ಸಮಗ್ರ ಕೃಷಿ ಸಮೃದ್ಧ ಜೀವನ

5 RMN-MGD P5
Published on

* ಬೇರಾರಿಗೂ ಆಶ್ರಯಿಸದೆ ಸ್ವಂತ ಉಳುಮೆ

* ಯುವರೈತ ಪ್ರಜ್ವಲ್ ಜೀವನ ಶೈಲಿ ನೂರಾರು ಜನರಿಗೆ ಸ್ಫೂರ್ತಿ

ಎಂ.ಎಸ್.ಸಿದ್ದಲಿಂಗೇಶ್ವರ ಮಾಗಡಿ

ವ್ಯವಸಾಯ ಎಂದರೆ ಯುವಕರು ದೂರ ಉಳಿಯುವ ಕಾಲಘಟ್ಟದಲ್ಲಿ ಕೃಷಿಯಲ್ಲೇ ಸಾಧನೆ ಮಾಡಿ, ಸುಂದರ ಬದುಕು ಕಟ್ಟಿಕೊಂಡು ನೂರಾರು ಮಂದಿಗೆ ಸ್ಫೂರ್ತಿಯಾಗಿದ್ದಾರೆ ಯುವ ರೈತ ಪ್ರಜ್ವಲ್.

ಮಾಗಡಿ ಪಟ್ಟಣದಿಂದ ಸುಮಾರು 12 ಕಿಮೀ ದೂರದ ಕಸಬಾ ಹೋಬಳಿಯ ಹಲಸಬೆಲೆ ಗ್ರಾಮದ ಚಂದ್ರಯ್ಯ ಅವರ ಪುತ್ರ ಪ್ರಜ್ವಲ್ ಐಟಿಐ ಮುಗಿಸಿದ್ದು, ಉದ್ಯೋಗ ಅರಸಿ ಬೇರೆಡೆ ಹೋಗದೆ ವ್ಯವಸಾಯವನ್ನೇ ನೆಚ್ಚಿನ ಕೆಲಸವಾಗಿಸಿಕೊಂಡ ಪರಿಣಾಮ ಮಾದರಿ ರೈತ ಎನ್ನಿಸಿದ್ದಾರೆ.

ವಿದ್ಯಾಭ್ಯಾಸ ಮಾಡುವ ವೇಳೆಯೇ ಕೃಷಿ ಬಗ್ಗೆ ಹೆಚ್ಚು ಆಸಕ್ತಿಹೊಂದಿದ್ದ ಇವರು, ಕೃಷಿಯಲ್ಲಿ ಸಾಧಿಸಬೇಕೆಂಬ ಹಂಬಲ ಹೊಂದಿ ಸಂಪೂರ್ಣವಾಗಿ ವ್ಯವಸಾಯದಲ್ಲಿ ತೊಡಗಿದ್ದಾರೆ. ಐದು ಎಕರೆ ಜಮೀನಿನಲ್ಲಿ ಆಧುನಿಕ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ಪ್ರಜ್ವಲ್ ಇಷ್ಟಕ್ಕೆ ಸಿಮೀತವಾಗದೆ ಮೇಕೆ, ಹಸು, ಜೇನು ಸಾಕಣೆ ಮಾಡಿ, ಕೃಷಿಗಾಗಿ ಎರೆಹುಳು ಘಟಕ, ಜೀವಾಮೃತ ಘಟಕಗಳನ್ನು ನಿರ್ಮಿಸಿಕೊಂಡಿದ್ದಾರೆ.

