

ಬೆಂಗಳೂರು: ಮೆಟ್ರೋ 2ನೇ ಹಂತವನ್ನು 2025ಕ್ಕೆ ಪೂರ್ಣಗೊಳಿಸುವ ಗುರಿಯಿದೆ. ಆದರೆ, ಅದನ್ನು 2024ಕ್ಕೆ ಪೂರ್ಣಗೊಳಿಸಲು ಸೂಚಿಸಿದ್ದೇನೆ. ನಂತರ 3ನೇ ಹಂತವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೆಂಗಳೂರಿನ ಸಮಗ್ರ ಅಭಿವೃದ್ಧಿಯಲ್ಲಿ ಮೆಟ್ರೋ ಮಾರ್ಗವನ್ನು ರಾಮನಗರ, ಮಾಗಡಿ ರಸ್ತೆ ಮತ್ತು ರಾಜನಕುಂಟೆವರೆಗೂ ವಿಸ್ತರಣೆ ಮಾಡಲು ಯೋಜನೆ ರೂಪಿಸುವಂತೆ ಸೂಚಿಸಲಾಗಿದೆ ಎಂದೂ ತಿಳಿಸಿದರು.
ಇಂದು ಮೆಟ್ರೋ ನೇರಳೆ ಮಾರ್ಗದ 7.5 ಕಿಮೀ ಉದ್ದದ ಪಶ್ಚಿಮ ವಿಸ್ತರಣೆ ಮಾರ್ಗದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಬೊಮ್ಮಾಯಿ ಅವರು, ಅಂತಾರಾಷ್ಟ್ರೀಯ ನಗರವಾದ ಬೆಂಗಳೂರಿಗೆ ಹೆಚ್ಚಿನ ಮೆಗಾ ಪ್ರಾಜೆಕ್ಟ್ಗಳನ್ನು ನೀಡಲಾಗುತ್ತಿದ್ದು, ಇನ್ನು 20 ದಿನಗಳಲ್ಲಿ ಆ ಬಗ್ಗೆ ಘೋಷಣೆ ಮಾಡಲಾಗುವುದು. ಸಬ್ಅರ್ಬನ್ ರೈಲು, ಮೆಟ್ರೋ, ಹೊರ ವರ್ತುಲ ರಸ್ತೆ, ಹೈ ಸ್ಪೀಡ್ ರೈಲ್ ಯೋಜನೆ ಕಲ್ಪಿಸಲಾಗುವುದು. ಇದೊಂದು ನನ್ನ ಕನಸಿನ ಕೂಸಾಗಿದ್ದು, ಅದಕ್ಕೆ ರೂಪುರೇಷೆ ಸಿದ್ಧಗೊಳಿಸಲಾಗುತ್ತಿದೆ ಎಂದರು.
ಬೆಂಗಳೂರಿಗೆ ಮೆಟ್ರೋ ಮತ್ತು ವಿಮಾನ ನಿಲ್ದಾಣ ಕೊಟ್ಟವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಿಪೇಯಿ ಅವರಾಗಿದ್ದಾರೆ. ಈಗಿನ ಪ್ರಧಾನಿ ನರೇಂದ್ರ ಮೋದಿ ಅವರು, ಮೆಟ್ರೋ ಬಗ್ಗೆ ಯಾವುದೇ ಯೋಜನೆ ಮಾಡಿದರೂ ಹಣಕಾಸು ನೆರವು ಒದಗಿಸುವುದಾಗಿ ತಿಳಿಸಿದ್ದಾರೆ. ಇವರು ಸಬ್ ಅರ್ಬನ್ ರೈಲಿಗೆ ಅನುಮತಿ ನೀಡಿದ್ದಾರೆ. ನಗರಕ್ಕೆ ರಾಷ್ಟ್ರಮಟ್ಟದ ನಾಯಕರ ಕೊಡುಗೆಯಿದ್ದು, ಇಲ್ಲಿ ಬೆಳೆಯುತ್ತಿರುವ ಜನಸಂಖ್ಯೆಗೆ ಉತ್ತಮ ವಾತಾವರಣ, ವಸತಿ, ಮೂಲಸೌಕರ್ಯ ಮತ್ತು ಉದ್ಯೋಗ ಸಿಗುವಂತೆ ಮಾಡುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ ಎಂದರು.
ಬಿಬಿಎಂಪಿ ಕೇಂದ್ರ ಭಾಗವಾದ ಸೆಂಟ್ರಲ್ ಬಿಸಿನೆಸ್ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾಡಲಾಗುವುದು. ನಗರದ ಎಲ್ಲ 4 ದಿಕ್ಕುಗಳಿಗೂ ಸೆಂಟ್ರಲ್ ಬಿಸಿನೆಸ್ ಡಿಸ್ಟ್ರಿಕ್ಟ್ (ಸಿಬಿಡಿ) ಮಾಡಲಾಗುವುದು. ಜನರು ಮತ್ತು ಜನಪ್ರತಿನಿಧಿಗಳು ಸಹಕಾರ ನೀಡಿದರೆ, ಮುಂದೆ ಬೆಂಗಳೂರನ್ನು ನಿಜವಾದ ಅಂತಾರಾಷ್ಟ್ರೀಯ ನಗರವಾಗಿ ಮಾಡಲಾಗುವುದು ಎಂದರು.
