ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ, ಜೀವನವೆಲ್ಲ ಯೋಗಮಯವಾಗಿರಲಿ ಎಂದ ಜಿಲ್ಲಾಧಿಕಾರಿ ಟಿ.ಭೂಬಾಲನ್

DC SP IN YOGA DAY
ವಿಜಯಪುರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಾಗೂ ರಾಜ್ಯ ಮಟ್ಟದ ಯೋಗೋತ್ಸವದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಹಾಗೂ ಎಸ್‌ಪಿ ಲಕ್ಷ್ಮಣ ನಿಂಬರಗಿ ಆಸನ ಗಮನ ಸೆಳೆಯಿತು.
Published on

ವಿಜಯಪುರ: ಯೋಗ ಬದುಕಿನ ಅವಿಭಾಜ್ಯ ಅಂಗವಾಗಬೇಕು. ಇಡೀ ಬದುಕೇ ಯೋಗಮಯವಾಗಿರಬೇಕು. ಅಂದಾಗ ಆರೋಗ್ಯ, ನೆಮ್ಮದಿ ಹಾಗೂ ಸಂತೃಪ್ತಿ ಹೊಂದಲು ಸಾಧ್ಯ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಧಾರವಾಡ ಬಾಲ ವಿಕಾಸ ಅಕಾಡೆಮಿ ಹಾಗೂ ಜಿಲ್ಲಾ ಆಯುಷ್ ಇಲಾಖೆ ಸಹಯೋಗದಲ್ಲಿ ‘ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ’ ಎಂಬ ಘೋಷವಾಕ್ಯದೊಂದಿಗೆ ಶನಿವಾರ ನಡೆದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಾಗೂ ರಾಜ್ಯ ಮಟ್ಟದ ಯೋಗೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪಾಶ್ಚಾತ್ಯ ರಾಷ್ಟ್ರಗಳಿಗೆ ಯೋಗ ಪರಿಚಯಿಸಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ಇಡೀ ಪ್ರಪಂಚವೇ ಇಂದು ಯೋಗದತ್ತ ಆಕರ್ಷಣೆಗೊಳ್ಳುತ್ತಿದೆ. ಈ ದಿನ ದೇಶ- ವಿದೇಶಗಳಲ್ಲೂ ಯೋಗ ದಿನ ಅಚರಿಸಲಾಗುತ್ತಿದ್ದು, ಅಷ್ಟೊಂದು ಜನಪ್ರಿಯವಾಗಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ ಪರಿಣಾಮಕಾರಿ ಸಾಧನವಾಗಿದೆ. ಯೋಗದಿಂದ ಅನೇಕ ಆರೋಗ್ಯ ಪ್ರಯೋಜನಗಳಿದ್ದು, ಯೋಗ ರೂಢಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯ ಹೊಂದಬೇಕು ಎಂದು ಹೇಳಿದರು.

ಸಸಿಗೆ ನೀರುಣಿಸುವ ಮೂಲಕ ಉದ್ಘಾಟನೆ ನೆರವೇರಿಸಿದ ಧಾರವಾಡದ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ದೈಹಿಕ ಹಾಗೂ ಮಾನಸಿಕ ಸದೃಢತೆ ಹಾಗೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ದೈನಂದಿನ ಜೀವನದಲ್ಲಿ ಯೋಗವನ್ನು ನಮ್ಮ ದಿನಚರಿಯನ್ನಾಗಿ ಮಾಡಿಕೊಳ್ಳಬೇಕೆಂದರು.

ಯೋಗವು ಈ ದೇಶದ ಕೊಡುಗೆಯಾಗಿದೆ. ಯೋಗವು ಅತ್ಯಂತ ಸೂಕ್ಷ್ಮವಾದ ವಿಜ್ಞಾನವನ್ನು ಆಧರಿಸಿದ ಆಧ್ಯಾತ್ಮಿಕ ಶಿಸ್ತು. ಇದು ಮನಸ್ಸು ಮತ್ತು ದೇಹದ ನಡುವಿನ ಸಮತೋಲನ ತರುತ್ತದೆ. ಯೋಗವು ಆರೋಗ್ಯಕರ ಜೀವನದ ಕಲೆ ಮತ್ತು ವಿಜ್ಞಾನವಾಗಿದೆ. ಮನಸ್ಸು ಮತ್ತು ದೇಹ, ಮನುಷ್ಯ ಮತ್ತು ಪ್ರಕೃತಿಯ ನಡುವಿನ ಪರಿಪೂರ್ಣ ಸಾಮರಸ್ಯವಾಗಿದೆ. ದೈಹಿಕ, ಮಾನಸಿಕ ಸದೃಢತೆಗೆ ಯೋಗ ಸಹಕಾರಿ ಎಂದರು.

ಸುನೀತಾ ಬಿರಾದಾರ, ಜ್ಯೋತಿ, ಗೀತಾಂಜಲಿ ದಾಸರ, ಶುಭಂ ಅವರು ಯೋಗಾಸನ ಮತ್ತು ಪ್ರಾಣಾಯಾಮದ ಅಭ್ಯಾಸ ಮಾಡಿಸಿದರು.

ಸಿಇಒ ರಿಷಿ ಆನಂದ, ಎಸ್‌ಪಿ ಲಕ್ಷ್ಮಣ ನಿಂಬರಗಿ, ಎಡಿಸಿ ಸೋಮಲಿಂಗ ಗೆಣ್ಣೂರ, ಜಿಪಂ ಉಪ ಕಾರ್ಯದರ್ಶಿ ವಿಜಯಕುಮಾರ ಅಜೂರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಕೆ. ಚವಾಣ್, ಜಿಲ್ಲಾ ಆಯುಷ್ ಇಲಾಖೆಯ ಅಧಿಕಾರಿ ಡಾ. ವಿದ್ಯಾವತಿ ಅಥಣಿ, ಶಸ್ತ್ರ ಚಿಕಿತ್ಸಕ ಡಾ.ಶಿವಾನಂದ ಮಾಸ್ತಿಹೊಳಿ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ ಮತ್ತಿತರರಿದ್ದರು. ವಿರೇಶ ವಾಲಿ ತಂಡದಿಂದ ನಾಡಗೀತೆ ಪ್ರಸ್ತುತಪಡಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net