

ರಾಣೆಬೆನ್ನೂರ: ಸಮಾಜದಲ್ಲಿ ಮಹಿಳೆ ಮತ್ತು ಪುರುಷರಿಗೆ ಸಮಾನ ಅವಕಾಶ ಕಲ್ಪಿಸಿಕೊಡಬೇಕು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಯಶ್ರೀ ಪಾಟೀಲ ಹೇಳಿದರು.
ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಸೋಮವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳಾ ದಿನಾಚರಣೆ ದಿನದಂದು ಮಹಿಳೆಯರಿಗೆ ಸಿಗುವ ಗೌರವ ವರ್ಷಪೂರ್ತಿ ದೊರಕುವಂತಾಗಬೇಕು. ಸಮಾಜದ ವಿವಿಧ ರಂಗಗಳಲ್ಲಿ ಮಹಿಳೆಯರು ಅದ್ಭುತ ಸಾಧನೆ ಮಾಡಿದ್ದಾರೆ. ಅಂತಹ ಸಾಧಕಿಯರನ್ನು ನೆನಪಿಸಿಕೊಂಡು ಅವರ ತತ್ವಾದರ್ಶಗಳನ್ನು ಪಾಲಿಸಬೇಕು ಎಂದರು.
‘ಪೌಷ್ಟಿಕ ಕೈ ತೋಟದ ಮಹತ್ವ ’ ವಿಷಯ ಕುರಿತು ಉಪನ್ಯಾಸ ನೀಡಿದ ಡಾ. ಸಂತೋಷ ಎಚ್.ಎಂ., ರಸಾಯನಿಕ ಮುಕ್ತ ಹಣ್ಣು ಮತ್ತು ತರಕಾರಿ ಸೇವಿಸಲು ಕಡಿಮೆ ವೆಚ್ಚದಲ್ಲಿ ಪ್ರತಿ ಮನೆಯ ಹಿತ್ತಲಿನಲ್ಲಿ ಅಥವಾ ಮೇಲ್ಛಾವಣಿಯಲ್ಲಿ ಕೈ ತೋಟವನ್ನು ನಿರ್ವಿುಸಿಕೊಳ್ಳಬೇಕು. ಇದರಿಂದ ತಾಜಾ, ವಿಷಮುಕ್ತ ತರಕಾರಿ ಮತ್ತು ಹಣ್ಣು ದೊರೆಯುವುದಲ್ಲದೇ ಖರ್ಚು ಸಹ ಕಡಿಮೆಗೊಳಿಸಬಹುದು ಎಂದರು.
ಪ್ರಮುಖರಾದ ಶೋಭಾ ಹುಲ್ಮನಿ, ಡಾ. ಕೆ.ಪಿ. ಗುಂಡಣ್ಣವರ, ಮಾಲಾ ಬಳಿಗಾರ ಮತ್ತಿತರರು ಉಪಸ್ಥಿತರರಿದ್ದರು.