

ಯಲಬುರ್ಗಾ: ರಜೆ ದಿನಗಳಲ್ಲಿ ಸರ್ಕಾರಿ ಶಾಲೆಗಳ ಸಬಲೀಕರಣ ದೃಷ್ಟಿಯಿಂದ ಸೇವೆ ಸಲ್ಲಿಸುತ್ತಿರುವ ಗುರುಬಳಗದ ಕಾರ್ಯ ಶ್ಲಾಘನೀಯ ಎಂದು ಚಿಕ್ಕಬನ್ನಿಗೋಳ ಶಾಲೆಯ ಹಳೆಯ ವಿದ್ಯಾರ್ಥಿ ಧನ್ನುಪ್ರಸಾದ ಹೇಳಿದರು.
ತಾಲೂಕಿನ ಚಿಕ್ಕಬನ್ನಿಗೋಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವಬಂಧು ಸೇವಾ ಗುರುಬಳಗದಿಂದ ಭಾನುವಾರ ಹಮ್ಮಿಕೊಂಡಿದ್ದ ಗೋಡೆ ಬರಹ ಸೇವೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳಲ್ಲಿ ಕಲಿಕಾ ಆಸಕ್ತಿ ಮೂಡಿಸುವ ಚಿತ್ರ ಬರಹಗಳು, ಪ್ರೇರಣಾತ್ಮಕ ನುಡಿಗಳು, ಕಲಿಕಾಂಶಗಳನ್ನು ಬರೆದು ಶಾಲೆಯನ್ನು ಸುಂದರವಾಗಿಸಿದ ಕಾರ್ಯ ಶ್ಲಾಘನೀಯ ಎಂದರು.
ಬಳಗದ ಮುಖ್ಯಸ್ಥ ಸಿದ್ದಲಿಂಗಪ್ಪ ಶ್ಯಾಗೋಟಿ ಮಾತನಾಡಿ, ಶೈಕ್ಷಣಿಕ, ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವ ಗುರು ಬಳಗದ ಕಾರ್ಯ ಮೆಚ್ಚಿ ಧನ ಸಂಗ್ರಹಕ್ಕೆ ಮುಂದಾಗಿರುವ ಹಳೆಯ ವಿದ್ಯಾರ್ಥಿಗಳ ಕಾರ್ಯ ಶ್ಲಾಘನಾರ್ಹ ಎಂದರು.
ಎಸ್ಡಿಎಂಸಿ ಅಧ್ಯಕ್ಷ ವೆಂಕಟೇಶ ರಾಠೋಡ, ಮುಖ್ಯಶಿಕ್ಷಕ ಬಸವರಾಜ ಕುಲಕರ್ಣಿ, ಶಿಕ್ಷಕರಾದ ಮೆಹಬೂಬ್ ಬಾದಶಹ, ಬಸವರಾಜ ಮುಳಗುಂದ, ಸಂತೋಷ ಕೋರಿ, ಕೊಟ್ರೇಶ, ನಾಗರಾಜ ಹಳಿಯಾಳ, ಮರ್ದಾನ್‌ಸಾಬ್, ರೇವಪ್ಪ ಕುರಿಬಾನಿ, ಮುರ್ತುಜಾಸಾಬ್ ಮುಜಾವರ, ಮಂಜುನಾಥ ಕೊಡಕೇರಿ, ಪರಮೇಶ ಚಿಂತಾಮಣಿ, ಹನಮೇಶ ಹಿರೇಮನಿ, ಗುರುಪಾದಗೌಡ ಸೂಡಿ, ಕಳಕನಗೌಡ ಪಾಟೀಲ್, ರಮೇಶ ಹೊಂಬಳ ಇತರರಿದ್ದರು.