ನಗರವನ್ನು ಕೊಳೆಗೇರಿಮುಕ್ತ ಮಾಡುವ ಉದ್ದೇಶವಿದ್ದು, ಮೊದಲ ಹಂತವಾಗಿ 75 ಕೊಳೆಗೇರಿಗೆ ಮೂಲ ಸೌಕರ್ಯ ಒದಗಿಸಲಾಗುವುದು. ಆರೋಗ್ಯಕ್ಕೆ ಒತ್ತು ನೀಡಲಾಗುತ್ತದೆ. ಹೈಡೆನ್ಸಿಟಿ ರಸ್ತೆಗಳಿಗೆ ನೋ ಸಿಗ್ನಲ್ ಮತ್ತು ಟ್ರಾಫಿಕ್ ಮುಕ್ತ ಸಂಚಾರಕ್ಕೆ ಅನುಕೂಲ ಮಾಡಲಾಗುವುದು. ಬೆಂಗಳೂರು ಅಮೃತ ನಗರೋತ್ಥಾನ ಯೋಜನೆಯನ್ನು ಕೆಲವೇ ತಿಂಗಳಲ್ಲಿ ಘೋಷಣೆ ಮಾಡಲಾಗುವುದು. ರಾಜ್ಯದ ಎಲ್ಲ ಟೈರ್-1, 2 ಮತ್ತು 3ನೇ ನಗರದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರದೀಪ್ ಸಿಂಗ್ ಪುರಿ ಅವರಿಗೆ ಮನವಿ ಮಾಡಿದರು.
ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಮಾತನಾಡಿ, ದೇಶದ ಬೆಳವಣಿಗೆಯಲ್ಲಿ ಬೆಂಗಳೂರಿನ ಜನರ ಕೊಡುಗೆ ಅಪಾರವಾಗಿದೆ. ಕರ್ನಾಟಕದಿಂದ ಶೇ.38 ಐ.ಟಿ. ಎಕ್ಸ್‌ಪೋರ್ಟ್ ಆಗುತ್ತಿದೆ. ಒಟ್ಟಾರೆ ಜಿಡಿಪಿಯಲ್ಲಿ ಶೇ.36 ಕೊಡುಗೆಯಿದೆ ಎಂದರು. ನಗರದಲ್ಲಿ ಸ್ಕಿಲ್ ಇರುವ ಯುವಕರಿಗೆ ಹೆಚ್ಚು ಉದ್ಯೋಗ ಇದೆ. ಜನ ಸಂಚಾರ ಸುಗಮವಾಗಲು ಮೆಟ್ರೋ ರೈಲು ಸೇವೆಗೆ ಎಲ್ಲ ಅವಕಾಶ ನೀಡಲಾಗುವುದು ಎಂದರು. ಬೆಂಗಳೂರು ಮೆಟ್ರೋದಲ್ಲಿ ಶೇ.99.8 ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಇದು ಮುಂಬೈ ಹಾಗೂ ದೆಹಲಿಗೂ ಮೀರಿದ ಪ್ರಯಾಣಿಕರ ಸಂಖ್ಯೆಯಾಗಿದೆ ಎಂದರು.
ಕೇಂದ್ರ ಸರ್ಕಾರಕ್ಕೆ 2030 ರ ವೇಳೆಗೆ 60 ಮಿಲಿಯನ್ ಜನಸಂಖ್ಯೆಗೆ ವಸತಿ ಅವಕಾಶ ಮತ್ತು ಮೂಲ ಸೌಕರ್ಯ ಕಲ್ಪಿಸುವ ಅಜೆಂಡಾ ಇದೆ. ಯುಪಿಎ ಸರ್ಕಾರ ನಗರಾಭಿವೃದ್ಧಿಗೆ 1.57ಲಕ್ಷ ಕೋಟಿ ವೆಚ್ಚ ಮಾತ್ರ ಮಾಡಿದೆ. ಎನ್.ಡಿ.ಎ. ಸರ್ಕಾರ 11 ಲಕ್ಷ ಕೋಟಿ ರೂ.ಗಳನ್ನು ನಗರಾಭಿವೃದ್ಧಿಗೆ ನೀಡಿದೆ. ಪ್ರತೀ ಭಾರತೀಯರಿಗೆ ಗುಣಮಟ್ಟದ ಮನೆ ನೀಡುವ ಯೋಜನೆ ತರಲಾಗಿದ್ದು, ನಗರದಲ್ಲಿ ವಾಸಿಸುವವರಿಗೆ ಒಂದು ಲಕ್ಷ ಕೋಟಿ ವಸತಿ ಯೋಜನೆ ನೀಡುವ ಗುರಿ ಇತ್ತು. ಒಂದು ಕೋಟಿ 13 ಲಕ್ಷ ವಸತಿ ಮಂಜೂರು ಮಾಡಲಾಗಿದೆ ಎಂದರು.