ಲಿಂಗದೇವ ಅಲ್ಲ, ಕೂಡಲಸಂಗಮದೇವ: ವಚನಗಳಲ್ಲಿ ಬಸವಣ್ಣನ ಅಂಕಿತನಾಮ ಬಳಸಲು ಸೂಚನೆ

Basavanna
Published on

ಬಾಗಲಕೋಟೆ: ಹೈಕೋರ್ಟ್, ಸುಪ್ರೀಂ ಕೋರ್ಟ್ ತೀರ್ಫ ಗೌರವಿಸಿದ್ದು, ಬಸವಣ್ಣನ ವಚನಗಳಿಗೆ ಕೂಡಲಸಂಗಮದೇವ ಅಂಕಿತ ಬಳಸಲು ಭಕ್ತರಿಗೆ ಸೂಚನೆ ನೀಡಲಾಗಿದೆ. ಬಸವ ಧರ್ಮಪೀಠದಿಂದ ಪ್ರಕಟಗೊಳ್ಳುವ ಪುಸ್ತಕ, ಪ್ರಾರ್ಥನೆಯಲ್ಲಿ ಕೂಡಲಸಂಗಮದೇವ ಬಳಸಲಾಗುವುದು ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಜಗದ್ಗುರು ಮಾತೆ ಗಂಗಾದೇವಿ ಹೇಳಿದರು. ಬಸವ ಧರ್ಮಪೀಠದ ಹಿಂದಿನ ಜಗದ್ಗುರು ಲಿಂ. ಮಾತೆ ಮಹಾದೇವಿ ಅವರು ಲಿಂಗಾಯತ ಸ್ವತಂತ್ರ ಧರ್ಮ, ಹೋರಾಟ ಬಸವ ಧರ್ವಿುಯರ ಸಂಘಟನೆ ಬಲಗೊಳಿಸಲು ಈ ನಿರ್ಧಾರ ಮಾಡಿದ್ದರು. ಹೀಗಾಗಿ ಇನ್ನುಮುಂದೆ ಪೀಠದ ಭಕ್ತರು ಬಸವಣ್ಣನ ವಚನಗಳಿಗೆ ಕೂಡಲಸಂಗಮದೇವ ಬಳಸಬೇಕು. ಶರಣಮೇಳದ ಪ್ರಾರ್ಥನೆಯಲ್ಲಿ ಕೂಡಲಸಂಗಮದೇವ ಬಳಕೆ ಮಾಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಗದ್ಗುರು ಲಿಂಗಾನಂದ ಸ್ವಾಮೀಜಿ, ಜಗದ್ಗುರು ಮಾತೆ ಮಹಾದೇವಿ ಜೀವನದುದ್ದಕ್ಕೂ ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ಹೋರಾಟ ಮಾಡಿದ್ದಾರೆ. ಹಲವಾರು ತ್ಯಾಗ ಮಾಡಿದ್ದಾರೆ. ಲಿಂಗಾಯತ ಸ್ವತಂತ್ರ ಹೋರಾಟ ಹಿತದೃಷ್ಟಿಯಿಂದ ಬಸವ ಧರ್ಮ ಪೀಠದ ಜಂಗಮಮೂರ್ತಿಗಳು, ಭಕ್ತರು, ಬಸವ ಧರ್ಮ ಪೀಠದ ಅಧೀನ ಸಂಸ್ಥೆಗಳು, ರಾಷ್ಟ್ರೀಯ ಬಸವ ದಳ, ಲಿಂಗಾಯತ ಧರ್ಮ ಮಹಾಸಭಾದ ಪದಾಧಿಕಾರಿಗಳು, ಸದಸ್ಯರು ಬಸವಣ್ಣನವರ ವಚನಗಳಿಗೆ ಕೂಡಲಸಂಗಮದೇವ ಅಂಕಿತ ಬಳಸಬೇಕು, ಬಸವಾದಿ ಶರಣರು ಸೃಷ್ಟಿಕರ್ತ ಪರಮಾತ್ಮನಿಗೆ ಲಿಂಗದೇವ ಎಂದು ಕರೆದಿರುವುದರಿಂದ ಲಿಂಗದೇವ ಅನ್ನು ದೇವನಾಮವಾಗಿ ಬಳಸಬಹುದು ಎಂದು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಬಸವ ಧರ್ಮ ಪೀಠವು ಬಸವಣ್ಣ ವಚನಗಳಿಗೆ ಕೂಡಲಸಂಗಮದೇವ ಅಂಕಿತ ಬಳಸಲು ನಿರ್ಧಾರ ಮಾಡಿರುವುದು ಸ್ವಾಗತಾರ್ಹ. ಎಲ್ಲ ಭಕ್ತ ಸಮೂಹ ಇದನ್ನೇ ಬಳಸಬೇಕು. | ಮಾದೇಶ್ವರ ಸ್ವಾಮೀಜಿ ಬಸವ ಧರ್ಮ ಪೀಠದ ಉತ್ತರಾಧಿಕಾರಿ, ಕೂಡಲಸಂಗಮ ಬಸವಣ್ಣನ ವಚನಾಂಕಿತವನ್ನು ‘ಕೂಡಲ ಸಂಗಮದೇವ’ ಎಂದೇ ಬಳಸಬೇಕು ಎಂದು ಬಸವ ಧರ್ಮ ಪೀಠದ ಅಧ್ಯಕ್ಷೆ ಡಾ. ಗಂಗಾ ಮಾತಾಜಿ ಸಂದೇಶ ನೀಡಿದ್ದು ಸಂತಸದ ಸಂಗತಿ. | ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ

