

ಎಂ.ಎಸ್. ಸಿದ್ದಲಿಂಗೇಶ್ವರ ಮಾಗಡಿ
ವ್ಯವಸಾಯ ಎಂದರೆ ವಿಮುಖರಾಗುವ ಇಂದಿನ ಕಾಲದಲ್ಲಿ ಶಿಕ್ಷಣವಿಲ್ಲದೆ, ಕೃಷಿಯನ್ನೇ ನಂಬಿ ಸುಂದರ ಬದುಕು ಕಟ್ಟಿಕೊಂಡಿರುವ ಇಲ್ಲೊಬ್ಬ ಅನ್ನದಾತ ಇತರರಿಗೆ ಸ್ಫೂರ್ತಿಯಾಗಿದ್ದಾರೆ.
ಮಾಗಡಿಯಿಂದ 4 ಕಿ.ಮೀ. ದೂರದ ಕಲ್ಯಾ ಕಾಲನಿಯ ಸಂಪತ್ ಕುಮಾರ್ ಅವರೇ ಈ ಸಾಧನೆ ಮಾಡಿದವರು. ಕೃಷಿಯಲ್ಲಿ ಆಸಕ್ತಿ ಹೊಂದಿದ್ದ ಸಂಪತ್‌ಕುಮಾರ್ ಎಸ್ಸೆಸ್ಸೆಲ್ಸಿವರೆಗೆ ಕಲಿತಿದ್ದು, ತಮ್ಮ 8 ಎಕರೆ ಜಮೀನಿನಲ್ಲಿ ಆಧುನಿಕ ಪದ್ಧತಿ ಅಳವಡಿಸಿಕೊಂಡು ಸಮಗ್ರ ಕೃಷಿ ಮಾಡುತ್ತಿದ್ದಾರೆ.
ಸಂಪತ್ ಕುಮಾರ್ ಅವರ ತೋಟಕ್ಕೆ ಭೇಟಿ ನೀಡಿದರೆ ಮಲೆನಾಡಿನಂತೆ ಭಾಸವಾಗುತ್ತದೆ. ಕೃಷಿ ಜತೆಗೆ ಮೇಕೆ, ಎಮ್ಮೆ, ಮಲೆನಾಡಿನ ಹಸು, ಜೇನು ಸಾಕಣೆ ಮಾಡುವ ಇವರು, ಕೃಷಿಗಾಗಿ ಎರೆಹುಳು ಹಾಗೂ ಜೀವಾಮೃತ ಘಟಕಗಳನ್ನು ನಿರ್ಮಿಸಿಕೊಂಡಿದ್ದಾರೆ.
ವಿವಿಧ ಮರಗಳು
ಶೀಗಂಧ, ಸಿಲ್ವರ್, ತೇಗ, ಬಾಗೆ, ಅಗರು ಉಡ್, ಹಲಸು, ಬೇವು, ಮಾವು, ರಕ್ತ ಚಂದನ ಬೆಳೆದಿದ್ದಾರೆ.
