

ಕುದೂರು : ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಒಟ್ಟಿಗೆ ಸೇರಿಸಿ ಕಲಿಕೆಗೆ ಪೂರಕ ವಾತಾವರಣ ನಿರ್ಮಾಣ ಮಾಡಿದಾಗ ಮಾತ್ರ ಮಕ್ಕಳು ಕಲಿಕೆಯತ್ತ ಆಸಕ್ತಿ ತೋರುತ್ತಾರೆ ಎಂದು ಇಸಿಒ ಗಂಗಾಧರ್ ಹೇಳಿದರು.
ಹೋಬಳಿಯ ವಡ್ಡರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಇತ್ತೀಚೆಗೆ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಹುಲಿಕಲ್ ಕ್ಲಸ್ಟರ್ ಹಂತದ ಎ್ಎಲ್ಎನ್ ಕಲಿಕಾ ಹಬ್ಬ ಉದ್ಘಾಟಿಸಿ ಮಾತನಾಡಿ, ಕಲಿಕಾ ಹಬ್ಬ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿಯಾಗಿದೆ. ಮಕ್ಕಳ ಕಲಿಕೆಯನ್ನು ಫಲಪ್ರದಗೊಳಿಸಲು ಶಿಕ್ಷಣ ಇಲಾಖೆ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ ಎಂದು ತಿಳಿಸಿದರು.
ಸರ್ಕಾರಿ ನೌಕರರ ಸಂಘದ ನಿರ್ದೇಶಕ ಮಲ್ಲೂರು ಲೋಕೇಶ್ ಮಾತನಾಡಿ, ಕಲಿಕೆಯ ದೃಢೀಕರಣವೇ ಕಲಿಕಾ ಹಬ್ಬದ ಮೂಲ ಉದ್ದೇಶ. ವಿದ್ಯಾರ್ಥಿಗಳು ಸಂತೋಷದಿಂದ ಇಂತಹ ಚಟುವಟಿಕೆಗಳಲ್ಲಿ ಪಾಲ್ಗೊಂಡಾಗ ಜ್ಞಾನ ವಿಕಸನವಾಗಲಿದ್ದು, ಶೈಕ್ಷಣಿಕ ಕಲಿಕಾ ಶಕ್ತಿ ಹೆಚ್ಚಲು ಸಹಕಾರಿಯಾಗುತ್ತದೆ ಎಂದರು.
ಸಿಆರ್‌ಪಿ ಶಿವಕುಮಾರ್ ಮಾತನಾಡಿ, ಸರ್ಕಾರಿ ಶಾಲೆಯ ಕಿರಿಯ ಪ್ರಾಥಮಿಕ ಹಂತದ ಮಕ್ಕಳ ಕಲಿಕೆಯ ಬಗ್ಗೆ ಸಮುದಾಯದ ಗಮನ ಸೆಳೆಯುವಲ್ಲಿ ಈ ಕಲಿಕಾ ಹಬ್ಬ ಸಹಕಾರಿಯಾಗಿದೆ ಎಂದರು.
ರಾಜ್ಯ ಸಂಸ್ಕೃತ ಪಾಠಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ವಿದ್ವಾನ್ ಎಂ. ರಾಜಣ್ಣ ಮಾತನಾಡಿ, ಮಕ್ಕಳು ಸಮಗ್ರವಾಗಿ ಕಲಿತು ಬೆಳೆಯಲು ಹೊಸತನದ ಕಲಿಕೆಗೆ ಕಲಿಕಾ ಹಬ್ಬ ಪೂರಕವಾಗಿದೆ. ಶಿಕ್ಷಕರು ಹೇಳುವ ಪಾಠವನ್ನು ಇಷ್ಟಪಟ್ಟು ಕೇಳಬೇಕು. ಅಂದಾಗ ಮಾತ್ರ ವಿದ್ಯಾರ್ಥಿಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿ ಹೊಂದಲು ಸಾಧ್ಯ ಎಂದರು.
ಹುಲಿಕಲ್ ಕ್ಲಸ್ಟರ್‌ನ 10ಕ್ಕೂ ಹೆಚ್ಚು ಶಾಲೆಗಳ ವಿದ್ಯಾರ್ಥಿಗಳಿಗೆ ಗಟ್ಟಿ ಓದು, ಶುದ್ಧ ಬರಹ, ಗಣಿತ ಚಟುವಟಿಕೆ, ರಸಪ್ರಶ್ನೆ, ಕಥೆ ಕಟ್ಟುವುದು, ಕಥೆ ಹೇಳುವುದು, ಜ್ಞಾಪಕ ಶಕ್ತಿ ಚಟುವಟಿಕೆ ಸೇರಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಲಿಕಾ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.