ತೀವ್ರಗೊಂಡ ನುಸಿ, ಕಪ್ಪುತಲೆ ಹುಳು ಬಾಧೆ

13-07-rama-tengu2
Published on

* ಮರ ಉಳಿಸಿಕೊಳ್ಳಲು ತೆಂಗು ಬೆಳೆಗಾರರ ಹರಸಾಹಸ

* ತೋಟಗಾರಿಕೆ ಇಲಾಖೆಯಿಂದ ರೋಗ ನಿಯಂತ್ರಣಕ್ಕೆ ಯತ್ನ

ಗಂಗಾಧರ್ ಬೈರಾಪಟ್ಟಣ ರಾಮನಗರ

ಕಳೆದ ಹಲವು ವರ್ಷಗಳಿಂದಲೂ ತೆಂಗಿಗೆ ಕಂಟಕವಾಗಿ ಕಾಡುತ್ತಿರುವ ನುಸಿ ಮತ್ತು ಕಪ್ಪುತಲೆ ಹುಳು ಬಾಧೆ ಜಿಲ್ಲೆಯಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದೆ. ತೆಂಗು ಜಿಲ್ಲೆಯಲ್ಲಿ ಬೆಳೆಯುವ ಪ್ರಮುಖ ಬೆಳೆಗಳಲ್ಲಿ ಒಂದು. ಸುಮಾರು 33 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. ಆದರೆ, ನೀರಿನ ಕೊರತೆ ಉಂಟಾದ ಕಾರಣದಿಂದಾಗಿ ಜಿಲ್ಲೆಯಲ್ಲಿ ನುಸಿ ಮತ್ತು ಕಪ್ಪುತಲೆ ಹುಳು ಬಾಧೆ ಹೆಚ್ಚಿದೆ. ಇದು ತೋಟಗಾರಿಕೆ ಇಲಾಖೆಗೂ ತಲೆ ನೋವು ತಂದಿದ್ದು, ಹಲವು ಕ್ರಮ ಕೈಗೊಳ್ಳುವ ಮೂಲಕ ರೋಗ ನಿಯಂತ್ರಣಕ್ಕೆ ಯತ್ನಿಸುತ್ತಿದೆ.

ಎಲ್‌ಡಿಒಪಿ

ತೆಂಗಿನ ನುಸಿ ಮತ್ತು ಕಪ್ಪು ತಲೆ ಹುಳು ರೋಗ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಮಗ್ರ ತೆಂಗು ಬೇಸಾಯ ಕ್ರಮ ಕಾರ್ಯಕ್ರಮದಡಿ ರೋಗ ಬಾಧಿತ ತೋಟಗಳಿಗೆ ಪರಕಾಯ ಕೀಟಗಳನ್ನು ನೀಡುವ ಜತೆಗೆ ಸುಮಾರು 17500 ರೂ. ಮೌಲ್ಯದ ಬೇವಿನ ಹಿಂಡಿ, ಪೋಷಕಾಂಶಗಳು ಸೇರಿ ಇತರ ಪೂರಕ ವಸ್ತುಗಳನ್ನು ಇಲಾಖೆ ನೀಡಲಿದೆ. ರೋಗ ಬಾಧಿತ ಸುಮಾರು 3500 ಹೆಕ್ಟೇರ್ ಪ್ರದೇಶದ ರೈತರಿಗೆ ಈ ಸೌಲಭ್ಯ ದೊರೆಯಲಿದೆ.

ಬೇಸಿಗೆಯಲ್ಲಿ ಮರಗಳ ಸಾವು

ಇನ್ನು ಈ ಬಾರಿ ಬೇಸಿಗೆ ಮನು ಕುಲಕ್ಕೆ ಕಂಟಕವಾಗಿ ಕಾಡುವ ಜತೆಗೆ, ಮಾವು, ತೆಂಗಿನ ಬೆಳೆಯನ್ನು ಆಪೋಶನ ತೆಗೆದುಕೊಂಡಿತ್ತು. ತೆಂಗು ಬೆಳೆಯನ್ನೇ ನಂಬಿ ಜೀವನ ನಡೆಸುತ್ತಿರುವ ರಾಜ್ಯದ ಅದೆಷ್ಟೋ ಕುಟುಂಬಗಳು ಈಗ ಬರ ಮತ್ತು ಬಿಸಿಲ ಬೇಗೆಯಲ್ಲಿ ತೆಂಗಿನ ಮರಗಳನ್ನು ಉಳಿಸಿಕೊಳ್ಳಲು ಹರ ಸಾಹಸ ಪಡುವಂತೆ ಮಾಡಿತ್ತು. ಮಳೆ ಕೊರತೆ ಕಾರಣ ಕೆಲವು ಮರಗಳು ಜೀವ ಕಳೆದುಕೊಂಡರೆ ಮತ್ತೆ ಕೆಲವು ಮರಗಳಲ್ಲಿ ಇಳುವರಿ ಕುಂಠಿತವಾಗಿತ್ತು.

