

ವಿಜಯವಾಣಿ ಸುದ್ದಿಜಾಲ ಉಡುಪಿ
ಕುಟುಂಬದ ಜವಾಬ್ದಾರಿಯ ನಡುವೆ ಮಹಿಳೆ ತನ್ನ ಆರೋಗ್ಯದ ಕಾಳಜಿಯನ್ನೇ ಮರೆತಿರುತ್ತಾಳೆ. ಹೀಗಾಗಿ 35-40 ವರ್ಷ ದಾಟಿದ ಪ್ರತಿ ಮಹಿಳೆಯೂ ದೈಹಿಕವಾಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಬೇಕು. ಅಲ್ಲದೆ, ಆರೋಗ್ಯ ರಕ್ಷಣೆಗಾಗಿ ನಿತ್ಯ ಯೋಗಾಭ್ಯಾಸದಲ್ಲಿ ನಿರತರಾಗಬೇಕು ಎಂದು ಪ್ರಸೂತಿ ತಜ್ಞೆ ಡಾ. ಅಶ್ವಿನಿ ಎ.ಪಿ. ಸಲಹೆ ನೀಡಿದರು.
ಉಡುಪಿ ಜಿಲ್ಲಾ ಪತಂಜಲಿ ಯೋಗ ಪೀಠ (ಹರಿದ್ವಾರ) ಹಾಗೂ ಮಹಿಳಾ ಪತಂಜಲಿ ಯೋಗ ಸಮಿತಿ ಉಡುಪಿ ವತಿಯಿಂದ ಮಥುರಾ ಕಂಫರ್ಟ್ನಲ್ಲಿ ಮಾ.8ರಂದು ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ನಗರಸಭಾ ಉಪಾಧ್ಯಕ್ಷೆ ರಜಿನಿ ಹೆಬ್ಬಾರ್, ನಗರಸಭಾ ಸದಸ್ಯೆ ಅಮೃತಾ ಕೃಷ್ಣಮೂರ್ತಿ ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಸನ್ಮಾನಿಸಲಾಯಿತು. ವಿವಿಧ ಕಕ್ಷೆಯ ಯೋಗಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಚನ್ನಮ್ಮ ಉಡುಪ ಹಾಗೂ ತಂಡ ಪ್ರಾರ್ಥಿಸಿದರು. ಜಿಲ್ಲಾ ಪತಂಜಲಿ ಮಹಿಳಾ ಪ್ರಭಾರಿ ಲೀಲಾ ಆರ್. ಅಮೀನ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಾವತಿ ವಂದಿಸಿದರು.