ಘನತ್ಯಾಜ್ಯ ನಿರ್ವಹಣಾ ಘಟಕ ನಿರ್ಮಿಸಲು ಸೂಚನೆ

19 RMN-MGD P02
ಮಾಗಡಿ ತಾಲೂಕಿನ ಲಕ್ಕೇನಹಳ್ಳಿ ಬಳಿ ಘನತ್ಯಾಜ್ಯ ವಿಲೇವಾರಿ ಘಟಕವನ್ನು ಶಾಸಕ ಎನ್.ಶ್ರೀನಿವಾಸ್ ಉದ್ಘಾಟಿಸಿದರು. ಲಕ್ಕೇನಹಳ್ಳಿ ಗ್ರಾಪಂ ಅಧ್ಯಕ್ಷ ಎಚ್. ನಾರಾಯಣ್, ನಂದೀಶ್, ಬೈರೇಗೌಡ ಇತರರು ಇದ್ದರು.
Published on

ನೆಲಮಂಗಲ ಶಾಸಕ ಶ್ರೀನಿವಾಸ್ ಮಾಹಿತಿ - ಲಕ್ಕೇನಹಳ್ಳಿ ಬಳಿ ತ್ಯಾಜ್ಯ ವಿಲೇವಾರಿ ಘಟಕ ಉದ್ಘಾಟನೆ

ಮಾಗಡಿ: ಕಸ ಮುಕ್ತ ಗ್ರಾಮ ಪಂಚಾಯಿತಿಗಳನ್ನಾಗಿ ಮಾಡುವುದೇ ನಮ್ಮ ಗುರಿ ಎಂದು ನೆಲಮಂಗಲ ಶಾಸಕ ಎನ್.ಶ್ರೀನಿವಾಸ್ ಹೇಳಿದರು.ತಾಲೂಕಿನ ಲಕ್ಕೇನಹಳ್ಳಿ ಬಳಿ ಘನತ್ಯಾಜ್ಯ ವಿಲೇವಾರಿ ಘಟಕವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿ,ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಮನೆಗಳಲ್ಲಿ ಸಂಗ್ರಹವಾಗುವ ಹಸಿ ಕಸ, ಒಣ ಕಸ ವಿಂಗಡಣೆ ಮಾಡದಿದ್ದರೆ ಸಮಸ್ಯೆ ಉಂಟಾಗಲಿದೆ. ಇದರಿಂದಾಗಿ ಜನರ ಬಗ್ಗೆ ಕಾಳಜಿ ಹಾಗೂ ಬದ್ಧತೆಯಿಂದಾಗಿ ಘನ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಿಸಲಾಗುತ್ತಿದೆ. ಇಂತಹ ಘನತ್ಯಾಜ್ಯ ನಿರ್ವಹಣಾ ಘಟಕ ತಾಲೂಕಿನಾದ್ಯಂತ ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಘಟಕ ನಿರ್ಮಾಣಕ್ಕೆ ಅನುದಾನ ಕೊರತೆ ಉಂಟಾದರೆ ಶಾಸಕರ ಅನುದಾನ ನೀಡಲಾಗುವುದು ಎಂದರು.

ಬಮುಲ್ ನಿರ್ದೇಶಕ ಸ್ಥಾನ ಸೋಲೂರು ಹೋಬಳಿಗೆ ನೀಡುವಂತೆ ಪಕ್ಷದ ಗಮನಕ್ಕೆ ತರಲಾಯಿತು. ಆದರೆ, ಮುಂದಿನ ದಿನಗಳಲ್ಲಿ ಅವಕಾಶ ನೀಡಲಾಗುವುದು. ನಮ್ಮ ತೀರ್ಮಾನಕ್ಕೆ ಬದ್ಧರಾಗಿರುವಂತೆ ಪಕ್ಷ ತಿಳಿಸಿದೆ. ಅದರಂತೆ ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗಿದ್ದೇವೆ.ಪಕ್ಷಕ್ಕಿಂತ ಯಾರು ದೊಡ್ಡವರಲ್ಲ, ಪಕ್ಷ ಯಾರನ್ನು ಸೂಚಿಸುವುದೋ ಅವರ ಪರ ಕೆಲಸಮಾಡುತ್ತೇನೆ ಎಂದರು.

ಲಕ್ಕೇನಹಳ್ಳಿ ಗ್ರಾಪಂ ಅಧ್ಯಕ್ಷ ಎಚ್. ನಾರಾಯಣ್ ಮಾತನಾಡಿ, ಪರಿಸರ ಸಂರಕ್ಷಣೆ, ಸ್ವಚ್ಛ ನಗರವನ್ನಾಗಿಸುವ ಉದ್ದೇಶದಿಂದ ನರೇಗಾ ಯೋಜನೆಯಡಿ 18,70 ಲಕ್ಷ, 15ನೇ ಹಣಕಾಸು ಯೋಜನೆಯಡಿ 2,50 ಲಕ್ಷ ಹಾಗೂ ಪಂಚಾಯಿತಿ ಅನುದಾನದಡಿ 2.50 ಲಕ್ಷ ಸೇರಿ 23,70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. 48 ಗ್ರಾಮಗಳಲ್ಲಿ ಸಂಗ್ರಹವಾಗುವ ಒಣಕಸ, ಪೇಪರ್, ಗ್ಲಾಸ್, ಎಲೆಕ್ಟ್ರಾನಿಕ್, ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸಲಾಗುವುದು. ಈಗಾಗಲೇ ತಾತ್ಕಾಲಿಕ ಸೆಡ್‌ನಲ್ಲಿ ಘಟಕ ಆರಂಭಿಸಿದ್ದು, ಸಂಗ್ರಹಿಸುವ ಕಸದಿಂದ ಗೊಬ್ಬರವನ್ನಾಗಿ ಮಾಡಿ ಮಾರಾಟ ಮಾಡಲಾಗುವುದು ಎಂದರು.