ಎರಡು ದಶಕಗಳ ಹಿಂದೆ ವಿರೋಧ

ಮಾತೆ ಮಹಾದೇವಿ ಬಸವಣ್ಣನವರ 800ನೇ ಲಿಂಗೈಕ್ಯ ಸಂಸ್ಮರಣೆ ನಿಮಿತ್ತ ಬಸವಣ್ಣವರ ವಚನಗಳ ಸಂಶೋಧನೆ ಕೈಗೊಂಡು, ವಚನಗಳನ್ನು ಶುದ್ಧೀಕರಣ ಮಾಡಿ ಬಸವ ವಚನ ದೀಪ್ತಿ ಗ್ರಂಥವನ್ನು 1996ರಲ್ಲಿ ಪ್ರಕಟಿಸಿದ್ದರು. ಬಸವಣ್ಣನ ವಚನಗಳಿಗೆ ‘ಲಿಂಗದೇವ’ ಅಂಕಿತ ಬಳಸಿದ್ದಕ್ಕೆ ರಾಜ್ಯಾದ್ಯಂತ ದೊಡ್ಡಮಟ್ಟದಲ್ಲಿ ವಿರೋಧ ವ್ಯಕ್ತವಾಗಿತ್ತು. ಕರ್ನಾಟಕ ಸರ್ಕಾರ ವಚನ ದೀಪ್ತಿ ಗ್ರಂಥ ಮುಟ್ಟುಗೋಲು ಹಾಕಿಕೊಂಡಿತ್ತು. ಸರ್ಕಾರದ ಕ್ರಮವನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ಬಳಿಕ ಮಾತೆ ಮಹಾದೇವಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಅಲ್ಲಿಯೂ ಸರ್ಕಾರದ ಕ್ರಮ ಎತ್ತಿ ಹಿಡಿಯಲಾಗಿತ್ತು. ಸುಪ್ರೀಂ ಕೋರ್ಟ್ ತೀರ್ಪು ಗೌರವಿಸುವುದಾಗಿ ಲಿಂ. ಮಾತೆ ಮಹಾದೇವಿ 2017 ಸೆಪ್ಟೆಂಬರ್ 21 ಪ್ರಕಟಣೆ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net