ಕ್ಷಯರೋಗಿಗಳಿಗೆ ಪುಷ್ಟಿ ಪೌಡರ್ ಒದಗಿಸಲು ಸೂಚನೆ

Nutrition
Published on

ಬೆಂಗಳೂರು: ರಾಜ್ಯದಲ್ಲಿ ಕ್ಷಯರೋಗದಿಂದ ಬಲಹೀನರಾಗಿರುವ ರೋಗಿಗಳಿಗೆ ಚಿಕಿತ್ಸೆ ಆರಂಭದ ಎರಡು ತಿಂಗಳ ಕಾಲ ಪುಷ್ಟಿ ಪೌಡರ್ ರೂಪದಲ್ಲಿ ಹೆಚ್ಚುವರಿ ಪೌಷ್ಟಿಕ ಆಹಾರ ಒದಗಿಸಲು ಆರೋಗ್ಯ ಇಲಾಖೆ ಆದೇಶಿಸಿದೆ.

ಹೊಸದಾಗಿ ಕ್ಷಯರೋಗಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿರುವ ರೋಗಿಯ ದೇಹದ ಸ್ಥಿತಿ ಬಿಎಂಐ (ಬಾಡಿ ಮಾಸ್ ಇಂಡೆಕ್ಸ್) 18ಕ್ಕಿಂತ ಕಡಿಮೆ ಇದ್ದರೆ ಮೊದಲ ಎರಡು ತಿಂಗಳ ಅವಧಿಯಲ್ಲಿ ಪ್ರತಿ ತಿಂಗಳು ಆರು ಕೆ.ಜಿ. ಪುಷ್ಟಿ ಪೌಡರ್ ನೀಡಲು ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ ವ್ಯಾಪ್ತಿಗೆ ಬರುವ ಚಿತ್ರದುರ್ಗ, ಬಳ್ಳಾರಿ, ತುಮಕೂರು ಹೊರತುಪಡಿಸಿ ರಾಜ್ಯದ ಉಳಿದ ಎಲ್ಲ ಜಿಲ್ಲೆಗಳ ಅರ್ಹ ಫಲಾನುಭವಿಗಳಿಗೆ ಆಯಾ ಅಂಗನವಾಡಿ ಕೇಂದ್ರದ ಮೂಲಕ ವಿತರಣೆ ಮಾಡಬೇಕು ಎಂದು ತಿಳಿಸಿದೆ.

ಇದಕ್ಕಾಗಿ 2025ರ ಆ.1ರಿಂದ ಹೊಸದಾಗಿ ಪತ್ತೆಯಾಗಿರುವ ಕ್ಷಯರೋಗಿಗಳ ಪೌಡರ್ ಸೇವನೆ ಮಾಡಿಸುತ್ತಿರುವ ಹಾಗೂ ಅವರ ದೇಹದ ತೂಕವನ್ನು ಪರೀಕ್ಷೆ ಮಾಡಿಸಿ ನಿಕ್ಷಯ್ ತಂತ್ರಾಂಶದಲ್ಲಿ ಹಾಗೂ ಕ್ಷಯರೋಗಿಯ ಚಿಕಿತ್ಸೆ ಕಾರ್ಡಿನಲ್ಲಿ ದಾಖಲು ಮಾಡುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಸರಬರಾಜು ಮಾಡಲಾದ ಪುಷ್ಟಿ ಪೌಡರ್ ದಾಸ್ತಾನಿನ ಗುಣಮಟ್ಟ ಕೆಡದಂತೆ ಶೇಖರಣೆ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net