

ಪಿರಿಯಾಪಟ್ಟಣ: ವಿದ್ಯಾರ್ಥಿ ಹಂತದಿಂದಲೇ ಮಕ್ಕಳಿಗೆ ದೇಶಾಭಿಮಾನ ಮತ್ತು ಶಿಸ್ತು ಮೂಡಿಸುವ ಕೆಲಸವಾಗಬೇಕಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರವಿಪ್ರಸನ್ನ ಅಭಿಪ್ರಾಯಪಟ್ಟರು.
ಪಟ್ಟಣದ ಶಿಕ್ಷಕರ ಸಭಾಂಗಣದಲ್ಲಿ ಸೋಮವಾರ ಭಾರತ ಸೇವಾದಳದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತ ಸೇವಾದಳ ತಾಲೂಕು ಶಾಖೆ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಲ್ಲಿ ಶಿಸ್ತು ಮತ್ತು ಏಕಾಗ್ರತೆ ಮೂಡಿಸುವ ಜತೆಗೆ ತ್ಯಾಗ, ಸರಳತೆ, ಧೈರ್ಯ, ಸಹಕಾರ ಮತ್ತಿತರ ಉಪಯುಕ್ತ ಅಂಶಗಳನ್ನು ಕಲಿಸುವ ಕೆಲಸವಾಗಬೇಕಿದೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮನೋಭಾವನೆಯನ್ನು ಪ್ರತಿಯೊಬ್ಬರೂ ಹೊಂದಬೇಕಿದ್ದು ಅಶಕ್ತರು, ವೃದ್ಧರು, ಅಂಗವಿಕಲರನ್ನು ಗೌರವಿಸುವ ಗುಣವನ್ನು ಕಲಿಯಬೇಕಿದೆ ಎಂದರು.
ಶಾಲಾ-ಕಾಲೇಜುಗಳಲ್ಲಿ ಭಾರತ ಸೇವಾದಳದ ಉದ್ದೇಶಿತ ಚಟುವಟಿಕೆ ಸಮರ್ಪಕವಾಗಿ ಕೈಗೊಳ್ಳಲು ಶಾಲೆಯ ಮುಖ್ಯಶಿಕ್ಷಕರು ಮತ್ತು ದೈಹಿಕ ಶಿಕ್ಷಣ ಶಿಕ್ಷಕರ ಸಹಕಾರ ಅತ್ಯಗತ್ಯವಾಗಿದ್ದು, ಕಲಿಕೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸಿ ಮಕ್ಕಳ ತಳಹದಿಯನ್ನು ಭದ್ರಪಡಿಸಬೇಕಿದೆ ಎಂದರು.
ಎನ್‌ಸಿಸಿ ಮತ್ತು ಸ್ಕೌಟ್ಸ್‌ಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಂಡಾಗ ಶಿಸ್ತುಬದ್ಧ ಜೀವನ ಮತ್ತು ಸೇವಾ ಮನೋಭಾವನೆ ಮೂಡಲಿದೆ. ಹಿಂದಿನ ಕಾಲದಲ್ಲಿ ಸ್ವಾತಂತ್ರ ಹೋರಾಟಗಾರರು ಮತ್ತು ಸಮಾಜಕ ಸುಧಾರಕರು ರಾಷ್ಟ್ರದ ಅಭಿವೃದ್ಧಿಗಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಭಾರತ ಸೇವಾದಳದ ಚಟುವಟಿಕೆ ಹಂತ ಹಂತವಾಗಿ ಅಭಿವೃದ್ಧಿಪಡಿಸಿದ್ದಾರೆ ಎಂದರು.
ಭಾರತ ಸೇವಾದಳದ ಜಿಲ್ಲಾ ಸಂಘಟಕ ಈರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಸೇವೆಗಾಗಿ ಬಾಳು ಎಂಬ ಧ್ಯೇಯ ವಾಕ್ಯದೊಂದಿಗೆ ನಾವೆಲ್ಲರೂ ಸಕ್ರಿಯವಾಗಿ ಸೇವಾ ಚಟುವಟಿಕೆ ಹಮ್ಮಿಕೊಳ್ಳಬೇಕಿದೆ ಎಂದರು.
