ಬದುಕು ಹಸನಾಗಿಸಿದ ಸಮಗ್ರ ಕೃಷಿ

Kailancha-Ph-003-Negila Yogi- Gunnur Mhadevamurthy Story -SAmabar Southe Thota-13-7-2024
Published on

*ಮಾದರಿಯಾದ ಗುನ್ನೂರು ಗ್ರಾಮದ ರೈತ ಮಹದೇವಮೂರ್ತಿ

* ಸಾವಯವ ಗೊಬ್ಬರಕ್ಕೆ ಒತ್ತು

*ಕುಟುಂಬವೇ ಕೃಷಿ ಚಟುವಟಿಕೆಗೆ ಬೆನ್ನೆಲುಬು

ವಿಭೂತಿಕೆರೆ ಶಿವಲಿಂಗಯ್ಯ ಕೈಲಾಂಚ

ತೆಂಗು, ಅಡಕೆ ತೋಟದಲ್ಲಿ ಸಮಗ್ರ ಕೃಷಿ ಅನುಸರಿಸಿ ತರಕಾರಿ ಬೆಳೆ ಬೆಳೆಯುವ ಮೂಲಕ ಕೃಷಿಯಲ್ಲಿ ಖುಷಿ ಕಾಣುತ್ತಿರುವ ರೈತ ರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ಗುನ್ನೂರು ಗ್ರಾಮದ ಮಹದೇವಮೂರ್ತಿ ಎಲ್ಲರಿಗೂ ಮಾದರಿಯಾಗಿದ್ದಾರೆ.

ಮಹದೇವಮೂರ್ತಿ ಅವರಿಗೆ ಸುಮಾರು ನಾಲ್ಕೂವರೆ ಎಕರೆ ಜಮೀನಿದ್ದು, ತೆಂಗು, ಅಡಕೆ ಬೆಳೆದ್ದು, ಇದರೊಂದಿಗೆ ಇನ್ನಿತರ ಬೆಳೆ ಬೆಳೆದು ಯಶಸ್ವಿಯಾಗಿದ್ದಾರೆ.

ಸದಾ ಕೃಷಿಯಲ್ಲಿ ಯಶಸ್ಸು ಕಾಣಬೇಕೆಂಬ ಇವರ ಹಂಬಲಕ್ಕೆ ಇಡೀ ಕುಟುಂಬ ಬೆನ್ನೆಲುಬಾಗಿ ನಿಂತಿದೆ. ಆಧುನಿಕ ಕೃಷಿ ಪದ್ಧತಿ ಮೂಲಕ ಅಡಕೆ, ತೆಂಗು ನೆಟ್ಟು ಸುಮ್ಮನಾಗದೆ ಮಿಶ್ರ ಬೇಸಾಯ ಪದ್ಧತಿ ಅನುಸರಿಸಿ ತೋಟಗಳಲ್ಲೇ ಸಾಂಬಾರ್ ಸೌತೆ, ಪಪ್ಪಾಯ ತೋಟ, ಸಿಹಿ ಕುಂಬಳ ಬೆಳೆಯುತ್ತಿದ್ದಾರೆ. ಅರ್ಕಾವತಿ ನದಿ ಪಕ್ಕದಲ್ಲೇ ಹಾದು ಹೋಗಿರುವ ಕಾರಣ ನೀರಿನ ಅಭಾವ ಕಂಡುಬಂದಿಲ್ಲ. ಒಂದು ಬೋರ್‌ವೆಲ್ ಕೊರೆಸಿಕೊಂಡಿದ್ದು ಅದರಿಂದಲೇ ಎಲ್ಲ ಬೆಳೆಗಳಿಗೂ ನೀರು ಪೂರೈಸುತ್ತಿದ್ದಾರೆ.

ರಾಸಾಯನಿಕ ಗೊಬ್ಬರಕ್ಕೆ ಮಾರುಹೋಗದೆ ಕೊಟ್ಟಿಗೆ ಗೊಬ್ಬರ, ಸಾವಯವ ಗೊಬ್ಬರಕ್ಕೆ ಒತ್ತುಕೊಟ್ಟು, ಉತ್ತಮ ರೀತಿಯಲ್ಲಿ ತೋಟ ನಿರ್ವಹಣೆ ಮಾಡಿ ಕೃಷಿಯಲ್ಲಿ ಸಂತಸದ ಬದುಕು ಕಟ್ಟಿಕೊಂಡಿದ್ದಾರೆ.

ಹನಿ ನೀರಾವರಿ

ಬೋರ್‌ವೆಲ್‌ನಲ್ಲಿ ಹೆಚ್ಚಿನ ನೀರಿದ್ದರೂ ಮಿತ ಬಳಕೆ ನೀರಿಗೆ ಒತ್ತು ಕೊಟ್ಟಿದ್ದು, ಪ್ರತಿ ಬೆಳೆಗೂ ಹನಿ ನೀರಾವರಿ ಅಳವಡಿಸಿಕೊಂಡಿರುವುದು ವಿಶೇಷ.

