

ಬದಿಯಡ್ಕ: ಮನುಷ್ಯನ ವ್ಯಕ್ತಿತ್ವವು ಆತನ ದಿನದ ಚಟುವಟಿಕೆಗಳಿಂದ ಗೋಚರಿಸಲ್ಪಡುತ್ತದೆ. ಶಾಲಾ ಶಿಕ್ಷಣದ ಜತೆಯಲ್ಲಿ ಕಲಿತ ಪಠ್ಯಾಧಾರಿತ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಅದು ಶಾಶ್ವತವಾಗಿ ಮನದಲ್ಲಿರುತ್ತದೆ ಎಂದು ವಿದ್ವಾನ್ ಜಿ.ಎಸ್.ನಟೇಶ್ ಶಿವಮೊಗ್ಗ ಹೇಳಿದರು.
ಬದಿಯಡ್ಕ ಶ್ರೀ ಭಾರತಿ ವಿದ್ಯಾಪೀಠದಲ್ಲಿ ಗುರುವಾರ ಪ್ರೌಢಶಾಲಾ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸೋಮಾರಿತನ ತ್ಯಜಿಸಿ ಮೌಲ್ಯಾಧಾರಿತ ಚಟುವಟಿಕೆಗಳನ್ನು ಹೆಚ್ಚು ಮಾಡುವುದರಿಂದ ನಾವು ಸಬಲರಾಗುತ್ತೇವೆ. ಅವಕಾಶಗಳ ಸದ್ಭಳಕೆ ಮುಂದಿನ ಬದುಕಿಗೆ ಮಾರ್ಗದರ್ಶನವಾಗಲಿ ಎಂದರು.
ಅಗಲ್ಪಾಡಿ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಎ.ಜಿ.ಶರ್ಮ ಕೋಳಿಕ್ಕಜೆ ಉಪಸ್ಥಿತರಿದ್ದರು. ಶಾಲಾ ಆಡಳಿತ ಸಮಿತಿ ಸದಸ್ಯ ಡಾ. ಬೇ.ಸೀ.ಗೋಪಾಲಕೃಷ್ಣ ಭಟ್ ಸ್ವಾಗತಿಸಿದರು. ಮುಖ್ಯಶಿಕ್ಷಕ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಅತಿಥಿಗಳನ್ನು ಗೌರವಿಸಿ ವಂದಿಸಿದರು.