ಜೀವನಕ್ಕೆ ಆಧಾರವಾದ ಸಮಗ್ರ ಕೃಷಿ

Negilayogi 1
Published on

ಕೈ ಹಿಡಿದ ತರಹೇವಾರಿ ಬೆಳೆ

ಆರ್ಥಿಕ ಪ್ರಗತಿಗೆ ಬೇಬಿಕಾರ್ನ್ ಜೋಳ ಸಹಕಾರಿ

ಖರ್ಚು ನೀಗುತ್ತಿದೆ ಹೈನುಗಾರಿಕೆ, ಮೇಕೆ ಸಾಕಣೆ

ಚೇತನ್ ಚಕ್ಕೆರೆ ಬಿಡದಿ

ವ್ಯವಸಾಯದಲ್ಲಿ ಸಮಗ್ರ ಕೃಷಿ ಅನುಸರಿಸಿಕೊಂಡು ತೋಟಗಾರಿಕಾ ಬೆಳೆ, ಹೈನುಗಾರಿಕೆ, ಕುರಿ ಸಾಕಣೆ ಹೀಗೆ ತರಹೇವಾರಿ ಚಟುವಟಿಕೆ ಕೈಗೊಂಡು ಕೃಷಿಯಲ್ಲಿ ಯಶಸ್ಸು ಸಾಧಿಸಬಹುದೆಂಬುದನ್ನು ರೈತ ಶ್ರೀನಿವಾಸ್ ತೋರಿಸಿಕೊಟ್ಟಿದ್ದಾರೆ.

ಹೌದು.ನರಸೇಗೌಡನದೊಡ್ಡಿ ಗ್ರಾಮದ ಮಾದರಿ ರೈತ ಶ್ರೀನಿವಾಸ್ 8 ಎಕರೆ ಸ್ವಂತ ಜಮೀನಿನ ಜತೆಗೆ ಜಮೀನಿನೊಂದಿಗೆ ಪಕ್ಕದಲ್ಲಿರುವ 3 ಎಕರೆ ಭೂಮಿಯನ್ನು ಗುತ್ತಿಗೆ ಪಡೆದುಕೊಂಡು ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಆದಾಯ ಕಾಣುತ್ತಿದ್ದಾರೆ.

ಆಧುನಿಕ ಕೃಷಿಪದ್ಧತಿ ಅನುಸರಿಸುವ ಮೂಲಕ ಆದಾಯ ದುಪ್ಪಟ್ಟು ಮಾಡಿಕೊಳ್ಳಬಹುದೆಂಬುದನ್ನು ಅರ್ಥೈಸಿಕೊಂಡಿರುವ ಶ್ರೀನಿವಾಸ್, ಒಂದೇ ಬೆಳೆಗೆ ಜೋತು ಬೀಳದೆ ಸಮಗ್ರ ಕೃಷಿಯನ್ನು ಅಳವಡಿಕೆ ಮಾಡಿಕೊಂಡಿದ್ದಾರೆ. ಭತ್ತ, ರಾಗಿ, ಬೇಬಿಕಾರ್ನ್, ತೊಗರಿ, ಅವರೆ, ತರಕಾರಿ ಬೆಳೆ ಜತೆಗೆ ಹೈನುಗಾರಿಕೆ, ಮೇಕೆ ಸಾಕಣೆಯನ್ನು ಉಪಕಸುಬನ್ನಾಗಿಸಿಕೊಂಡಿದ್ದಾರೆ.