ಕಿತ್ತಳೆ, ಸ್ಟ್ರಾಬೆರಿ, ಗುವಾ, ಬೆಣ್ಣೆ ಹಣ್ಣು, ಡ್ರಾೃಗನ್‌ರ್ೂಟ್, ಜಂಬುನೇರಳೆ, ಸೀಬೆ, ಮೂಸಂಬಿ, ತೈವಾನ್ ವೈಟ್ ಸೀಬೆ, ತೈವಾನ್ ಪಿಂಕ್ ಸೀಬೆ, ಆಪಲ್ ಬೇರು, ವೈಟ್ ನೇರಳೆ, ರೆಡ್‌ಚೆರಿ, ಕ್ಯಾಡೋ ಮಂಚರಿ, ಪ್ಲಮ್ಸ್, ಪೀಚ್, ಕ್ಯಾಕೊೆನಿ ಆರೆಂಜ್, ಸ್ಟಾರ್ ಫ್ರೂಟ್, ಸರ್ವಋತು ನಿಂಬೆ, ಎಲ್ಲೋ ಮಾಲ್ಟ, ಬಾಂಗ್ಲಾ ಮಾಲ್ಟ, ರಂಗಪೂರಿ ಮೂಸಂಬಿ, ನಾಗಪುರ ಆರೆಂಜ್, ಪಪ್ಪಾಯ, ಬರೋಬಾ ಪ್ರೂಟ್, ಸೀತಾಫಲ, ಅನಾನಸ್, ಕ್ಯಾಟ್ ಐ ಫ್ರೂಟ್, ಮಿರಾಕಲ್ ಫ್ರೂಟ್, ಪೀನಟ್ ಬಟರ್, ಐಸ್‌ಕ್ರೀಮ್ ಬಿಸ್‌ರ್ೂಟ್, ಸಪೋಟಾ, ಮರಸೇಬು, ಬಾಳೆ, ಪನ್ನೇರಳೆ. ದಾಳಿಂಬೆ, ಅಂಜೂರ ಸೇರಿ 100ಕ್ಕೂ ಹೆಚ್ಚು ಬಗೆಯ ಹಣ್ಣುಗಳನ್ನು ಸಂಪತ್ ಕುಮಾರ್ ತೋಟದಲ್ಲಿ ಕಾಣಬಹುದಾಗಿದೆ. ಜತೆಗೆ ಸರ್ವ ಸಾಂಬಾರು, ಪುನರ್‌ಪುಳಿ, ವೀಳ್ಯದೆಲೆ, ಕರಿಬೇವು, ನುಗ್ಗೆ, ಲವಂಗ, ಜಾಯಿಕಾಯಿ, ಚಕ್ಕೆ, ಕರಿಮೆಣಸು, ಕಾಫಿ, ಏಲಕ್ಕಿ. ಅರಿಶಿನವೂ ಉಂಟು.
ಕನಕಾಂಬರ, ಚೆಂಡುಹೂವೂ, ಬಸವನ ಹೂವು, ನಂದಿಬಟ್ಟಲು ಸೇರಿ ವಿವಿಧ ಜಾತಿ ಹೂವುಗಳನ್ನು ಬೆಳೆದಿದ್ದು, ತೋಟಕ್ಕೆ ತೆರಳಿದರೆ ಪರಿಮಳದ ವಾಸನೆ ಬೀರುತ್ತದೆ.
ನೈಟ್‌ಫಿನ್, ಒಂದೆಲಗ, ದೊಡ್ಡಪತ್ರೆ, ಲೆಮನ್ ಕ್ರಾಸ್ ಸೇರಿ ಹತ್ತಾರು ಬಗೆಯ ಆಯುರ್ವೇದ ಸಸ್ಯಗಳನ್ನು ಬೆಳೆದಿದ್ದಾರೆ.
ತಾವು ಬೆಳೆಯುವ ಉತ್ಪನ್ನಗಳಿಗೆ ಮಾರುಕಟ್ಟೆ ಸೃಷ್ಟಿಸಿಕೊಂಡಿರುವ ಸಂಪತ್‌ಕುಮಾರ್ ಜೇನುತುಪ್ಪ, ಅರಿಶಿನ, ಏಲಕ್ಕಿ, ಸುವರ್ಣಗೆಡ್ಡೆ, ಅಡಕೆ, ತೆಂಗುಗಳನ್ನು ರತ್ನಕುಂಡಲ ನ್ಯಾಚುರಲ್ ಫಾರ್ಮ ಎಂಬ ಹೆಸರಿನಲ್ಲಿ ಆನ್‌ಲೈನ್‌ನಲ್ಲೂ ಮಾರಾಟ ಮಾಡುತ್ತಿದ್ದಾರೆ.
ತೋಟದಲ್ಲೇ ಬೃಂದಾವನ ಹೈಟೆಕ್ ನರ್ಸರಿ ಆರಂಭಿಸಿರುವ ಸಂಪತ್ ಕುಮಾರ್ ಹೂವು, ಹಣ್ಣು, ತರಕಾರಿ, ಅಡಕೆ, ತೆಂಗು, ಬಾಳೆ ಸೇರಿದಂತೆ ವಿವಿಧ ಬಗೆಯ ಸಸಿಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಚಿತ್ರದುರ್ಗ, ಹಿರಿಯೂರು, ಕೋಲಾರ, ಶಿವಮೊಗ್ಗ, ಹಾಸನ, ತುಮಕೂರು, ಮಂಡ್ಯ, ಮೈಸೂರು, ರಾಮನಗರ ಸೇರಿ ರಾಜ್ಯದ ವಿವಿಧೆಡೆಗಳಿಂದ ಜನ ಇಲ್ಲಿಂದ ಖರೀದಿಸುತ್ತಾರೆ.
