ಯುವ ಪ್ರತಿಭೆಗಳಿಗೆ ಆತ್ಮಸ್ಥೈರ್ಯ ತುಂಬಿರಿ

ಯುವ ಪ್ರತಿಭೆಗಳಿಗೆ ಆತ್ಮಸ್ಥೈರ್ಯ ತುಂಬಿರಿ
Published on

ಹಾಸನ: ಪ್ಯಾರಾ ಒಲಿಂಪಿಕ್‌ನಲ್ಲಿ ಸಾಧನೆ ಮಾಡುವ ಯುವ ಪ್ರತಿಭೆಗಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಸಮಾಜದ ಪ್ರತಿಯೊಬ್ಬರೂ ಮಾಡಬೇಕು ಎಂದು ಬಿ.ಕೆ.ಟೈಮ್ಸ್ ಗಂಗಾಧರ್ ಹೇಳಿದರು.

ನಗರದ ರಿಂಗ್ ರಸ್ತೆಯಲ್ಲಿರುವ ಯುನಿಕಾರ್ನ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಶುಕ್ರವಾರ ರೋಟರಿ ಕ್ಲಬ್ ಆಫ್ ಹಾಸನ ರಾಯಲ್ ವತಿಯಿಂದ ನಡೆದ ಸಭೆಯಲ್ಲಿ ಅಂತಾರಾಷ್ಟ್ರೀಯ ಪ್ಯಾರಾ ಒಲಿಂಪಿಕ್ಸ್ ನಲ್ಲಿ ಸಾಧನೆ ಮಾಡಿದ ಹಿತನ್‌ಗೌಡ ಅವರನ್ನು ಸನ್ಮಾನಿಸಿ ಮಾತನಾಡಿದರು.

ದೈಹಿಕವಾಗಿ ಆರೋಗ್ಯವಾಗಿರುವ ಮಕ್ಕಳೇ ಇಂದು ಕ್ರೀಡೆಯ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಹೀಗಿರುವಾಗ ಯಾವುದೋ ಒಂದು ಕಾರಣಕ್ಕೆ ಅಂಗವೈಕಲ್ಯವಿದ್ದರೂ ಮಾನಸಿಕವಾಗಿ ಕುಗ್ಗದೆ ಆತ್ಮಸ್ಥೈರ್ಯದಿಂದ ಸಾಧನೆ ಮಾಡುವವರಿಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು. ಆತ್ಮವಿಶ್ವಾಸ, ಛಲ ಮೈಗೂಡಿಸಿಕೊಂಡರೆ ಯಾವ ಸಾಧನೆಗೂ ಅಡ್ಡಿ ಉಂಟಾಗುವುದಿಲ್ಲ. ಪ್ಯಾರಾ ಒಲಿಂಪಿಕ್‌ನಲ್ಲಿ ನಮ್ಮ ಜಿಲ್ಲೆಯ ಇಬ್ಬರು ಈಗಾಗಲೇ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ್ದು, ಇದೀಗ ಜಾವಲಿನ್ ಕ್ರೀಡೆಯಲ್ಲಿ ಹಿತನ್‌ಗೌಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಅವರ ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಧನೆ ಮಾಡಲಿ ಎಂದು ಶುಭ ಕೋರಿದರು.

ಪಾಲಕರು ತಮ್ಮ ಮಕ್ಕಳನ್ನು ಕೇವಲ ಓದಿಗೆ ಸೀಮಿತವಾಗಿರಿಸದೆ ಕ್ರೀಡೆ ಸೇರಿದಂತೆ ಇನ್ನಿತರ ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಲು ಸ್ಫೂರ್ತಿ ತುಂಬಬೇಕು. ಹಿತನ್ ಅವರ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೆ ರೋಟರಿ ಕ್ಲಬ್ ಸಹಕಾರಿಯಾಗಿ ನಿಲ್ಲಲಿದೆ ಎಂದು ಹೇಳಿದರು.

ಯುನಿಕಾರ್ನ್ ಸ್ಪೋರ್ಟ್ಸ್ ಅಕಾಡೆಮಿ ಮುಖ್ಯಸ್ಥ ಭಾನು ಮಾತನಾಡಿ, ಹಾಸನ ನಗರ ಸೇರಿದಂತೆ ಜಿಲ್ಲೆಯಲ್ಲಿ ಅನೇಕ ಯುವ ಕ್ರೀಡಾ ಪ್ರತಿಭೆಗಳು ಇದ್ದು, ಅವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಈ ಸಂಸ್ಥೆ ಆರಂಭಿಸಲಾಗಿದೆ. ಸಮಾಜಕ್ಕೆ ನಮ್ಮಿಂದ ಏನನ್ನಾದರೂ ಕೊಡುಗೆ ನೀಡಬೇಕೆಂಬ ಸದುದ್ದೇಶದಿಂದ ಈ ಸಂಸ್ಥೆ ಆರಂಭಿಸಲಾಗಿದೆ. ನಮ್ಮ ಸಂಸ್ಥೆಯಲ್ಲಿ ಪ್ಯಾರಾ ಒಲಿಂಪಿಕ್‌ನಲ್ಲಿ ಸಾಧನೆ ಮಾಡಿದ ಯುವ ಕ್ರೀಡಾಪಟು ಹಿತನ್ ಅವರನ್ನು ಗೌರವಿಸುವ ಅವಕಾಶ ಸಿಕ್ಕಿರುವುದು ಸಂತಸ ನೀಡಿದೆ. ಹಿತನ್ ಸೇರಿದಂತೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುವ ಯುವ ಕ್ರೀಡಾಪಟುಗಳಿಗೆ ಮುಂದಿನ ದಿನಗಳಲ್ಲಿ ಸಹಕಾರ ನೀಡಲಾಗುವುದು ಎಂದರು.

ರೋಟರಿ ಕ್ಲಬ್ ಆಫ್ ಹಾಸನ್ ರಾಯಲ್ ಕಾರ್ಯದರ್ಶಿ ಪಿ.ರವಿ ಕುಮಾರ್, ಖಜಾಂಚಿ ಎಚ್.ಕೆ.ದಿಲೀಪ್ ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net