ಕೈಹಿಡಿದ ಬೇಬಿ ಕಾರ್ನ್ ಜೋಳ

ರೈತ ಶ್ರೀನಿವಾಸ್ ಸುಮಾರು 4 ಎಕರೆ ಪ್ರದೇಶದಲ್ಲಿ ಬೀಬಿ ಕಾರ್ನ್ ಬೆಳೆದಿದ್ದು, ಹೆಚ್ಚಿನ ಲಾಭ ತಂದು ಕೊಟ್ಟಿದೆ. ವರ್ಷದಲ್ಲಿ ಮೂರರಿಂದ ನಾಲ್ಕು ಬಾರಿ ಬೆಳೆ ತೆಗೆಯಬಹುದು ಎಂಬುದನ್ನು ಕಂಡುಕೊಂಡಿದ್ದಾರೆ. ಬೇಬಿ ಕಾರ್ನ್ ಮಾರಾಟಕ್ಕೆ ಸಿದ್ಧವಾಗಲು 45-50 ದಿನ ತೆಗೆದುಕೊಳ್ಳುತ್ತದೆ. ಒಂದು ಎಕರೆ ಭೂಮಿಯಲ್ಲಿ ಬೇಬಿ ಕಾರ್ನ್ ಹಾಕಲು ಸುಮಾರು 15 ಸಾವಿರ ರೂ ಖರ್ಚು ಬರುತ್ತದೆ. ಕಟಾವಿಗೆ ಬಂದಾಗ ಏಕಕಾಲಕ್ಕೆ ಒಂದು ಲಕ್ಷ ರೂ.ಮೌಲ್ಯದ ಬೇಬಿ ಕಾರ್ನ್ ಬೆಳೆಯನ್ನು ಉತ್ಪಾದಿಸಬಹುದಾಗಿದೆ. ಜೋಳವನ್ನು ಎರಡು ಮೂರು ಬಾರಿ ಕಿತ್ತು ಮಾರಾಟ ಮಾಡಲಾಗುತ್ತದೆ. ಇದಾದ ನಂತರ ಜೋಳದ ಕಡ್ಡಿಯನ್ನು ಜಾನುವಾರುಗಳ ಮೇವಿಗಾಗಿ ಬಳಕೆ ಮಾಡಲಾಗುತ್ತದೆ. ಈ ಜೋಳದಲ್ಲಿ ಹೆಚ್ಚಿನ ಪೌಷ್ಟಿಕಾಂಶ ಇದೆ ಎಂದು ಜನರು ಬೇಯಿಸಿ ತಿನ್ನಲು ಹೆಚ್ಚಾಗಿ ಖರೀದಿಸುತ್ತಾರೆ.

ರಾಗಿ, ಭತ್ತಕ್ಕೂ ಒತ್ತು

ಜಮೀನಿನಲ್ಲಿ ಸಮಗ್ರ ಕೃಷಿಗೆ ಹೆಚ್ಚಿನ ಪ್ರಾಧಾನ್ಯತೆ ಕೊಟ್ಟಿರುವ ಇವರು 4 ಎಕರೆಯಲ್ಲಿ ರಾಗಿ ಬೆಳೆ, 3 ಎಕರೆ ಭೂಮಿಯಲ್ಲಿ ಉತ್ತಮ ತಳಿಯ ಭತ್ತ ಬೆಳೆಯುತ್ತಿದ್ದಾರೆ. ಈಗ ರಾಗಿ ಬೆಳೆ ಕಟಾವು ಮಾಡಿದ್ದು, ಸಲು ಚೆನ್ನಾಗಿ ಬಂದಿದೆ. ಭತ್ತವನ್ನ ಸಹ ಬೆಳೆದು ಸೈ ಎನಿಸಿಕೊಂಡಿದ್ದಾರೆ. ಉತ್ತಮ ತಳಿಯನ್ನು ತಂಡು ನಾಟಿ ಮಾಡಿ ಉತ್ಕೃಷ್ಟ ಬೆಳೆ ತೆಗೆದಿದ್ದಾರೆ.

ಕೈ ಹಿಡಿದ ಹೈನುಗಾರಿಕೆ

ಬೇಸಾಯದ ಜತೆಗೆ ಹೈನುಗಾರಿಕೆಗೂ ಕೂಡ ಹೆಚ್ಚಿನ ಒತ್ತು ನೀಡಿದ್ದಾರೆ. ಹೈನುಗಾರಿಕೆ ಮಾಡಿದರೆ 15 ದಿನಗಳಿಗೊಮ್ಮೆ ಆದಾಯ ಕಾಣಬಹುದಾಗಿದೆ. ಹಾಗಾಗಿ ಇವರು ಹೈನುಗಾರಿಕೆ ಮಾಡುತ್ತಿದ್ದು ಉತ್ತಮ ತಳಿಯ 10 ಸೀಮೆ ಹಸುಗಳನ್ನು ಸಾಕಾಣಿಕೆ ಮಾಡಿದ್ದಾರೆ. ಇದರ ಜತೆಗೆ ಹಳ್ಳಿಕಾರ್ ರಾಸುಗಳನ್ನು ಸಾಕಾಣಿಕೆ ಮಾಡಿದ್ದಾರೆ. ಅಷ್ಟು ಜಮೀನನ್ನು ಎತ್ತುಗಳಿಂದಲೇ ಉಳುಮೆ ಮಾಡಲು ಕಷ್ಟವಾಗಿರುವ ಕಾರಣ ಸ್ವಂತ ಟ್ರಾಕ್ಟರ್ ಇಟ್ಟುಕೊಂಡು ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಬಿತ್ತನೆಗೆ ರಾಸುಗಳ ಬಳಕೆ ಮಾಡುವುದರಿಂದ ಸ್ವಲ್ಪ ಖರ್ಚು ಕಡಿಮೆಯಾಗುತ್ತದೆ.

