ಸಮಗ್ರ ಕೃಷಿ ಪದ್ಧತಿ ತಂಬಾಕಿಗೆ ಪರ್ಯಾಯ ಬೆಳೆ

HUN-MAY-8-5(TOBACCO BOARD PROGRAMME)
Published on

ಹುಣಸೂರು: ತಂಬಾಕಿಗೆ ಪರ್ಯಾಯ ಬೆಳೆ ಯಾವುದೆಂದು ಈವರೆಗೆ ಗುರುತಿಸಿಲ್ಲ. ಆದರೆ, ಸಮಗ್ರ ಕೃಷಿ ಪದ್ಧತಿ ಅಳವಡಿಕೆಯೇ ತಂಬಾಕಿಗೆ ಪರ್ಯಾಯ ಬೆಳೆಯಾಗಬಹುದಾಗಿದೆ ಎಂದು ತಂಬಾಕು ಮಂಡಳಿಯ ಮೈಸೂರು ಮತ್ತು ಪಿರಿಯಾಪಟ್ಟಣ ಪ್ರಾದೇಶಿಕ ವ್ಯವಸ್ಥಾಪಕ ಅಧಿಕಾರಿ(ಆರ್‌ಎಂಒ) ಜಿ.ಬುಲ್ಲಿ ಸುಬ್ಬರಾವ್ ಹೇಳಿದರು.


ತಾಲೂಕಿನ ಕಟ್ಟೆಮಳಲವಾಡಿಯ ತಂಬಾಕು ಹರಾಜು ಮಾರುಕಟ್ಟೆಯ ರೈತಭವನದಲ್ಲಿ ಬುಧವಾರ ಮಂಡಳಿ ವತಿಯಿಂದ ಎಫ್‌ಸಿವಿ ತಂಬಾಕಿಗೆ ಇತರ ಆರ್ಥಿಕವಾಗಿ ಲಾಭದಾಯಕ ಪರ್ಯಾಯ ಬೆಳೆಗಳ ಪ್ರೋತ್ಸಾಹ ಕುರಿತು ಆಯೋಜಿಸಿದ್ದ ಬೆಳೆಗಾರರ ಜಾಗೃತಿ ಸಭೆಯಲ್ಲಿ ಮಾತನಾಡಿದರು.
ತಂಬಾಕು ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ತಂಬಾಕಿಗೆ ಪರ್ಯಾಯವಾಗಿ ರೈತರನ್ನು ಆರ್ಥಿಕವಾಗಿ ಸದೃಢಗೊಳಿಸುವ ಯಾವುದೇ ಬೆಳೆ ಕಂಡುಬಂದಿಲ್ಲ. ಇದೀಗ ತಂಬಾಕು ಕೃಷಿಯಲ್ಲಿ ಸಾಕಷ್ಟು ನೂತನ ತಂತ್ರಜ್ಞಾನಗಳ ಅಳವಡಿಕೆಯಿಂದಾಗಿ ಕಡಿಮೆ ಭೂಮಿಯಲ್ಲಿ ಹೆಚ್ಚಿನ ಇಳುವರಿ ಪಡೆಯಬಹುದು. ಹಾಗಾಗಿ ರೈತರು ತಂಬಾಕು ಕೃಷಿ ಭೂಮಿಯನ್ನು ಕಡಿತಗೊಳಿಸಿ ಉಳಿದ ಭೂಮಿಯಲ್ಲಿ ಸಮಗ್ರ ಕೃಷಿ ಪದ್ಧತಿಯ ಮೂಲಕ ವಿವಿಧ ಬೆಳೆಗಳನ್ನು ಬೆಳೆದಲ್ಲಿ ಆರ್ಥಿಕ ಸ್ಥಿರತೆ ಸಾಧಿಸಲು ಸಾಧ್ಯ. ತೋಟಗಾರಿಕೆ, ಅರಣ್ಯ, ರೇಷ್ಮೆ ಮುಂತಾದ ಕೃಷಿಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದು ರೈತರು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕೋರಿದರು.


ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರದ(ಸಿಟಿಆರ್‌ಐ)ಮುಖ್ಯಸ್ಥ ಡಾ.ಎಸ್.ರಾಮಕೃಷ್ಣನ್ ಮಾತನಾಡಿ, ತಂಬಾಕು ಕೃಷಿಯಲ್ಲಿನ ಆಧುನಿಕ ಪದ್ಧತಿಗಳು, ಮಂಡಳಿ ನೀಡುತ್ತಿರುವ ಗುಣಮಟ್ಟದ ರಾಸಾಯನಿಕ ಗೊಬ್ಬರ, ಸಿಟಿಆರ್‌ಐ ಒದಗಿಸುತ್ತಿರುವ ಗುಣಮಟ್ಟದ ಬೀಜಗಳಿಂದಾಗಿ ರೈತರು ಮಂಡಳಿ ನಿಗದಿಪಡಿಸಿದ ಪ್ರಮಾಣ 1,800 ಕೆಜಿ ತಂಬಾಕನ್ನು 2 ಎಕರೆಯಲ್ಲೇ ಬೆಳೆಯುವ ಸಾಧ್ಯತೆಗಳಿವೆ. ಹಾಗಾಗಿ ಸಿಂಗಲ್ ಬ್ಯಾರನ್‌ಗೆ ಪ್ರಸ್ತುತ ನಿಗದಿಪಡಿಸಿರುವ 4.25 ಎಕರೆಯಲ್ಲಿ ಉಳಿಯುವ ಅರ್ಧಭಾಗದ ಭೂಮಿಯಲ್ಲಿ ಇತರ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು ಎಂದು ಸಲಹೆ ನೀಡಿದರು.


ರೈತ ಮುಖಂಡ ಬಿ.ಎನ್.ನಾಗರಾಜಪ್ಪ ಮಾತನಾಡಿ, ಕೃಷಿ, ತೋಟಗಾರಿಕೆ, ರೇಷ್ಮೆ ಮುಂತಾದ ಇಲಾಖೆಗಳು ವಿವಿಧ ಯೋಜನೆಗಳನ್ನು ಜಾರಿಗೆ ತಂದರೂ ಹಲವು ತೊಡಕುಗಳಿವೆ. ಇದರ ಸರಳೀಕರಣವಾಗದೆ ರೈತರು ಸಮಗ್ರ ಕೃಷಿ ಪದ್ಧತಿಗೆ ತೆರಳುವುದು ಅಸಾಧ್ಯ ಎಂದರು.


ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ನೇತ್ರಾವತಿ, ಕೃಷಿ ಅಧಿಕಾರಿ ಶ್ರೀಕಾಂತ್, ಪಶುವೈದ್ಯಾಧಿಕಾರಿ ಡಾ.ಭರತ್ ಇಲಾಖೆಗಳಲ್ಲಿ ರೂಪಿಸಿರುವ ವಿವಿಧ ಯೋಜನೆಗಳ ಕುರಿತು ಮಾಹಿತಿ ಒದಗಿಸಿದರು. ಹರಾಜು ಅಧೀಕ್ಷಕರಾದ ಧನರಾಜ್, ಸಿದ್ದರಾಮ ಡಾಂಗೆ, ತಂಬಾಕು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮೋದೂರು ಶಿವಣ್ಣ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net