100ಕ್ಕೂ ಹೆಚ್ಚು ಬಗೆಯ ಹಣ್ಣು

ವಿವಿಧ ಬಗೆಯ ಹಲಸು, ಮಾವು, ಕಿತ್ತಳೆ, ಸ್ಟ್ರಾಬೇರಿ, ಬೆಣ್ಣೆ ಹಣ್ಣು, ಡ್ರ್ಯಾಗನ್ ಫ್ರೂಟ್ಸ್ ನಿಂಬೆ, ಸೀಬೆ, ಮೂಸಂಬಿ, ಪೇರಳೆ, ಚೀನಾ ಆಸ್ಟರ್, ಪಪ್ಪಾಯ, ಸೀತಾಲ, ಸಪೋಟಾ, ಬಾಳೆ, ಪನ್ನೇರಳೆ, ದಾಳಿಂಬೆ, ಅಂಜೂರ ಸೇರಿ 100ಕ್ಕೂ ಹೆಚ್ಚು ಬಗೆಯ ಹಣ್ಣು ಬೆಳೆದಿದ್ದಾರೆ. ಜತೆಗೆ ಸಿಲ್ವರ್, ತೇಗ, ಬಾಗಿ, ಅಗರು ಮರಗಳನ್ನು ನೆಟ್ಟಿದ್ದಾರೆ. ಸಾಂಬಾರು, ಪುನರ್ ಪುಳಿ, ವೀಳ್ಯದೆಲೆ, ಕರಿಬೇವು, ನುಗ್ಗೆ, ಲವಂಗ, ಕಾಳು ಮೆಣಸು, ಜಾಕಾಯಿ, ಚಕ್ಕೆ, ಕರಿ ಮೆಣಸು, ಕಾಫಿ, ಏಲಕ್ಕಿ, ಅರಿಶಿಣವನ್ನೂ ನೆಟ್ಟಿದ್ದಾರೆ.

ತರಹೇವಾರಿ ಹೂವು

ಕನಕಾಂಬರ, ಮಲ್ಲಿಗೆ, ಚೆಂಡು ಹೂ, ಬಸವನ ಹೂ, ನಂದಿ ಬಟಲ್, ಸೇವಂತಿಗೆ ಹೂ ಸೇರಿ ವಿವಿಧ ಬಗೆಯ ಹೂ ಬೆಳೆದಿದ್ದು ತೋಟಕ್ಕೆ ತೆರಳಿದರೆ ಪರಿಮಳ ಬೀರುತ್ತವೆ. ಅವರೆ ಕಾಯಿ, ಹುರುಳಿಕಾಯಿ, ಗೆಡ್ಡೆ ಕೋಸು, ಕ್ಯಾರೆಟ್, ಶುಂಠಿ, ಸುವರ್ಣಗಡ್ಡೆ ಬೆಳೆದು ಆದಾಯ ಗಳಿಸುತ್ತಿದ್ದಾರೆ.

ಸಾವಯವ ಕೃಷಿಗೆ ಒತ್ತು

ಸಮಗ್ರ ಕೃಷಿ ಪದ್ಧತಿಯಲ್ಲಿ ಕಾಂಪೋಸ್ಟ್ ಗೊಬ್ಬರ, ಮೇಕೆ, ಕುರಿ, ಹಸು ಗೊಬ್ಬರ, ಹಸಿರೆಲೆ ಗೊಬ್ಬರ ಬಳಸಿ ಎಲ್ಲ ಬೆಳೆಗಳಿಗೆ ಸಾವಯವ ಪದ್ಧತಿ ಅನುಸರಿಸಿ ಗೊಬ್ಬರ, ಕೀಟ ನಿರ್ವಹಣೆಗೆ ಮಾಡಿದ್ದಾರೆ. ತೆಂಗಿನ ಮರ, ಅಡಕೆ ಇತರ ಮರಗಳಿಂದ ಬೀಳುವ ಎಲೆಗಳನ್ನು ಶೇಖರಿಸಿ ಎರೆ ಹುಳು ಗೊಬ್ಬರವನ್ನಾಗಿ ಪರಿವರ್ತಿಸಿ ತೋಟಕ್ಕೆ ಬಳಸುತ್ತಾರೆ. 5 ಎಕರೆ ಜಮೀನಿಗೆ 2 ಕೊಳವೆ ಬಾವಿಯಿದ್ದು, ಹವಾಮಾನಕ್ಕೆ ಅನುಗುಣವಾಗಿ ಸಮರ್ಪಕವಾಗಿ ಎಲ್ಲ ಬೆಳೆಗಳಿಗೂ ಹನಿ ನೀರಾವರಿ ಮೂಲಕ ನೀರು ಹಾಯಿಸುತ್ತಿದ್ದಾರೆ. ಇವರ ಕಾರ್ಯದಲ್ಲಿ ತಂದೆಯೂ ನಿರಂತರವಾಗಿ ಕೈ ಜೋಡಿಸಿರುವುದು ಮತ್ತೊಂದು ವಿಶೇಷ.

