ಮುಖ್ಯದ್ವಾರ ಅಭಿವೃದ್ಧಿಯ ಸಂಕೇತ: ಇಡುವ ಸ್ಥಳ, ದಿಕ್ಕುಗಳ ಬಗ್ಗೆ ಇರಲಿ ಎಚ್ಚರ

10
Published on

ಬೆಂಗಳೂರು: ಮನೆಯ ಅಭಿವೃದ್ದಿ, ಲಾಭ-ನಷ್ಟ ಎಲ್ಲವೂ ಪ್ರವೇಶದ್ವಾರ (ಮುಂಬಾಗಿಲು) ಇರುವ ಸ್ಥಾನದ ಮೇಲೆ ಅವಲಂಬಿತವಾಗಿರುತ್ತದೆ. ಮಾತ್ರವಲ್ಲ, ಬಾಗಿಲು ಆಕರ್ಷಕವಾಗಿದ್ದಷ್ಟು ಮನೆಯ ವಿನ್ಯಾಸದ ಮಹತ್ವ ಸೂಚಿಸುತ್ತದೆ. ಹಾಗೆಯೇ ಮನೆಯ ಮುಖ್ಯ ಭಾಗವಾಗಿರುವ ಮುಂಬಾಗಿಲು ವಾಸ್ತುಪ್ರಕಾರ ಬಹಳ ಮಹತ್ವದ ಸ್ಥಾನ ಪಡೆದುಕೊಂಡಿದೆ. ಆದ್ದರಿಂದ ಮನೆಯ ಒಳಾಂಗಣ ಹಾಗೂ ಹೊರಾಂಗಣ ವಿನ್ಯಾಸಗಳಿಗೆ ನೀಡುವಷ್ಟೇ ಆದ್ಯತೆಯನ್ನು ಮನೆಯ ಮುಂಬಾಗಿಲು ವಿನ್ಯಾಸ ಹಾಗೂ ಅವುಗಳನ್ನು ಇರಿಸುವ ಸ್ಥಳ ಮತ್ತು ದಿಕ್ಕಿನ ಬಗ್ಗೆಯೂ ನೀಡಬೇಕು. ಈ ನಿಟ್ಟಿನಲ್ಲಿ ಹೆಚ್ಚಾಗಿ ಮುಖ್ಯದ್ವಾರ ಹಾಗೂ ಕಿಟಕಿಗಳು ಕಟ್ಟಡದ ಉತ್ತರ ಇಲ್ಲವೇ ಪೂರ್ವ ದಿಕ್ಕಿಗೆ ಇದ್ದರೆ ಒಳ್ಳೆಯದು ಎನ್ನುತ್ತಾರೆ ವಾಸ್ತು ತಜ್ಞರು.

ಮುಖ್ಯದ್ವಾರದ ಗಾತ್ರ ದೊಡ್ಡದಿರಲಿ:

ಮನೆಯ ಇತರೆ ಬಾಗಿಲುಗಳಿಗೂ ಹಾಗೂ ಮುಖ್ಯ ಬಾಗಿಲಿಗೂ ಗಾತ್ರದಲ್ಲಿ ಸ್ವಲ್ಪ ಬದಲಾವಣೆ ಇರಬೇಕು. ಅಂದರೆ ಮನೆಯ ಮುಂಬಾಗಿಲು ಇತರೆ ಬಾಗಿಲುಗಳಿಗಿಂತ ಗಾತ್ರದಲ್ಲಿ ದೊಡ್ಡದಾಗಿರಬೇಕು. ಮನೆಯ ಒಳಗೆ ಪ್ರವೇಶಿಸಲು ಅದೇ ಪ್ರಧಾನವಾಗಿರಬೇಕು. ಉಳಿದಂತೆ ಇತರೆ ಬಾಗಿಲುಗಳು ಎಲ್ಲವೂ ಒಂದೇ ಗಾತ್ರದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಮನೆ ಪ್ರವೇಶದ್ವಾರ ಒಂದು ಇದ್ದರೆ ಒಳ್ಳೆಯದು. ಎರಡು ಇದ್ದರೂ ಪರವಾಗಿಲ್ಲ. ಆದರೆ ಅದಕ್ಕಿಂತ ಹೆಚ್ಚು ಬಾಗಿಲು ಇದ್ದರೆ ಮನೆಯಲ್ಲಿ ಸಮಸ್ಯೆಗಳು ಕಾಡಲಿವೆಯಂತೆ.

ಎಷ್ಟು ಬಾಗಿಲುಗಳಿದ್ದರೆ ಒಳಿತು:

ಮನೆಗೆ ಬಾಗಿಲು ಹಾಗೂ ಕಿಟಕಿಗಳು ಸಮ ಸಂಖ್ಯೆಯಲ್ಲಿರಬೇಕು. ಉದಾ: 2-4-6. ಹಾಗಿದ್ದರೆ ಮನೆಗೆ ಉತ್ತಮ ಗಾಳಿ ಬೆಳಕು ಬರುವುದಲ್ಲದೆ ಮನೆಗೂ ಒಳ್ಳೆಯ ಲ ದೊರೆಯಲಿದೆ. ಒಂದು ಬಾಗಿಲು ಶುಭಕರ, ಎರಡು ಒಳ್ಳೆಯದು, ಮೂರು- ಕಲಹ, ಶತ್ರುವೃದ್ಧಿ. ನಾಲ್ಕು- ದೀರ್ಘಾಯಸ್ಸು, ಐದು- ರೋಗ ಹಾಗೂ ಮೃತ್ಯುಬಾಧೆ, ಆರು- ಪುತ್ರಪ್ರದ, ಏಳು- ಮೃತ್ಯುಪ್ರದ, ಎಂಟು- ಚಿರಭಾಗ್ಯ, ಒಂಬತ್ತು- ದೇಹ ಪೀಡೆ, ಹತ್ತು- ನಾಶ, ಕಳ್ಳರ ಭಯ, ಹನ್ನೊಂದು- ಸಂಪತ್ತು ನಾಶ. ಹನ್ನೆರಡು- ವ್ಯಾಪಾರದಲ್ಲಿ ಅಭಿವೃದ್ಧಿ ಎನ್ನಲಾಗಿದೆ. ಹಾಗಾಗಿ ಮನೆ ನಿರ್ಮಾಣ ವೇಳೆ ಬಾಗಿಲುಗಳು ಎಲ್ಲೆಲ್ಲಿ, ಎಷ್ಟು ಇರಬೇಕು ಎಂಬ ಬಗ್ಗೆ ಮೊದಲೇ ಲೆಕ್ಕಾಚಾರ ಹಾಕಿಕೊಂಡು ಮನೆ ಕಟ್ಟಿಸಬೇಕು ಎನ್ನುತ್ತಾರೆ ವಾಸ್ತು ತಜ್ಞರು.

ಎದುರಿಗೆ ಮರ ಇರಬಾರದು:

ಮನೆ ಗೋಡೆಯ ಮಧ್ಯಭಾಗಕ್ಕೆ ಬಾಗಿಲು ಇರಿಸುವುದು ಸೂಕ್ತವಲ್ಲ. ಹಾಗೆಯೇ ಮುಖ್ಯದ್ವಾರಕ್ಕೆ ಎದುರಾಗಿ ಮೆಟ್ಟಿಲುಗಳು ಇರಬಾರದು.ದೊಡ್ಡಮರ, ದೇವಸ್ಥಾನ, ದೀಪದ ಕಂಬ ಇರುವುದು ಸೂಕ್ತವಲ್ಲ. ಸೂರ್ಯನ ಕಿರಣಗಳು ನೇರವಾಗಿ ಮನೆ ಪ್ರವೇಶಿಸುವ ರೀತಿಯಲ್ಲಿ ಇರಬೇಕು. ಹಾಗೆಯೇ ಹೆಚ್ಚು ಮಹಡಿ ಇದ್ದರೆ ಬಾಗಿಲ ಮೇಲೆ ಬಾಗಿಲು ಬರುವಂತೆ ವಿನ್ಯಾಸ ಮಾಡಬಾರದು. ಹಾಗಿದ್ದರೆ ಬಡತನ, ಹಣಕಾಸಿನ ತೊಂದರೆ ಆಗುತ್ತದೆ ಎಂಬುದು ನಂಬಿಕೆ.

ಶ್ರೇಷ್ಠ ಮರ:

ಮನೆ ಬಾಗಿಲಿಗೆ ಸಾಗುವಾನಿ (ಟೀಕ್) ಮರ ಶ್ರೇಷ್ಠ. ಆದರೆ ಇದು ದುಬಾರಿ ಆಗಿರುವುದರಿಂದ ಎಲ್ಲರಿಗೂ ಇಷ್ಟು ದೊಡ್ಡ ಮೊತ್ತದ ಹಣ ಖರ್ಚು ಮಾಡಿ ಸಾಗುವಾನಿ ಮರ ಹಾಕಿಸಲು ಸಾಧ್ಯವಿಲ್ಲ. ಆದರೆ ಮನೆಯ ಮುಂಬಾಗಿಲಾದರೂ ಸಾಗುವಾನಿ ಮರದ್ದಾಗಿದ್ದರೆ ಒಳ್ಳೆಯದು.ಮುಖ್ಯದ್ವಾರಕ್ಕೆ ಕುಸುರಿ ಸ್ಪರ್ಶ

ಮುಖ್ಯದ್ವಾರದ ಬಾಗಿಲು ಕೇವಲ ಗಾತ್ರದಲ್ಲಿ ದೊಡ್ಡದಿದ್ದರೆ ಸಾಲದು. ಮನೆಯ ಇತರೆ ಬಾಗಿಲುಗಳಿಗಿಂತ ಆಕರ್ಷಕವಾಗಿರಬೇಕು. ಅದಕ್ಕಾಗಿ ಕುಸುರಿ ಮಾಡಿಸಿದರೆ ಚೆಂದ. ಅದರಲ್ಲೂ ಕೆಲವು ನಿಯಮಗಳಿವೆ. ಬಾಗಿಲ ಹೊರಭಾಗದಲ್ಲಿ ದೇವತೆಗಳ ಚಿತ್ರ ಮೂಡಿಸುವುದು ಒಳಿತಲ್ಲ. ಈ ಬಗ್ಗೆ ಎಚ್ಚರವಿರಬೇಕು. ಆದರೆ ಆನೆಯನ್ನು ಒಳಗೊಂಡಂತೆ ತಾವರೆ ಹೂ ಮೇಲೆ ಕುಳಿತಿರುವ ಲಕ್ಷ್ಮಿ ಚಿತ್ರ ಶುಭ ಲ ನೀಡುತ್ತದೆ. ಗಿಳಿ, ನವಿಲು, ಹಂಸ ಪಕ್ಷಿಗಳ ಚಿತ್ತಾರ ಹಾಗೂ ಪ್ರಕೃತಿ ಚಿತ್ರ ಬಳಸಲು ವಾಸ್ತುವಿನಲ್ಲಿ ಅವಕಾಶ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net