

ಅಳವಂಡಿ: ಸಂಗೀತ, ನಾಟಕ, ಬಯಲಾಟ ಕಲೆಗಳು ಮನಸ್ಸನ್ನು ಮುದಗೊಳಿಸುತ್ತವೆ ಹಾಗೂ ಉಲ್ಲಾಸದಿಂದ ಇರುವಂತೆ ಮಾಡುತ್ತವೆ ಎಂದು ಶಿಕ್ಷಣಪ್ರೇಮಿ ಭರಮಪ್ಪ ನಗರ ತಿಳಿಸಿದರು.
ಇದನ್ನೂ ಓದಿ: ಸಾಹಿತ್ಯ, ಸಂಗೀತ, ನಾಟಕದಲ್ಲಿ ಅಭಿರುಚಿ ಹೆಚ್ಚಲಿ
ಸಮೀಪದ ಹಟ್ಟಿ ಗ್ರಾಮದ ಶ್ರೀ ಲಕ್ಕಂಬೆ-ದುರ್ಗಾಂಬೆ ದೇವಸ್ಥಾನದಲ್ಲಿ ಗ್ರಾಮಸ್ಥರು ಆಯೋಜಿಸಿದ್ದ ಸಂಗೀತ ಹಾಗೂ ಗೀಗಿ ಪದ ಕಾರ್ಯಕ್ರಮ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.
ಮೊಬೈಲ್, ಟಿ.ವಿ ಬಂದ ನಂತರ ಸಂಗೀತ ಕಾರ್ಯಕ್ರಮ, ರಂಗಭೂಮಿ ಇತರ ಜಾನಪದ ಕಲೆಗಳು ಮರೆಯಾಗುತ್ತಿವೆ. ಇವುಗಳನ್ನು ಉಳಿಸಿ ಬೆಳೆಸಲು ಎಲ್ಲರ ಸಹಕಾರ ಅಗತ್ಯ. ನಾಟಕ, ಗೀಗಿಪದ, ಜಾನಪದ ಹಾಡುಗಳು, ಹಂತಿಪದ, ಸೋಬಾನೆ ಹಾಡುಗಳು ಮುಂತಾದ ಕಲೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕಿದೆ ಎಂದರು.
ಕಲಾವಿದೆ ಹುಲಿಗೆವ್ವ ಹಾಗೂ ಸಂಗಡಿಗರು, ಬಸವರಾಜ ಲಕ್ಕುಂಡಿ ಹಾಗೂ ಸಂಗಡಿಗರಿಂದ ಸಂಗೀತ ಮತ್ತು ಗೀಗಿ ಪದ ಕಾರ್ಯಕ್ರಮ ನಡೆಯಿತು. ಕಲಾವಿದ ಪಕೀರಸಿದ್ದಪ್ಪ ಚೌಡಕಿ, ಪ್ರಮುಖರಾದ ತೋಟಪ್ಪ ಶಿಂಟ್ರ, ಹೊನ್ನಪ್ಪಗೌಡ, ನಿಂಗನಗೌಡ ಗೌಡ್ರ, ಗುಡದಪ್ಪ ಚಂಡೂರು, ಗುಡದಪ್ಪ ಚಿಲವಾಡಗಿ, ಗವಿಸಿದ್ದಪ್ಪ ತಳಕಲ್, ಭರಮಪ್ಪ, ಹನುಮಗೌಡ, ಗೊರಪ್ಪ, ಪೂಜಾರಪ್ಪ, ರಾಮಣ್ಣ, ಕರಿಯಪ್ಪ, ಖಾದರಸಾಬ, ಮುಸ್ತುಸಾಬ, ಲಕ್ಕಪ್ಪ ಆಲೂರು ಇತರರಿದ್ದರು.