

ಕೊಟ್ಟೂರು: ಭಾರತ ಹಲವು ಕ್ಷೇತ್ರಗಳಲ್ಲಿ ಸರ್ವತೋಮುಖವಾಗಿ ಅಭಿವೃದ್ಧಿಯಾಗುತ್ತಿದ್ದು, ವಿಶ್ವದ ಅಭಿವೃದ್ಧಿಶೀಲ ರಾಷ್ಟ್ರಗಳ ಪಟ್ಟಿಯಲ್ಲಿ ನಮ್ಮ ರಾಷ್ಟ್ರವೂ ಸೇರ್ಪಡೆಯಾಗುತ್ತಿರುವುದಕ್ಕೆ ಪ್ರತಿಯೊಬ್ಬ ಭಾರತೀಯರೂ ಹೆಮ್ಮೆ ಪಡಬೇಕು ಎಂದು ಶಾಸಕ ನೇಮಿರಾಜ್ ನಾಯ್ಕ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಮಂಗಳವಾರ ತಾಲೂಕು ಆಡಳಿತ ಮತ್ತು ಪಟ್ಟಣ ಪಂಚಾಯಿತಿ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಸ್ವಾತಂತ್ರ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಮಹಾತ್ಮಾಗಾಂಧಿ, ಭಗತ್ ಸಿಂಗ್‌ರಂತಹ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರ ಬಲಿದಾನದ ಪ್ರಯುಕ್ತ ನಮಗೆ ಸ್ವಾತಂತ್ರದೊರಕಿದೆ. ಇವರನ್ನೆಲ್ಲ ನಾವು ಸದಾ ನೆನಪುಮಾಡಿಕೊಳ್ಳಬೇಕು. ದೇಶ ಸರ್ವಾಂಗೀಣವಾಗಿ ಅಭಿವೃದ್ಧಿಯಾಗುತ್ತಿದ್ದು, ನಾವು ನೀವೆಲ್ಲರೂ ದೇಶದ ಅಭಿವೃದ್ಧಿ ಮತ್ತು ಸಮಗ್ರತೆಗೆ ಹಾಗೂ ಸೌಹಾರ್ದತೆ ಪಣತೊಡೋಣ ಎಂದರು.
ತಹಸೀಲ್ದಾರ್ ಅಮರೀಶ ಜಾಲಹಳ್ಳಿ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಕೊಟ್ಟೂರಿನ ಸ್ವಾತಂತ್ರ್ಯ ಹೋರಾಟಗಾರರ ಪಾತ್ರಸಣ್ಣದಿಲ್ಲ. ಇಲ್ಲಿನ ಹೋರಾಟಗಾರರು ಬ್ರಿಟಿಷರ ವಿರುದ್ಧ ಕೆಚ್ಚೆದೆಯ ಹೋರಾಟ ಮರೆಯಲಾಗದು ಎಂದರು.
ತಾಪಂ ಇಒ ಪರಮೇಶ್ವರಪ್ಪ, ಪಪಂ ಮುಖ್ಯಾಧಿಕಾರಿ ನಸರುಲ್ಲಾ, ಸಿಪಿಐ ವೆಂಕಟಸ್ವಾಮಿ, ಪಪಂ ಸದಸ್ಯರಾದ ಶಿವಾನಂದ, ತಿಪ್ಪೇಸ್ವಾಮಿ, ವೀಣಾ, ಮತ್ತು ಬೂದಿ ಶಿವಕುಮಾರ, ಕೆ. ಕೊಟ್ರೇಶ, ಮುಂತಾದವರಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಗುರುದೇವ ಶಾಲೆಯ ವಿದ್ಯಾರ್ಥಿಗಳು ರೈತಗೀತೆ ಹಾಡಿದರು. ಪಿ.ಎಸ್.ಐ ಗೀತಾಂಜಲಿ ಸಿಂಧೆ ನೇತೃತ್ವದಲ್ಲಿ ಪಥಚಲನ ನಡೆಯಿತು.