ ಇಲ್ಲದಂತಾಗಿದೆ ಎಂದು ತಿಳಿಸಿದರು.
ಕೊಡವರ ಗ್ರಂಥ ಪಟ್ಟೋಲೆ ಪಳಮೆಯಲ್ಲಿರುವ ಕೊಡಗಿನ ಬಾಳೊಪಾಟ್, ದೇಶಕಟ್ಟ್ ಪಾಟ್, ಪುತ್ತರಿಪಾಟ್‌ಗಳ ಮಹತ್ವವನ್ನು ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ನಾಪಂಡ ಮುತ್ತಪ್ಪ ಏಳ್ ನಾಡ್ ಯಡವ ನಾಡ್ ಅಂದ್ ಇಂದ್ ಕುರಿತು ಮಾತನಾಡಿದರು. ನೆರವಂಡ ವೀಣಾ ಅಧ್ಯಕ್ಷತೆ ವಹಿಸಿದ್ದರು. ಕಾಳಿಮಡ ಜಿಮ್ಮಿ, ಚೇಮಿರ ಭೀಮಯ್ಯ ಪಾಲ್ಗೊಂಡಿದ್ದರು.