ಬ್ರೆಜಿಲ್ ದೇಶದಲ್ಲಿ ಸಿಗುವ ಜಬೋಟಿಕಾಬ ಎಂಬ ವಿಶೇಷ ತಳಿಯ ಹಣ್ಣನ್ನು ಸಂಪತ್ ಕುಮಾರ್ ತೋಟದಲ್ಲಿ ಕಾಣಬಹುದಾಗಿದೆ. ಈ ಹಣ್ಣಿನ ಒಂದು ಸಸಿಯ ಬೆಲೆ 50 ಸಾವಿರ ರೂ. ಈ ಹಣ್ಣಿನ 2 ಗಿಡಗಳನ್ನು ಬೆಳೆದಿದ್ದಾರೆ. ಪ್ರತಿ ಕೆ.ಜಿ. ಹಣ್ಣಿನ ಬೆಲೆ 500 ರೂ.ಗಳಿಗೆ ಮಾರಾಟವಾಗುತ್ತದೆ.
ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಬಳಸದೆ ಸಮಗ್ರ ಕೃಷಿ ಪದ್ಧತಿಯಲ್ಲಿ ಕಾಂಪೋಸ್ಟ್ ಗೊಬ್ಬರ, ಮೇಕೆ, ಕುರಿ, ಹಸು ಗೊಬ್ಬರ, ಹಸಿರೆಲೆ ಗೊಬ್ಬರದಿಂದ ಸಮೃದ್ಧವಾಗಿ ಬೆಳೆ ಬೆಳೆದಿರುವ ಸಂಪತ್‌ಕುಮಾರ್, ಸಾವಯುವ ಪದ್ಧತಿಯಲ್ಲಿ ಗೊಬ್ಬರ, ಕೀಟ ನಿರ್ವಹಣೆಗೆ ಮಾಡುತ್ತಿದ್ದಾರೆ. ತೆಂಗು, ಅಡಕೆ ಇತರ ಮರಗಳಿಂದ ಉದುರುವ ಎಲೆಗಳನ್ನು ಸಂಗ್ರಹಿಸಿ ಎರೆಹುಳು ಗೊಬ್ಬರ ತಯಾರಿಸಿ ಬಳಸುವ ಸಂಪತ್‌ಕುಮಾರ್ ಉಳಿದ ಗೊಬ್ಬರವನ್ನು ಕೆ.ಜಿ.ಗೆ 10 ರೂ.ನಂತೆ ಮಾರಾಟ ಮಾಡುತ್ತಾರೆ. ಪಪ್ಪಾಯ, ಸೀಬೆ ಹಣ್ಣು, ನಾಟಿ ಶುಂಠಿ, ನೆಲ್ಲಿಕಾಯಿ, ಸಪೋಟ, ಚಕ್ಕೋತ ಮತ್ತಿತರ ಹಣ್ಣುಗಳನ್ನು ಕೀಳದೆ ತೋಟಕ್ಕೆ ಭೇಟಿ ನೀಡುವವರಿಗೆ ನೀಡಲು ಮತ್ತು ಪ್ರಾಣಿ, ಪಕ್ಷಿಗಳಿಗೆ ಮೀಸಲಿಡುವುದು ಇವರ ವಿಶೇಷ.
8 ಎಕರೆ ಜಮೀನಿಗೆ ನೀರಿನ ನಿರ್ವಹಣೆ ಮಾಡಲು ಇರುವ ಒಂದು ಕೊಳವೆ ಬಾವಿಯ ನೀರನ್ನು ಬಳಸುವ ಸಂಪತ್‌ಕುಮಾರ್, ನೀರು ಪೋಲಾಗದಂತೆ ಹನಿ ನೀರಾವರಿ ಅಳವಡಿಸಿಕೊಂಡಿದ್ದಾರೆ.ಉಳುಮೆಗೆ ಪವರ್ ಟಿಲ್ಲರ್ ಬಳಸುತ್ತಾರೆ. ಜಮೀನಿನಲ್ಲಿ ಕೆಲಸ ಮಾಡಲು ಯಾರನ್ನು ಆಶ್ರಯಿಸದ ಇವರಿಗೆ ಪತ್ನಿ ಕವಿತಾ ಸಾಥ್ ನೀಡಿದ್ದಾರೆ.