ಘನ ತ್ಯಾಜ್ಯ ಸಂಪನ್ಮೂಲ ಸಂಗ್ರಹಣೆಗಾಗಿ ಸ್ತ್ರೀ ಶಕ್ತಿ ಸಂಘಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಮಹಿಳಾ ಚಾಲಕರು, ನಿರ್ವಾಹಕರೆ ವಾಹನ ಚಲಾಯಿಸುವುದು ವಿಶೇಷವಾಗಿದೆ. ಘನ ತ್ಯಾಜ್ಯ ಸಂಪನ್ಮೂಲ ರೀ ಸೈಕಲ್ ಮಾಡುವುದರಿಂದ ಪರಿಸರ ಹಾಗೂ ಪ್ರಾಣಿ, ಪಕ್ಷಿಗಳು ಉಳಿಯಲಿದೆ. ತಾಲೂಕಿನ ಮೋಟಗಾನಹಳ್ಳಿ, ಕಣ್ಣೂರು ಗ್ರಾಪಂನಲ್ಲಿ ಘಟಕ ನಿರ್ಮಿಸಲಾಗಿದ್ದು, ಇದು 3ನೇ ಘಟಕವಾಗಿದೆ. ಎಲ್ಲ ಗ್ರಾಪಂಗಳಲ್ಲಿ ಇಂತಹ ಘಟಕ ನಿರ್ಮಾಣವಾದರೆ ಗ್ರಾಮಗಳು ಸುಂದರವಾಗಲಿವೆ ಎಂದರು.

ಗ್ರಾಪಂ ಉಪಾಧ್ಯಕ್ಷ ಗಂಗರಾಜ್,ಸದಸ್ಯರಾದ ಕೆ.ಪಿ. ನಂದೀಶ್, ಪಂಕಜಾ, ವಿಜಯಲಕ್ಷ್ಮಮ್ಮ, ಕೃಷ್ಣಪ್ಪ, ಬೈರೇಗೌಡ, ಜಿಪಂ ಮಾಜಿ ಸದಸ್ಯರಾದ ಎಸ್‌ಸಿಬಿಎಸ್ ಶಿವರುದ್ರಯ್ಯ, ರಂಗಸ್ವಾಮಯ್ಯ, ಸಿ.ಆರ್.ಗೌಡ, ತಾಪಂ ಮಾಜಿ ಸದಸ್ಯರಾದ ಶಂಕರಪ್ಪ, ಅನಸೂಯ ಕಾಂತರಾಜ್, ಸೋಲೂರು ನಾಗರಾಜ್, ಇಒ ಜಯಪಾಲ್, ಜಿಪಂ ಎಸ್‌ಬಿಎಂ ಸಮಾಲೋಚಕ ಸೀನಪ್ಪ, ಕಾರ್ಯದರ್ಶಿ ಕೃಷ್ಣಯ್ಯ ಇದ್ದರು.

ನೆಲಮಂಗಲಕ್ಕೆ ಮೆಟ್ರೋ!

ನೆಲಮಂಗಲಕ್ಕೆ ಮೆಟ್ರೋ ತರಲು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಗಮನಕ್ಕೆ ತಂದು ಅಧಿವೇಶನದಲ್ಲಿ ಚರ್ಚಿಸಿದ್ದೇನೆ. ಡಿಪಿಆರ್ ಕಾರ್ಯ ನಡೆಯುತ್ತಿದೆ. ತುಮಕೂರಿಗೆ ಮೆಟ್ರೋ ತರಲು ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರು 50:50 ಮಾದರಿಯಲ್ಲಿ ಪ್ರಯತ್ನಿಸುತ್ತಿದ್ದಾರೆ. ತುಮಕೂರು ಹಾಗೂ ನೆಲಮಂಗಲಕ್ಕೂ ಮೆಟ್ರೋ ಬರುವುದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಅದೇ ರೀತಿ ಗ್ರೇಟರ್ ಬೆಂಗಳೂರಿಗೂ ನೆಲಮಂಗಲಕ್ಕೂ ಯಾವುದೇ ಸಂಬಂಧವಿಲ್ಲ. ಈ ಬಗ್ಗೆ ಯಾರು ತಲೆಕೆಡಿಸಿ ಕೊಳ್ಳುವ ಅಗತ್ಯವಿಲ್ಲ ಎಂದು ನೆಲಮಂಗಲ ಶಾಸಕ ಎನ್.ಶ್ರೀನಿವಾಸ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net