

ಪಂಕಜ ಕೆ.ಎಂ. ಬೆಂಗಳೂರು
ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ನೆ್ರೆೆ ಯುರಾಲಜಿ ಸಂಸ್ಥೆಯಲ್ಲಿ (ಐಎನ್‌ಯು) ಹೆಚ್ಚುವರಿ ಸೇವೆ ಕಲ್ಪಿಸಲು ನಿರ್ಮಾಣವಾಗುತ್ತಿರುವ ಅನೆಕ್ಸ್ ಕಟ್ಟಡ ಶಂಕುಸ್ಥಾಪನೆಯಾಗಿ 8 ವರ್ಷಗಳೆದೂ ಕಾಮಗಾರಿ ಪೂರ್ಣಗೊಂಡಿಲ್ಲ. ಇದರಿಂದ ಸಂಸ್ಥೆಯಲ್ಲಿ ಹೆಚ್ಚುವರಿ ಸಂಖ್ಯೆಯಲ್ಲಿ ರೋಗಿಗಳಿದ್ದ ಸಂದರ್ಭದಲ್ಲಿ ದಾಖಲಾತಿ ಮತ್ತು ಚಿಕಿತ್ಸೆಗೆ ಸಮಸ್ಯೆಯಾಗುತ್ತಿದ್ದು, ಹಾಸಿಗೆ ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಕಟ್ಟಡ ಕಾಮಗಾರಿಗೆ ಆರಂಭದಲ್ಲಿ 18.25 ಕೋಟಿ ರೂ. ವೆಚ್ಚ ಅಂದಾಜಿಸಲಾಗಿತ್ತು. ಆದರೆ ಕೋವಿಡ್‌ನಿಂದಾಗಿ ಕಾಮಗಾರಿ ವಿಳಂಬವಾಯಿತಲ್ಲದೆ, ನಂತರದಲ್ಲಿ ನಿರ್ಮಾಣ ಸಾಮಗ್ರಿಗಳ ದರ ಹೆಚ್ಚಳ ಹಾಗೂ ಮೂಲ ನಕ್ಷೆಯಲ್ಲಿ ಬದಲಾವಣೆ ಮಾಡಿ ಹೊಸ ಘಟಕಗಳ ಸೇರ್ಪಡೆಯಿಂದಾಗಿ ಸರ್ಕಾರಕ್ಕೆ ಹೆಚ್ಚುವರಿ 7.75 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಯಿತು. ಇದಕ್ಕೆ ಅನುಮೋದನೆ ದೊರೆಯುವುದು ತಡವಾಗಿದ್ದು ಸೇರಿ ನಾನಾ ಕಾರಣಗಳಿಂದ ಕಾಮಗಾರಿ ಪೂರ್ಣಗೊಳ್ಳಲು ವಿಳಂಬವಾಯಿತು ಎನ್ನುತ್ತಾರೆ ಅಧಿಕಾರಿಗಳು.
ಚಿಕಿತ್ಸೆಗೆ ಕಾಯುವ ಪರಿಸ್ಥಿತಿ: ಆಸ್ಪತ್ರೆಯ ಹೊರರೋಗಿಗಳ ವಿಭಾಗದಲ್ಲಿ ನಿತ್ಯ 250-300 ರೋಗಿಗಳು ಭೇಟಿ ನೀಡುತ್ತಿದ್ದು, ಇವರಲ್ಲಿ 40-50 ಒಳರೋಗಿಗಳು ದಾಖಲಾಗುತ್ತಾರೆ. ಸದ್ಯ ಇರುವ ವ್ಯವಸ್ಥೆಯಲ್ಲಿ 160 ಹಾಸಿಗೆಗಳಷ್ಟೇ ಲಭ್ಯ ಇರುವುದರಿಂದ ಹಾಸಿಗೆ ಕೊರತೆ ಉಂಟಾಗುತ್ತಿದೆ. ಹಾಗಾಗಿ ತುರ್ತು ಅಗತ್ಯ ಇಲ್ಲದ ಪ್ರಕರಣಗಳಿಗೆ ದಿನಾಂಕ ನೀಡಲಾಗುತ್ತದೆ. ಹೀಗಾಗಿ ಚಿಕಿತ್ಸೆಗೆ ರೋಗಿಗಳು ವಾರಗಟ್ಟಲೆ, ಕೆಲವೊಮ್ಮೆ ತಿಂಗಳುವರೆಗೂ ಕಾಯುವ ಪರಿಸ್ಥಿತಿ ಇದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಡಯಾಲಿಸಿಸ್ ಸಂಖ್ಯೆಯೂ ಅಧಿಕ: ಸದ್ಯ ಪ್ರತಿದಿನ ಸಂಸ್ಥೆ ಸೇರಿ ಹೆಚ್ಚುವರಿಯಾಗಿ ಗೋವಿಂದರಾಜನಗರ ಹಾಗೂ ಯಶವಂತಪುರದ ಬಿಬಿಎಂಪಿ ಆಸ್ಪತ್ರೆಯಲ್ಲೂ ಸಂಸ್ಥೆ ವತಿಯಿಂದಲೇ ಡಯಾಲಿಸಿಸ್ ನಡೆಸಲಾಗುತ್ತಿದೆ. ಈ ಮೂರು ಸ್ಥಳಗಳಿಂದ ನಿತ್ಯ ದಿನದ 24 ಗಂಟೆ 220 ಡಯಾಲಿಸಿಸ್ ಡಯಾಲಿಸಿಸ್ ನಡೆಸಲಾಗುತ್ತಿದೆ. ಹೊಸ ಕಟ್ಟಡವಾದರೆ ಅಲ್ಲಿಯೂ ಡಯಾಲಿಸಿಸ್ ಮಾಡಲಿದ್ದು, ಇನ್ನೂ ಹೆಚ್ಚಿನ ಜನರಿಗೆ ಸೌಲಭ್ಯ ದೊರೆಯಲಿದೆ ಎನ್ನುತ್ತಾರೆ ಆಸ್ಪತ್ರೆ ವೈದ್ಯರು.
ರೋಗಿಗಳ ಸಂಖ್ಯೆ ಹೆಚ್ಚಳ: ಬದಲಾದ ಜೀವನಶೈಲಿ ಹಾಗೂ ಆಹಾರ ಕ್ರಮದಿಂದಾಗಿ ಮಧುಮೇಹ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದಾಗಿ ಕಿಡ್ನಿ ಸಮಸ್ಯೆಗೆ ಒಳಗಾಗುವವರ ಸಂಖ್ಯೆಯೂ ಏರುತ್ತಿದೆ. ಖಾಸಗಿಯಲ್ಲಿ ಚಿಕಿತ್ಸೆ ದುಬಾರಿ ಎಂಬ ಕಾರಣಕ್ಕೆ ಸಂಸ್ಥೆಯಲ್ಲಿ ಡಯಾಲಿಸಿಸ್, ಕಿಡ್ನಿಯಲ್ಲಿ ಕಲ್ಲು ಸೇರಿ ಕಿಡ್ನಿ ಹಾಗೂ ಮೂತ್ರಕೋಶ ಸಮಸ್ಯೆಗೆ ಸಂಬಂಧಿಸಿದಂತೆ ಚಿಕಿತ್ಸೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನು ಅಂಗಾಂಗ ಕಸಿ ಶಸಚಿಕಿತ್ಸೆಗಾಗಿ ಕಾಯುತ್ತಿರುವವರಲ್ಲಿಯೂ ಕಿಡ್ನಿ ಕಸಿಗಾಗಿ ಕಾಯುತ್ತಿರುವವರೇ ಹೆಚ್ಚಿನವರಿದ್ದಾರೆ. ಈ ನಿಟ್ಟಿನಲ್ಲಿ ರೋಗಿಗಳಿಗೆ ಅಗತ್ಯಕ್ಕೆ ಅನುಗುಣವಾಗಿ ಹಾಗೂ ಗುಣಮಟ್ಟದ ಸೇವೆ ಒದಗಿಸಲು 2016ರಲ್ಲಿ ವಿಕ್ಟೋರಿಯಾ ಆವರಣದಲ್ಲಿ 150 ಹಾಸಿಗೆಗಳ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗಿತ್ತು. 2018ರಲ್ಲಿ ನಿರ್ಮಾಣ ಕಾಮಗಾರಿ ಪ್ರಾರಂಭವಾಯಿತು. ಆದರೆ ಈವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ.
