ಅಂಗನವಾಡಿ ನೌಕಕರಿಗೆ ವೇತನ ನೀಡಿ - ಸಿಐಟಿಯು ವಿಟ್ಲ ಯೋಜನೆ ಸಮಿತಿ ಆಗ್ರಹ - ಸರ್ಕಾರಕ್ಕೆ ಬೇಡಿಕೆಗಳ ಮನವಿ ಸಲ್ಲಿಕೆ

PTR_30 SEP_1
Published on

ವಿಟ್ಲ: ಕರ್ನಾಟಕ ಅಂಗನವಾಡಿ ನೌಕರರ ಸಂಘ ಸಿಐಟಿಯು ವಿಟ್ಲ ಯೋಜನೆ ಸಮಿತಿ ವತಿಯಿಂದ ವಿಟ್ಲ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಅಂಗನವಾಡಿ ನೌಕರರ ತುರ್ತು ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಲಾಯಿತು.

ಬಾಕಿ ಇರುವ ವೇತನವನ್ನು ತಕ್ಷಣ ನೀಡಬೇಕು. ಸರ್ಕಾರದ ಆದೇಶದಂತೆ ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ ಗ್ರಾಚ್ಯುಟಿ ಮೊತ್ತವನ್ನು ತಕ್ಷಣ ಪಾವತಿ ಮಾಡಬೇಕು. ಸಂಘಟನೆಗಳ ಒತ್ತಡಕ್ಕೆ ಮಣಿದು ಸರ್ಕಾರ ಗ್ರಾಚ್ಯುಟಿ ಆದೇಶವನ್ನು ಹಿಂಪಡೆಯಬಾರದು. ತಕ್ಷಣ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳನ್ನು ಪ್ರಾರಂಭಿಸಬೇಕು. ಯಾವುದೇ ಕಾರಣಕ್ಕೂ ಈ ಆದೇಶವನ್ನು ಹಿಂಪಡೆಯಬಾರದು. ಕನ್ಯಾನ ಮೇಲ್ವಿಚಾರಕಿಯಿಂದ ಸಿಬ್ಬಂದಿ ಮೇಲೆ ದೌರ್ಜನ್ಯ ನಡೆಯುತ್ತಿದ್ದು, ತಕ್ಷಣ ಅವರನ್ನು ಕಚೇರಿ ಕೆಲಸಕ್ಕೆ ವರ್ಗಾವಣೆ ಮಾಡಬೇಕು ಎಂಬ ಬೇಡಿಕೆಯನ್ನು ಅಂಗನವಾಡಿ ನೌಕರರು ಮುಂದಿಟ್ಟರು.

ಅಂಗನವಾಡಿ ನೌಕರರ ಸಂಘ ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಿ. ಎಂ. ಭಟ್ ಮಾತನಾಡಿ, ಜುಲೈನಿಂದ ಅಂಗನವಾಡಿ ನೌಕರರ ವೇತನವಾಗದೆ ಔಷಧಿಗೂ ಹಣವಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮೇಲ್ಮಟ್ಟದ ಅಽಕಾರಿಗಳಿಗೆ ತಿಂಗಳ ಪ್ರಾರಂಭದಲ್ಲಿ ಸರಿಯಾಗಿ ಖಾತೆಗೆ ಜಮೆಯಾಗುತ್ತದೆ. ದುಡಿಯುವ ವರ್ಗದ ವೇತನಕ್ಕೆ ಸರಿಯಾಗಿ ಅನುದಾನ ತರಿಸಿಕೊಳ್ಳದಿರುವುದು ಸರಿಯಲ್ಲ. ಮುಂದಿನ ದಿನದಲ್ಲಿ ಪ್ರತಿ ತಿಂಗಳ ೧೦ನೇ ತಾರೀಕಿನ ಒಳಗೆ ವೇತನ ಆಗುವಂತೆ ವ್ಯವಸ್ಥೆ ಕಲ್ಪಿಸಬೇಕು. ಒಂದು ವಾರದಲ್ಲಿ ಬಾಕಿ ಇರುವ ವೇತನ ಆಗದೆ ಹೋದರೆ ಚುನಾವಣಾ ನೀತಿ ಸಂಹಿತೆಯನ್ನು ಲೆಕ್ಕಿಸದೆ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ನಿರೂಪಣಾ ಅಧಿಕಾರಿ ಕುಮಾರ್ ಮಾತನಾಡಿ, ಸರ್ಕಾರದ ಗಮನಕ್ಕೆ ನೌಕರರ ಸಮಸ್ಯೆಗಳನ್ನು ತರಲಾಗಿದೆ. ಈಗಾಗಲೇ ಜಿಲ್ಲೆಯ ವಿವಿಧ ಕಡೆಯಲ್ಲಿ ವೇತನಗಳಾಗಿದ್ದು, ವಿಟ್ಲ, ಬಂಟ್ವಾಳ, ಮಂಗಳೂರು ಗ್ರಾಮಾಂತರ ಭಾಗದಲ್ಲಿ ಬಾಕಿ ಉಳಿದಿದೆ. ಅನುದಾನ ನೀಡುವಂತೆ ಕೇಳಿಕೊಳ್ಳಲಾಗಿದೆ. ಸ್ಥಳಾವಕಾಶ ಇರುವ ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಪ್ರಾರಂಭಿಸಲಾಗಿದೆ. ಅಂಗನವಾಡಿ ನೌಕರರಿಗೂ ಇದಕ್ಕಾಗಿ ಅಗತ್ಯ ತರಬೇತಿ ನಡೆಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಬಾಕಿ ಇರುವ ಅಂಗನವಾಡಿಗಳಲ್ಲೂ ತರಗತಿ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