ಮೇಕೆ ಸಾಕಣೆ

ಹೈನುಗಾರಿಕೆ ಜತೆಗೆ ಮೇಕೆ ಸಾಕಣೆ ಕೈಗೊಂಡಿದ್ದು, 30 ಮೇಕೆಗಳನ್ನ ಸಾಕಣೆ ಮಾಡಿಕೊಂಡಿದ್ದಾರೆ. ಮೇಕೆಗಳಿಂದ 5-6 ತಿಂಗಳಿಗೊಮ್ಮೆ ಆದಾಯ ಬರುತ್ತದೆ. ಇದರ ಜತೆಗೆ ಕೃಷಿ ಇಲಾಖೆ ವತಿಯಿಂದ ಸಬ್ಸಿಡಿ ಪಡೆದು ಬೃಹತ್ ಕೃಷಿ ಹೊಂಡ ನಿರ್ಮಾಣ ಮಾಡಿಕೊಂಡಿದ್ದಾರೆ. ತಮ್ಮ ಜಮೀನಿನಲ್ಲಿರುವ ಬೋರ್‌ವೆಲ್ನಿಂದ ನೀರನ್ನು ಕೃಷಿ ಹೊಂಡಕ್ಕೆ ತುಂಬಿಸಿಕೊಂಡು ನಂತರ ಬೆಳೆಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ವ್ಯವಸಾಯದ ಕಡೆಗೆ ಮುಖ ಮಾಡುವವರ ಸಂಖ್ಯೆ ತೀರ ಕಡಿಮೆ ಇದೆ. ವ್ಯವಸಾಯದಿಂದ ನಷ್ಟ ಉಂಟಾಗುತ್ತದೆ ಎಂದು ಕೆಲವರು ಹೇಳುತ್ತಾರೆ. ನಾವು ಮಾಡುವ ವೈಜ್ಞಾನಿಕ ಕೃಷಿ ಪದ್ಧತಿಯಿಂದ ನಾವು ಅದಾಯ ಕಾಣಬಹುದಾಗಿದೆ. ಇದರ ಜತೆಗೆ ಒಂದೇ ಬೆಳೆಯನ್ನು ನಂಬಿಕೊಂಡು ವ್ಯವಸಾಯ ಮಾಡಬಾರದು. ತರಹೇವಾರಿ ಬೆಳೆ ಪದ್ಧತಿ ಅನುಸರಿಸಬೇಕು. ಒಂದು ಕೈ ಬಿಟ್ಟರೂ ಮತ್ತೊಂದು ಕೈ ಹಿಡಿಯುತ್ತದೆ. ಜತೆಗೆ ಹೈನುಗಾರಿಕೆ, ಕುರಿ, ಮೇಕೆ ಹಾಗೂ ಕೋಳಿ ಸಾಕಾಣಿಕೆ ಮಾಡಿದ್ದು, ಇದರಿಂದಲೂ ಆದಾಯ ಚೆನ್ನಾಗಿದೆ. ಜತೆಗೆ ನಮ್ಮ ಕೃಷಿಗೆ ಸಾಕಷ್ಟು ಗೊಬ್ಬರ ಲಭಿಸುತ್ತದೆ. ಶ್ರೀನಿವಾಸ್, ರೈತಮೊ.9742903024ಸಂಪರ್ಕದ ಸಮಯ ಬೆಳಿಗ್ಗೆ 10 ರಿಂದ ಸಂಜೆ 6 ರ ವೆರೆಗೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net