ಮುಂದೆ ನಮಗೇನೇ ಆದರೂ ಮನೆಯವರೇ ಕಾರಣ; ವಿರೋಧದ ನಡುವೆ ಅಂತರ್ಜಾತಿ ವಿವಾಹವಾಗಿ ವಿಡಿಯೋ ಹರಿಬಿಟ್ಟ ಪ್ರೇಮಿಗಳು..

f
Published on

ರಾಮನಗರ: ಐದು ವರ್ಷದ ಹಿಂದೆ ಉಂಟಾಗಿದ್ದ ಪ್ರೀತಿಗೆ ಕೊನೆಗೂ ಮದುವೆಯ ಮುದ್ರೆ ಸಿಕ್ಕರೂ ಹರುಷವಿಲ್ಲದೆ ಆತಂಕದಲ್ಲೇ ದಾಂಪತ್ಯ ನಡೆಸುವಂಥ ಸ್ಥಿತಿ ಈ ನವವಿವಾಹಿತರದ್ದು. ಅದೇ ಭಯದಲ್ಲಿ ಪ್ರೇಮಿಗಳಿಬ್ಬರೂ ವಿಡಿಯೋ ಮಾಡಿ ಹರಿಬಿಟ್ಟು ಹೊಸ ಬದುಕಿನ ಹೊಸ್ತಿಲನ್ನು ದಾಟಿದ್ದಾರೆ. ಆದರೆ ಇದು ಅತ್ತ ಒಂದು ಸಂಬಂಧ ಕಟ್​​, ಇತ್ತ ಇನ್ನೊಂದು ಸಂಬಂಧಕ್ಕೆ ಸೈನ್ ಎಂಬಂತಾಗಿದೆ.

ಅಂತರ್ಜಾತಿ ಎಂಬ ಕಾರಣಕ್ಕೆ ಮನೆಯವರಿಂದ ವಿರೋಧ ಎದುರಿಸುತ್ತಿದ್ದ ಪ್ರೇಮಿಗಳು ಐದು ವರ್ಷಗಳ ಬಳಿಕ ಕೊನೆಗೂ ಮದುವೆಯಾಗಲು ಧೈರ್ಯ ತೋರಿ ಯಶಸ್ವಿಯೂ ಆಗಿದ್ದಾರೆ. ಆದರೆ ಮುಂದೇನಾದರೂ ಆಗಬಹುದು ಎಂಬ ಭಯದಿಂದ ಮುನ್ನೆಚ್ಚರಿಕೆ ಕ್ರಮವಾಗಿ ವಿಡಿಯೋವೊಂದನ್ನು ಹರಿಬಿಟ್ಟಿದ್ದಾರೆ.

ರಾಮನಗರ ಜಿಲ್ಲೆ ಮಾಗಡಿ ತಾಲೂಕು ಸೋಲೂರಿನ ಹರ್ಷಿತಾ ಹಾಗೂ ನವೀನ್ ಜ. 31ರಂದು ರಿಜಿಸ್ಟರ್ಡ್ ಮದುವೆಯಾಗಿದ್ದಾರೆ. ಆದರೆ ಇದಕ್ಕೆ ಒಪ್ಪಿಗೆ ಇರದ ಹರ್ಷಿತಾ ಪಾಲಕರು ಆಕೆಯಿಂದ ನಿನಗೂ ನಮಗೂ ಇನ್ನು ಯಾವುದೇ ಸಂಬಂಧವಿಲ್ಲ ಎಂದು ಬರೆಸಿಕೊಂಡು ಆಸ್ತಿಹಕ್ಕು ಬಿಡುಗಡೆ ಪತ್ರಕ್ಕೂ ಸಹಿ ಮಾಡಿಸಿಕೊಂಡಿದ್ದಾರೆ. ಅತ್ತ ಸಂಬಂಧ ಕಡಿದುಕೊಳ್ಳುವುದಕ್ಕೂ ಸಹಿ ಮಾಡಿದ ಹರ್ಷಿತಾ ಇತ್ತ ಹೊಸ ಸಂಬಂಧ ಬೆಸೆಯುವುದಕ್ಕೂ ಸಹಿ ಮಾಡಿಕೊಂಡಿರುವ ವಿಪರ್ಯಾಸವೊಂದು ಈ ಮೂಲಕ ನಡೆದಿದೆ. ಅದಾಗ್ಯೂ ಮದುವೆಯಾದ ಕಾರಣಕ್ಕೆ ಮುಂದೇನಾದರೂ ಸಮಸ್ಯೆ ಆದೀತು ಎಂಬ ಭಯದಿಂದ ನಮಗೆ ಏನೇ ಆದರೂ ಮನೆಯವರೇ ಕಾರಣ ಎಂದು ಹರ್ಷಿತಾ ಹಾಗೂ ನವೀನ್​ ಇಬ್ಬರೂ ಹೇಳಿಕೊಂಡಿರುವ ವಿಡಿಯೋ ಈಗ ವೈರಲ್​ ಆಗಲಾರಂಭಿಸಿದೆ.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net