ವರವಾದ ಕೃಷಿ ಹೊಂಡ

ತೋಟದ ಬಳಿ ಕೃಷಿ ಹೊಂಡ ನಿರ್ಮಿಸಿ ಅಂತರ್ ಜಲವೃದ್ಧಿಗೊಳಿಸಿದ್ದಾರೆ. ಜತೆಗೆ ಇದರಿಂದ ತೋಟದಲ್ಲಿನ ಕೊಳವೆ ಬಾವಿಯಲ್ಲಿ ಸಾಕಷ್ಟು ನೀರು ಲಭ್ಯವಿರುವುದರಿಂದ ತೋಟಕ್ಕೆ ನೀರಿನ ಸಮಸ್ಯೆಯಾಗಿಲ್ಲ. ಬೆಳೆಯಿಂದ ವಾರ್ಷಿಕವಾಗಿ 10 ಲಕ್ಷ ರೂ. ಆದಾಯಗಳಿಸುತ್ತಿದ್ದಾರೆ. ಜಿಕೆವಿಕೆ, ಕೆವಿಕೆ ಹಾಗೂ ತೋಟಗಾರಿಕೆ, ಕೃಷಿ ಇಲಾಖೆಯ ಮಾರ್ಗದರ್ಶನ ಪಡೆದು ಅದರಂತೆ ಹಣ್ಣು ಬೆಳೆಗಳನ್ನು ಬೆಳೆದು ಯಶಸ್ವಿಯಾಗಿದ್ದಾರೆ.

ಪ್ರಜ್ವಲ್ ತಂದೆ ಚಂದ್ರಯ್ಯ ಕೃಷಿಕರಾಗಿದ್ದು, ಹಲವು ಸಂಘ - ಸಂಸ್ಥೆಗಳಿಂದ ಉತ್ತಮ ರೈತ ಪ್ರಶಸ್ತಿ, ಜೈವಿಕ ನಿಯಂತ್ರಣ ಎಕ್ಸ್‌ಪೋ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ನಗರ ಪ್ರದೇಶಗಳಿಗೆ ಕೆಲಸಕ್ಕೆ ಹೋದರೆ 15 ರಿಂದ 20 ಸಾವಿರ ಸಂಬಳ ನೀಡುತ್ತಾರೆ. ಎಲ್ಲ ಖರ್ಚು ಕಳೆದು 5 ಸಾವಿರ ರೂ. ಕೂಡ ಮನೆಗೆ ನೀಡಲು ಸಾಧ್ಯವಿಲ್ಲ. ಈ ಹಣದಿಂದ ವ್ಯವಸಾಯ ಮಾಡಲು ರಸಗೊಬ್ಬರಕ್ಕೂ ಸಾಲುವುದಿಲ್ಲ. ಯುವಕರು ಮನಸ್ಸು ಮಾಡಿ ವ್ಯವಸಾಯದಲ್ಲಿ ತೊಡಗಿದರೆ ಸರ್ಕಾರದ ಸಂಬಳಕ್ಕಿಂತ ಎರಡುಪಟ್ಟು ಹಣ ದುಡಿದು ನೆಮ್ಮದಿಯಿಂದ ಜೀವನಸಾಗಿಸಬಹುದು.ಪ್ರಜ್ವಲ್ಯುವ ರೈತ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net