ಅನೆಕ್ಸ್ ಕಟ್ಟಡದ ವೈಶಿಷ್ಟ್ಯಗಳು: 150 ಹಾಸಿಗೆಗಳ ನೂತನ ಕಟ್ಟಡ ತಳಮಹಡಿ, ನೆಲಮಹಡಿ ಹಾಗೂ ಮೂರು ಅಂತಸ್ತುಗಳನ್ನು ಒಳಗೊಂಡಿದೆ. ಪ್ರತಿ ಮಹಡಿಗೆ 923 ಚದರ ಮೀಟರ್‌ನಂತೆ ಒಟ್ಟು ಕಟ್ಟಡದ ವಿಸ್ತೀರ್ಣ 4615 ಚದರ ಮೀಟರ್. ತಳಮಹಡಿಯಲ್ಲಿ ಕೊಠಡಿಗಳು, ಪ್ರಯೋಗಾಲಯ, ಸಿಎಸ್‌ಎಸ್‌ಡಿ (ಸ್ಟೆರಲೈಸ್ ್ಡ ಘಟಕ), ಯಪಿಎಸ್, ಅಗ್ನಿಶಾಮಕ ಪಂಪ್ ಕೊಠಡಿ ಮತ್ತು ನೀರಿನ ಟ್ಯಾಂಕ್, ಲಾಂಡ್ರಿ, ಜನರಲ್ ಸ್ಟೋರ್, ವೈದ್ಯಕೀಯ ದಾಖಲೆಗಳ ಸಂಗ್ರಹ ಕೊಠಡಿ ಇರಲಿದೆ.
ನೆಲಮಹಡಿಯಲ್ಲಿ 20 ಹಾಸಿಗೆಗಳ ತುರ್ತು ನಿಗಾ ಘಟಕ, 9 ಹೊರ ರೋಗಿಗಳ ಚಿಕಿತ್ಸಾ ಕೊಠಡಿಗಳು, ಔಷಧಾಲಯ ಇರಲಿದೆ. ಮೊದಲ ಮಹಡಿಯಲ್ಲಿ 7 ಹೊರ ರೋಗಿಗಳಿಗೆ ಚಿಕಿತ್ಸಾ ಕೊಠಡಿಗಳು, 40 ಹಾಸಿಗೆಗಳ ಡಯಾಲಿಸಿಸ್ ಘಟಕ, ಎರಡನೇ ಮಹಡಿಯಲ್ಲಿ 40 ಹಾಸಿಗೆಗಳ ಸಾಮಾನ್ಯ ವಾರ್ಡ್, 7 ಹಾಸಿಗೆಗಳ ವಿಶೇಷ ವಾರ್ಡ್, 6 ಹಾಸಿಗೆಗಳ ವಿಶೇಷ ವಾರ್ಡ್ ಹಾಗೂ 3ನೇ ಮಹಡಿಯಲ್ಲಿ ಕಿಡ್ನಿ ಕಸಿ ಸೇರಿ ಇತರೆ ಚಿಕಿತ್ಸೆಗಳಿಗೆ 4 ಶಸಚಿಕಿತ್ಸಾ ಘಟಕಗಳು (ಆಪರೇಷನ್ ಥಿಯೇಟರ್) ಹಾಗೂ 17 ಹಾಸಿಗೆಗಳ ತೀವ್ರ ನಿಗಾ ಘಟಕಗಳು ಇರಲಿವೆ.
ಸೆಪ್ಟೆಂಬರ್ ಕೊನೆಗೆ ಉದ್ಘಾಟನೆ?
ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಶಸಚಿಕಿತ್ಸಾ ಕೊಠಡಿಗಳ ಕೊನೆಯ ಹಂತದ ಕೆಲಸ ನಡೆಯುತ್ತಿದೆ. ಉಳಿದಂತೆ ಸುಣ್ಣ ಬಣ್ಣ ಬಳಿಯುವ ಕಾರ್ಯ ಆರಂಭವಾಗಿದ್ದು, ಸೆಪ್ಟೆಂಬರ್ ಕೊನೆಯ ವಾರದಲ್ಲಿ ಕಟ್ಟಡ ಹಸ್ತಾಂತರಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.