ಮಳೆಯಾಶ್ರಿತ ಪ್ರದೇಶದಲ್ಲಿ ತೆಂಗಿನಲ್ಲಿ ಸುಳಿ ಮಾತ್ರ ಉಳಿದಿವೆ. ನೀರಾವರಿ ಪ್ರದೇಶದಲ್ಲಿ ಬೆಳೆಯಾಗಿರುವ ತೆಂಗಿನಲ್ಲಿ ಅರಳುಗಳು ಮತ್ತು ಮೊದಡು (ಬಲಿತ ಕಾಯಿಯೂ ಅಲ್ಲ, ಎಳೆನೀರು ಅಲ್ಲದ ಸ್ಥಿತಿ) ಸಹ ಬಿಸಿಲ ತಾಪಕ್ಕೆ ಉದುರುತ್ತಿದ್ದವು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತಕ್ಕೆ ರೈತ ಸಂಘ ಮತ್ತು ತೆಂಗು ಬೆಳೆಗಾರರು ಮನವಿ ಮಾಡಿದ ಹಿನ್ನೆಲೆಯಲ್ಲಿ ನಷ್ಟದ ವರದಿಯನ್ನು ನೀಡುವಂತೆ ಸೂಚನೆ ನೀಡಲಾಗಿತ್ತು. ಈ ವರದಿಯಂತೆ ಜಿಲ್ಲೆಯಲ್ಲಿ ಸುಮಾರು 11 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೇ.33ಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ತೆಂಗು ಬೆಳೆ ನಷ್ಟವಾಗಿದ್ದು, ಈ ವರದಿಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಸರ್ಕಾರ ಈ ರೈತರಿಗೆ ಪರಿಹಾರ ನೀಡುವಲ್ಲಿ ಕ್ರಮ ಕೈಗೊಳ್ಳಬೇಕಿದೆ.

ಸಂಕಷ್ಟದಲ್ಲಿ ರೈತ ಸಮೂಹ

ನುಸಿ ಪೀಡೆ ಮತ್ತು ಕಪ್ಪು ತಲೆ ಹುಳು ರೋಗ ಜಿಲ್ಲೆಗೆ ಕಾಲಿಟ್ಟು ಎರಡು ದಶಕವೇ ಕಳೆದಿದೆ. ಈ ರೋಗಗಳಿಂದ ಮರಗಳನ್ನು ಉಳಿಸಿಕೊಳ್ಳಲು ರೈತರು ಸರ್ವ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ. ಜತೆಗೆ ಕಳೆದ ಬೇಸಿಗೆಯಲ್ಲಿ ಮಳೆ ಕೊರತೆ ಜತೆಗೆ ತಾಪಮಾನ ಹೆಚ್ಚಳ ರೈತರ ಬದುಕನ್ನು ಬೀದಿಗೆ ತಂದು ನಿಲ್ಲಿಸಿದೆ. ಉತ್ತಮ ಇಳುವರಿ ನೀಡುವ ಮರ ಸರಾಸರಿ ವಾರ್ಷಿಕವಾಗಿ 2 ಸಾವಿರ ರೂ. ವರಮಾನವನ್ನು ರೈತರಿಗೆ ನೀಡುತ್ತಿತ್ತು. ಈಗ ಮತ್ತೆ ರೋಗ ಬಾಧೆ ಕಾಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳುವ ಜತೆಗೆ ನಷ್ಟದ ಪರಿಹಾರ ನೀಡುವಲ್ಲಿಯೂ ಕ್ರಮವಹಿಸಬೇಕಿದೆ.

ಜಿಲ್ಲೆಯಲ್ಲಿ ನುಸಿ ಮತ್ತು ಕಪ್ಪು ತಲೆ ಹುಳು ರೋಗ ಬಾಧಿತ ಸುಮಾರು 3500 ಹೆಕ್ಟೇರ್ ತೆಂಗು ಪುನಶ್ಚೇತನಕ್ಕೆ ಕ್ರಮವಹಿಸಲಾಗುತ್ತಿದೆ. ಕಳೆದ ಬೇಸಿಗೆಯಲ್ಲಿ 11 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆ ನಷ್ಟವಾಗಿದ್ದು, ವರದಿಯನ್ನು ಜಿಲ್ಲಾಡಳಿತಕ್ಕೆ ಆಗಲೇ ಸಲ್ಲಿಕೆ ಮಾಡಲಾಗಿದೆ. ಎಂ.ಎಸ್ ರಾಜು, ಉಪನಿರ್ದೇಶಕ ತೋಟಗಾರಿಕೆ ಇಲಾಖೆ ರಾಮನಗರ
ಬೇಸಿಗೆ ಸಂಕಷ್ಟದ ನಂತರ ಈಗ ಮತ್ತೆ ನುಸಿ ಮತ್ತು ಕಪ್ಪುತಲೆ ಹುಳು ರೋಗ ಬಾಧೆ ವ್ಯಾಪಿಸಿದೆ. ತೋಟಗಾರಿಕೆ ಇಲಾಖೆ ಮತ್ತು ಸರ್ಕಾರ ಕೂಡಲೇ ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸುವ ಮೂಲಕ ರೋಗ ನಿಯಂತ್ರಣಕ್ಕೆ ಮುಂದಾಗಬೇಕು. ಹಾಗೂ ಈಗಾಗಲೇ ನಷ್ಟಕ್ಕೆ ಒಳಗಾಗಿರುವ ರೈತರಿಗೆ ಸೂಕ್ತ ವೈಜ್ಞಾನಿಕ ಪರಿಹಾರ ನೀಡಬೇಕು. ಸಿ.ಪುಟ್ಟಸ್ವಾಮಿ, ಹಿರಿಯ ರೈತ ಮುಖಂಡ, ರಾಮನಗರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net