೧೦೦ಕ್ಕೂ ಅಽಕ ಅಂಗನವಾಡಿ ನೌಕರರು ಹಾಜರಿದ್ದರು. ಅಂಗನವಾಡಿ ನೌಕರರ ಸಂಘ ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಿ. ಎಂ. ಭಟ್ ಹಾಗೂ ಅಂಗನವಾಡಿ ನೌಕರರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಿಗೆ ಜಿಲ್ಲಾ ನಿರೂಪಣಾ ಅಧಿಕಾರಿ ಕುಮಾರ್ ಮೂಲಕ ಮನವಿ ಸಲ್ಲಿಸಿದರು. ಅಂಗನವಾಡಿ ನೌಕರರ ಸಂಘ ಸಿಐಟಿಯು ಜಿಲ್ಲಾ ಸದಸ್ಯೆ ಈಶ್ವರಿ, ವಿಟ್ಲ ಯೋಜನೆ ಸಮಿತಿಯ ವಸಂತಿ, ಲಕ್ಷ್ಮೀ, ಲಲಿತಾ ಜೆ.ಕೆ., ಹರ್ಷಿತಾ, ರಜನಿ, ಸತ್ಯವತಿ, ಶಾರದಾ, ನಮಿತ, ತುಳಸಿ ಮತ್ತಿತರರು ಭಾಗವಹಿಸಿದರು.

ಚೆಕ್‌ಬುಕ್, ಪಾಸ್‌ಬುಕ್ ಪಡೆಯಲಾಗಿದೆ
ಬಾಲವಿಕಾಸ ಸಮಿತಿ ಅಧ್ಯಕ್ಷೆ ಹಾಗೂ ಅಂಗಡಿ ಕಾರ್ಯಕರ್ತೆಯ ಜಂಟಿ ಹೆಸರಿನಲ್ಲಿ ಮೊಟ್ಟೆ ಸೇರಿ ಅಂಗನವಾಡಿ ಮಕ್ಕಳ ಆಹಾರದ ಪಾವತಿಗೆ ಖಾತೆ ತೆರೆಯಲಾಗಿದೆ. ಬಾಲವಿಕಾಸ ಸಮಿತಿ ಅಧ್ಯಕ್ಷರು ಮೊಟ್ಟೆ ವಿಚಾರಕ್ಕೆ ಪಾವತಿ ಮಾಡುವ ಚೆಕ್‌ಗೆ ಸರಿಯಾಗಿ ಸಹಿಹಾಕುತ್ತಿಲ್ಲ. ಅಂಗನವಾಡಿ ಮೇಲ್ವಿಚಾರಕಿ ಸೂಚನೆಯಂತೆ ಚೆಕ್ ಪುಸ್ತಕ ಹಾಗೂ ಪಾಸ್ ಪುಸ್ತಕ ಪಡೆದುಕೊಂಡಿದ್ದಾರೆ. ಬಾಲವಿಕಾಸ ಸಮಿತಿ ಅಧ್ಯಕ್ಷರಾಗಲು ಅವರು ಮಕ್ಕಳ ಪಾಲಕರೂ ಅಲ್ಲ. ಈ ಬಗ್ಗೆ ಅಗತ್ಯ ಕ್ರಮಕೈಗೊಳ್ಳಬೇಕೆಂದು ವಿಚಾರವನ್ನು ಅಧಿಕಾರಿಗಳ ಗಮನಕ್ಕೆ ತರಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net