ಕೈ ಹಿಡಿದ ಪಪ್ಪಾಯ

ಎರಡು ವರ್ಷಗಳಿಂದ ಪಪ್ಪಾಯ ತೋಟ ನಿರ್ವಹಣೆ ಮಾಡುತ್ತಿರುವ ಮಹದೇವಮೂರ್ತಿ, ಒಂದು ಎಕರೆ ಪ್ರದೇಶದಲ್ಲಿ ಪಪ್ಪಾಯ ಬೆಳೆದಿದ್ದು ಉತ್ತಮ ಫಸಲು ಬಂದು ಆದಾಯ ತಂದುಕೊಡುತ್ತಿದೆ. ಜತೆಗೆ ಬಾಳೆ, ಅಡಕೆ ತೋಟದಲ್ಲಿ ಸಿಹಿ ಕುಂಬಳ, ಸಾಂಬಾರ್ ಸೌತೆ ಬೆಳೆದಿದ್ದಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಸಿಹಿ ಕುಂಬಳದಲ್ಲಿ ಒಂದೇ ಫಸಲಿಗೆ 56 ಸಾವಿರ ರೂ. ಲಾಭ ಗಳಿಸಿದ್ದಾರೆ. ಜತೆಗೆ ಸಾಂಬಾರ್ ಸೌತೆಯಲ್ಲೂ ಲಾಭ ಕಾಣುತ್ತಿದ್ದಾರೆ.

ಒಂದೊಂದು ಬೆಳೆ

ಪ್ರತಿ ಬಾರಿಯೂ ಒಂದೊಂದು ಬೆಳೆ ಬೆಳೆಯುವುದು ರೈತನ ವಿಶೇಷವಾಗಿದ್ದು, ಒಂದು ಬಾರಿ ಬಾಳೆ, ಮತ್ತೊಂದು ಬಾರಿ ಪಪ್ಪಾಯ, ಕುಂಬಳ, ಸಾಂಬಾರ್ ಸೌತೆ ಹೀಗೆ ಬೇರೆ ಬೇರೆ ಬೆಳೆ ಬದಲಾವಣೆ ಮಾಡಿಕೊಂಡು ತರಕಾರಿಯಲ್ಲೂ ಲಾಭ ಕಂಡುಕೊಂಡಿದ್ದಾರೆ.

ಹೊಸ ಕೃಷಿ

ಹೊಸ ಕೃಷಿ ನಡೆಸಲು ಮುಂದಾಗಿರುವ ಇವರು ಪಾಲಿಹೌಸ್ ನಿರ್ಮಾಣ ಮಾಡಿ ವೈಜ್ಞಾನಿಕ ರೀತಿಯಲ್ಲಿ ಎಲ್ಲ ತರಹದ ತರಕಾರಿ, ಹೂವು ಬೆಳೆ ಸೇರಿ ಜೇನು ಕೃಷಿಗೂ ಒತ್ತು ನೀಡಿದ್ದಾರೆ. ಈಗಾಗಲೇ ವಿವಿಧ ಲಾಭದಾಯಕ ಹೂವು ಬೆಳೆ ಬೆಳೆಯಲು ಮುಂದಾಗಿದ್ದು, ದೊಡ್ಡಬಳ್ಳಾಪುರ ಕಡೆ ರೈತರ ತೋಟಗಳಿಗೆ ಹೋಗಿ ಹೂವು ಬೆಳೆಯುವ ವಿಧಾನ, ಮಾರುಕಟ್ಟೆ ಕ್ರಮಗಳ ಬಗ್ಗೆ ತಿಳಿದು ಬಂದಿದ್ದೇನೆ ಎನ್ನುತ್ತಾರೆ ಮಹದೇವಮೂರ್ತಿ.

ಕೃಷಿಯಲ್ಲಿ ಖುಷಿ ಕಾಣಬೇಕಾದರೆ ಪರಿಶ್ರಮ ಮುಖ್ಯ. ಆಧುನಿಕ ವೈಜ್ಞಾನಿಕ ಪದ್ಧತಿ ಅನುಸರಿಸಿ ಲಾಭಗಳಿಸಲು ಮುಂದಾಗಬೇಕು. ನಮ್ಮ ಕುಟುಂಬ ಕೃಷಿಗೆ ಬೆಂಬಲವಾಗಿದೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಹೂವು, ತರಕಾರಿ, ತೋಟದ ಬೆಳೆ ಬೆಳೆಯಲು ಮುಂದಾಗುತ್ತಿದ್ದೇನೆ. ತೋಟಗಾರಿಕೆ, ಕೃಷಿ ಇಲಾಖೆ ನನ್ನ ಕಾರ್ಯಕ್ಕೆ ಉತ್ತಮ ಸಹಕಾರ ನೀಡುತ್ತಿದೆ. ಮಹದೇವಮೂರ್ತಿ, ರೈತ, ಗುನ್ನೂರು ಮೊ: 9901616104

ಮಹದೇವಮೂರ್ತಿ ಪ್ರಗತಿಪರ, ಮಾದರಿ ಕೃಷಿಕರಾಗಿದ್ದು, ಹೊಸ ಹೊಸ ಬೆಳೆಯ ಬಗ್ಗೆ ಅನ್ವೇಷಣೆ ಮಾಡುತ್ತಿರುತ್ತಾರೆ. ಮಿಶ್ರ ಬೇಸಾಯ ಪದ್ಧತಿಯಲ್ಲಿ ಪಪ್ಪಾಯ ಸೇರಿ ತೋಟದ ಬೆಳೆ ಬೆಳೆದು ಕೃಷಿಯಲ್ಲಿ ಲಾಭ ಕಂಡುಕೊಂಡಿದ್ದಾರೆ. ತೋಟಗಾರಿಕೆ ಇಲಾಖೆ ಕಾಲಕಾಲಕ್ಕೆ ಬೆಳೆಗಳ ಬಗ್ಗೆ ಮಾಹಿತಿ ನೀಡಿ ಸರ್ಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ತಿಳಿಸಿ ಅವರ ಕೃಷಿಗೆ ಉತ್ತೇಜನ ನೀಡುತ್ತಿದೆ.

ಮಹೇಶ್, ತೋಟಗಾರಿಕೆ ಅಧಿಕಾರಿ, ರಾಮನಗರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net