ವೃತ್ತಿ ಜೀವನದ ಯಶಸ್ಸಿಗೆ ಬೇಕು ಜ್ಞಾನ : ಅತಿಶಯ್ ಎಂ.ಜೈನ್ ಸಲಹೆ

pinnacale
Published on

ಬೆಳ್ತಂಗಡಿ: ವೃತ್ತಿಪರ ಜೀವನದ ಯಶಸ್ಸಿಗೆ ಉತ್ತಮ ಜ್ಞಾನದ ಜತೆಗೆ ಧೈರ್ಯವಾಗಿ ಅಂದುಕೊಂಡಿದ್ದನ್ನು ಸಾಧಿಸುವ ಮನೋಭಾವ ಅತ್ಯಗತ್ಯ ಎಂದು ನಿಡ್ಲೆಯ ಅಗ್ರಿಲೀಫ್ ಎಕ್ಸ್‌ಪೋರ್ಟ್ಸ್ ಸಂಸ್ಥೆಯ ಸಹಸಂಸ್ಥಾಪಕ ಅತಿಶಯ್ ಎಂ.ಜೈನ್ ಹೇಳಿದರು.

ಉಜಿರೆ ಶ್ರೀ ಧ.ಮಂ. ಸ್ವಾಯತ್ತ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ವತಿಯಿಂದ ಇಂಟರ್ನಲ್ ಕ್ವಾಲಿಟಿ ಅಶ್ಯೂರೆನ್ಸ್ ಸೆಲ್ ಸಹಯೋಗದಲ್ಲಿ ಪದವಿಪೂರ್ವ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಅಂತರ್ ಕಾಲೇಜು ಸ್ಪರ್ಧೆ ‘ಪಿನಾಕಲ್ 2024’ ಉದ್ಘಾಟಿಸಿ ಮಾತನಾಡಿದರು.

ಇಂದಿನ ವಿದ್ಯಾರ್ಥಿಗಳು ಕೇವಲ ಪುಸ್ತಕ ಜ್ಞಾನ ಹಾಗೂ ಕಾಲೇಜಿಗೆ ಸಂಬಂಧಪಟ್ಟ ವಿಷಯಗಳನ್ನು ಮಾತ್ರ ತಮ್ಮಲ್ಲಿ ರೂಢಿಸಿಕೊಂಡಿರುತ್ತಾರೆ. ಪುಸ್ತಕದ ಹೊರತಾದ ಜ್ಞಾನ ಅವರಲ್ಲಿ ಮರೆಯಾಗಿದೆ. ಆದ್ದರಿಂದ ಅವರನ್ನು ಕಂಪನಿಗಳು ಉದ್ಯೋಗಕ್ಕೆ ಪರಿಗಣಿಸದಿರುವ ಪ್ರಸಂಗಗಳು ನಡೆಯುತ್ತಿವೆ. ಹಾಗಾಗಿ ಜ್ಞಾನ ಸಂಪಾದನೆ ಕುರಿತು ವಿದ್ಯಾರ್ಥಿಗಳು ಚಿಂತನೆ ನಡೆಸಬೇಕು. ಈಗಿನ ವಿದ್ಯಾರ್ಥಿಗಳಲ್ಲಿ ಕೌಶಲದ ಕೊರತೆ ಕಾಣುತ್ತಿದೆ. ಉತ್ತಮ ಕೌಶಲ ಬೆಳೆಸಿಕೊಳ್ಳುವತ್ತ ಗಮನ ಹರಿಸಬೇಕು. ನೋಡುವ ದೃಷ್ಟಿಕೋನ ಬದಲಾಗಬೇಕು. ಸಾಮಾಜಿಕ ಜಾಲತಾಣಗಳನ್ನು ಹೆಚ್ಚು ಬಳಸುವ ವಿದ್ಯಾರ್ಥಿಗಳು ತಮ್ಮ ಗುರಿ, ತಮ್ಮ ಆಸಕ್ತಿಯ ಕುರಿತಾದ ವಿಷಯಗಳನ್ನೇ ನೋಡಿದರೆ ಅವರ ವೈಯಕ್ತಿಕ ಬೆಳವಣಿಗೆ ಸಾಧ್ಯ ಎಂದರು.

ಉಜಿರೆಯ ಶ್ರೀ ಧ.ಮಂ. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಮೋದ್ ಕುಮಾರ್ ಬಿ. ಮಾತನಾಡಿದರು.

ಶ್ರೀ ಧ.ಮಂ. ಸ್ವಾಯತ್ತ ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ.ಎಸ್.ಎನ್.ಕಾಕತ್ಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಉತ್ತಮ ಫಲಿತಾಂಶ ಬೇಕು ಎಂದರೆ ಯಾವುದೇ ಕೆಲಸ ಮುಂದೂಡದೆ ಇಂದು ಮಾಡುವ ಕೆಲಸವನ್ನು ಇಂದೇ ಮಾಡಬೇಕು. ಪ್ರಯತ್ನದಲ್ಲಿ ವಿಫಲವಾದರೆ ಅದು ಸೋಲಲ್ಲ. ಕಲಿಯುವಿಕೆಯಲ್ಲಿನ ಮೊದಲ ಹಂತ ಎಂಬ ಭಾವನೆ ಹೊಂದಿರಬೇಕು ಎಂದರು.

ಕಾರ್ಯಕ್ರಮ ಸಂಯೋಜಕ ಡಾ.ಲಕ್ಷ್ಮೀನಾರಾಯಣ ಕೆ.ಎಸ್, ಹರೀಶ್ ಶೆಟ್ಟಿ, ಅಧ್ಯಾಪಕರು ಉಪಸ್ಥಿತರಿದ್ದರು. ತಾಲೂಕಿನ ಸುಮಾರು 8 ಕಾಲೇಜುಗಳಿಂದ 11 ತಂಡಗಳು ಭಾಗವಹಿಸಿದ್ದವು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ.ರತ್ನಾವತಿ ಕೆ. ಸ್ವಾಗತಿಸಿದರು. ವಿದ್ಯಾರ್ಥಿ ಮಾಧವ್‌ದಾಸ್ ವಂದಿಸಿದರು. ವಾಣಿಜ್ಯ ವಿಭಾಗದ ಅಧ್ಯಾಪಕಿ ಸಫೀರ ಹಾಗೂ ವಿದ್ಯಾರ್ಥಿಗಳಾದ ಜಯಸೂರ್ಯ, ಗೌತಮಿ ಕಾರ್ಯಕ್ರಮ ನಿರೂಪಿಸಿದರು.

ಈಗಿನ ವಿದ್ಯಾರ್ಥಿಗಳಲ್ಲಿ ಕೀಳರಿಮೆ ಹೆಚ್ಚಾಗಿದ್ದು, ಗುರಿ ಸಾಧಿಸಲು ಅದು ತಡೆಯಾಗಿದೆ. ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕಬೇಕು ಎಂದರೆ ಹಿಂದೇಟು ಹಾಕದೆ ಮುನ್ನುಗ್ಗುವ ಮನೋಭಾವ ಹೊಂದಿರಬೇಕು. ಆತ್ಮವಿಶ್ವಾಸದಿಂದ ಕೆಲಸ ಮಾಡಿದರೆ ನಾವು ಸಶಕ್ತರಾಗುತ್ತೇವೆ ಮತ್ತು ಪ್ರಬಲರಾಗುತ್ತೇವೆ. - ಪ್ರಮೋದ್ ಕುಮಾರ್ ಬಿ. ಕಾಲೇಜಿನ ಪ್ರಾಂಶುಪಾಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net