ಸ್ವಾತಂತ್ರ ಪೂರ್ವದಲ್ಲಿ ಸೇವೆಗಾಗಿ ಬಾಳು ಎಂಬ ಧ್ಯೇಯವಿಟ್ಟುಕೊಂಡು 1923ರಲ್ಲಿ ಹಿಂದೂಸ್ತಾನಿ ಸೇವಾದಳ ಆರಂಭಿಸಲಾಯಿತು. ಪ್ರತಿ ಗ್ರಾಮದಲ್ಲೂ ಸೇವಾದಳ ಶಾಖೆಯನ್ನು ರಚಿಸಿ ಸ್ವಾತಂತ್ರ ಹೋರಾಟದಲ್ಲಿ ಶಿಸ್ತಿನಿಂದ ಪಾಲ್ಗೊಳ್ಳಬೇಕು ಎಂಬ ನಿಟ್ಟಿನಲ್ಲಿ ಮಹಾತ್ಮ ಗಾಂಧೀಜಿ ಸೇವಾದಳ ಹುಟ್ಟು ಹಾಕಿದ್ದಾರೆ. 1950 ರಲ್ಲಿ ಭಾರತ ಸೇವಾದಳ ಎಂದು ಮರು ನಾಮಕರಣಗೊಂಡು ಅಂದಿನಿಂದಲೂ ಸಕ್ರಿಯವಾಗಿ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಸ್ವಾತಂತ್ರದ ಮಹತ್ವವೇನು ಎಂಬುದೇ ತಿಳಿಯದಾಗಿದೆ. ಸ್ವಾತಂತ್ರ ಹೋರಾಟಗಾರರ ಬಗ್ಗೆಯೂ ಸೂಕ್ತ ಮಾಹಿತಿ ಇಲ್ಲ. ಶಾಲೆಗಳಲ್ಲಿ ಮಕ್ಕಳಿಗೆ ಸ್ವಾತಂತ್ರ ಹೋರಾಟದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸೇವಾದಳ ಸಂಸ್ಥೆ ಶಿಕ್ಷಕರಿಗೆ ತರಬೇತಿಯನ್ನು ನೀಡುವ ಮೂಲಕ ದೇಶದ ಅಭಿವೃದ್ಧಿ ಮತ್ತು ದೇಶಭಕ್ತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದರು.
ಭಾರತ ಸೇವಾದಳ ತಾಲೂಕು ಸಮಿತಿಯ ಉಪಾಧ್ಯಕ್ಷ ಅಂಬಲಾರೆ ಬಸವೇಗೌಡ ಮಾತನಾಡಿ, ಸೇವೆ ಮಾಡಲು ಹಣವೇ ಮುಖ್ಯವಲ್ಲ. ಸೇವಾ ಮನೋಭಾವ ಹೊಂದಿದ್ದರೆ ನಮ್ಮ ಕೈಲಿಂದ ಆಗುವ ಯಾವುದೇ ರೀತಿಯ ಸಹಾಯವನ್ನು ನಾವು ಮಾಡಬಹುದು. ಎಲ್ಲೆಡೆ ಸ್ವಾರ್ಥ ಮನೋಭಾವವೇ ಎದ್ದು ಕಾಣುತ್ತಿದ್ದು ಮಕ್ಕಳಿಗೆ ದೇಶ ಪ್ರೇಮ ಮೂಡಿಸುವ ಅಗತ್ಯತೆ ಮತ್ತು ಅನಿವಾರ್ಯ ಪರಿಸ್ಥಿತಿ ಇದೆ ಎಂದರು.
ಭಾರತ ಸೇವಾದಳ ತಾಲೂಕು ಸಮಿತಿಯ ಸದಸ್ಯ ಸಿ.ಎನ್.ವಿಜಯ್, ತಾಲೂಕು ದೈಹಿಕಶಿಕ್ಷಣ ಪರಿವೀಕ್ಷಕ ರಮೇಶ್, ತಾಲೂಕು ಶಿಕ್ಷಕರ ಸಂಘದ ಕಾರ್ಯದರ್ಶಿ ಪ್ರಸನ್ನಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷೆ ಅನಿತಾ ಸೇರಿದಂತೆ ತಾಲೂಕಿನ ವಿವಿಧ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರು, ಮತ್ತಿತರರು ಹಾಜರಿದ್ದರು.