ತಮ್ಮ ಸಮಗ್ರ ಕೃಷಿಯಿಂದ ವಾರ್ಷಿಕ 10 ಲಕ್ಷ ರೂ.ವರೆಗೂ ಆದಾಯ ಗಳಿಸುತ್ತಿರುವ ಸಂಪತ್‌ಕುಮಾರ್, ಇನ್ನು 5 ವರ್ಷದ ನಂತರ ಇದು 30 ಲಕ್ಷ ರೂ. ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ. ಜಿಕೆವಿಕೆ, ಕೆವಿಕೆ ಹಾಗೂ ತೋಟಗಾರಿಕೆ, ಕೃಷಿ ಇಲಾಖೆಯ ಮಾರ್ಗದರ್ಶನಲ್ಲಿ ಕೃಷಿ ನಡೆಸಿ ಯಶಸ್ವಿಯಾಗಿದ್ದಾರೆ.
ಕೊಳವೆಬಾವಿ ಮರುಪೂರಣ ಮಾಡುವ ಇವರು ಮಳೆ ನೀರನ್ನು ವ್ಯರ್ಥವಾಗಿ ಹರಿಯಲು ಬಿಡದೆ ಅಂತರ್ಜಲ ವೃದ್ಧಿಗೆ ಬಳಸುತ್ತಿದ್ದಾರೆ. ಜತೆಗೆ 10ಕ್ಕೂ ಹೆಚ್ಚು ರೈತರ ಜಮೀನಿನಲ್ಲಿ ಈ ವ್ಯವಸ್ಥೆ ನಿರ್ಮಿಸಿಕೊಟ್ಟು ಮಾದರಿಯಾಗಿದ್ದಾರೆ.
ಪ್ರಶಸ್ತಿ
ಕೃಷಿ ಇಲಾಖೆಯಿಂದ ಉದಯೋನ್ಮುಖ ಕೃಷಿ ಪಂಡಿತ ಪ್ರಶಸ್ತಿ, ಪಂಡಿತ ಪ್ರಶಸ್ತಿ, ಜನಪದ ಸಾಹಿತ್ಯ ಅಕಾಡೆಮಿಯಿಂದ ಪ್ರಶಸ್ತಿ ನೀಡಿ ಗೌರವಿಸಿದರೆ, ಪತ್ನಿಗೆ ತಾಲೂಕು ಮಟ್ಟದ ಅತ್ತ್ಯುನ್ನತ ಯುವ ರೈತ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಮಲೆನಾಡಿನಲ್ಲಿ ಬೆಳೆಯುವ ಬೆಳೆ ಈ ಭಾಗದಲ್ಲಿ ಬೆಳೆದು ಏಕೆ ತೋರಿಸಬಾರದು ಯಶಸ್ವಿಯಾಗಿದ್ದೇನೆ. ಮಾದರಿ ಕೃಷಿಕರ ಪದ್ಧತಿ ಅನುಸರಿಸಿ ವ್ಯವಸಾಯ ಮಾಡಿದರೆ ಕೃಷಿಯಲ್ಲಿ ನಷ್ಟವಿಲ್ಲ. ಒಂದೇ ಬೆಳೆಗೆ ಅವಲಂಬಿಸದೆ ಸಮಗ್ರ ಕೃಷಿ ಪಾಲಿಸಿದರೆ ಹೆಚ್ಚು ಲಾಭ ಗಳಿಸಬಹುದು. ಕೃಷಿ ವಿಜ್ಞಾನ ಕೇಂದ್ರ, ಮಾಗಡಿ ಆರ್‌ಎಸ್‌ಕೆ ಮತ್ತು ಆತ್ಮ ಅಂಗಸಂಸ್ಥೆ. ನನ್ನನ್ನು ಈ ಮಟ್ಟಕ್ಕೆ ಬೆಳೆಸಿವೆಸಂಪತ್ ಕುಮಾರ್, ಸಮಗ್ರ ಕೃಷಿ ಪಂಡಿತ