

ಅಳವಂಡಿ: ಬೇಸಿಗೆ ಅಂದರೆ ಸಮಸ್ಯೆಗಳ ಕಾಲ. ಜನ-ಜಾನುವಾರುಗಳಿಗೆ ಹಸಿರು ಮೇವು, ನೀರಿನ ಕೊರತೆ, ಜನರಿಗೆ ಸಾಂಕ್ರಾಮಿಕ ರೋಗ ಹಾಗೂ ಬಿಸಿಲಿನ ತಾಪದ ಹೆದರಿಕೆ. ಇನ್ನು ಅರಣ್ಯ ಇಲಾಖೆಗಂತೂ ಸಸಿಗಳು, ಮರಗಳ ರಕ್ಷಣೆ ದೊಡ್ಡ ಸವಾಲು. ನೆಟ್ಟ ಸಸಿಗಳಿಗೆ ಆಕಸ್ಮಿಕ ಬೆಂಕಿಯ ಕಾಟ.
ಇದನ್ನೂ ಓದಿ: ಆರು ತಿಂಗಳಲ್ಲೇ ಕಾಣದಂತೆ ಮಾಯವಾದವು ಸಸಿಗಳು…
ಈ ಎಲ್ಲ ಸವಾಲುಗಳನ್ನು ಎದುರಿಸಲು ಅಳವಂಡಿ ವಲಯದಲ್ಲಿ ಅರಣ್ಯ ಇಲಾಖೆ ಬಹುತೇಕ ರಸ್ತೆ ಬದಿ ಗಿಡಗಳನ್ನು ನೆಟ್ಟು ಅವುಗಳ ಆರೈಕೆಯಲ್ಲಿ ತೊಡಗಿದ್ದು, ಅವುಗಳ ರಕ್ಷಣೆಗೆ ವಿವಿಧ ಕ್ರಮಗಳನ್ನು ಕೈಗೊಳ್ಳುವ ಮೂಲಕ ಬೇಸಿಗೆಯಲ್ಲಿಯೂ ಗಿಡಗಳು ನಳನಳಿಸುವಂತೆ ಮಾಡಿರುವುದು ಹೆಮ್ಮೆಯ ವಿಷಯ.
ಇತ್ತೀಚಿನ ವರ್ಷಗಳಲ್ಲಿ ಅರಣ್ಯ ಇಲಾಖೆ ರಸ್ತೆ ಬದಿ ಗಿಡಗಳನ್ನು ನೆಡುವುದರ ಜತೆಗೆ ಅವುಗಳ ರಕ್ಷಣೆಗೆ ವಿಶೇಷ ಕಾಳಜಿ ವಹಿಸುತ್ತಿದೆ. ಗಿಡಗಳ ರಕ್ಷಣೆಗೆ ಪ್ರತಿ ರಸ್ತೆಗೂ ಕಾವಲುಗಾರರನ್ನು ನೇಮಿಸಿದ್ದು ಮಳೆಗಾಲ, ಚಳಿಗಾಲದಲ್ಲಿ ಪ್ರತಿದಿನವೂ ಗಿಡಗಳ ಆರೈಕೆಗೆ ಕ್ರಮ ಕೈಗೊಂಡಿದೆ.
ಗಿಡಗಳ ಸುತ್ತಲೂ ಕಸ-ಕಡ್ಡಿ ಕಿತ್ತು ಸ್ವಚ್ಛವಾಗಿಟ್ಟುಕೊಳ್ಳುವದು. ಆಡು, ಕುರಿ, ಜಾನುವಾರುಗಳಿಂದ ರಕ್ಷಿಸಲು ಗಿಡಗಳ ಸುತ್ತಲೂ ಮುಳ್ಳಿನ ಬೇಲಿ ನಿರ್ಮಾಣ, ಗಿಡ ನೆಲಕ್ಕೆ ಬಾಗದಂತೆ ಆಸರೆ ಕೋಲು ಕೊಡುವುದು, ಮಳೆ ನೀರು ಇಂಗಲು ಸುತ್ತಲೂ ಪಾತಿ ನಿರ್ಮಿಸುವ ಕಾರ್ಯ ಮಾಡಲಾಗುತ್ತಿದೆ. ಒಟ್ಟಾರೆಯಾಗಿ ಈ ಕಾವಲುಗಾರರು ವರ್ಷದ 12 ತಿಂಗಳು ಗಿಡಗಳ ರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಅಳವಂಡಿ-ಹಂದ್ರಾಳ, ಅಳವಂಡಿ-ಘಟ್ಟಿರಡ್ಡಿಹಾಳ, ಕವಲೂರು-ಮುರ್ಲಾಪುರ, ಕವಲೂರು-ಘಟ್ಟಿರಡ್ಡಿಹಾಳ, ಕವಲೂರು-ಹಂದ್ರಾಳ, ಬೆಳಗಟ್ಟಿ-ಹೈದರನಗರ ರಸ್ತೆ ಸೇರಿ ವಿವಿಧ ಮಾರ್ಗಗಳ ಎರಡೂ ಬದಿಯಲ್ಲಿ ಸುಮಾರು 7 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಡಲಾಗಿದೆ. ನೆಡುತೋಪು ಕಾವಲುಗಾರರಾಗಿ ಮಹೇಶ ಪೂಜಾರ, ರವಿ ಜೋಗಿನ, ಶೀಮಣ್ಣ ತಳವಾರ, ಈಶಪ್ಪ ಕುಂಬಾರ ಸಸಿಗಳ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ.
ಬೇಸಿಗೆ ಕಾಲದಲ್ಲಿ ಮಾತ್ರ ಗಿಡಗಳ ರಕ್ಷಣೆ ಬಹು ದೊಡ್ಡ ಸವಾಲಾಗಿದೆ. ಸಮಯಕ್ಕೆ ಸರಿಯಾಗಿ ಸಸಿಗಳಿಗೆ ನೀರುಣಿಸುವುದು, ಕಾಡ್ಗಿಚ್ಚಿನಂಥ ಘಟನೆಗಳಿಂದ ರಕ್ಷಿಸುವುದು ಸಾಹಸದ ಕೆಲಸವಾಗಿದೆ.
ರಸ್ತೆ ಪಕ್ಕ ಬೆಳೆದ ಕಸಕಡ್ಡಿ ಹಾಗೂ ಹುಲ್ಲುಗಳಿಗೆ ಬೀಳುವ ಆಕಸ್ಮಿಕ ಬೆಂಕಿಯಿಂದ ಗಿಡಗಳು ಸುಟ್ಟು ನಾಶವಾಗಿದ್ದನ್ನು ಮನಗಂಡು ಕಾವಲುಗಾರರು, ಅರಣ್ಯ ರಕ್ಷಕ ಜಂಬುನಾಥ ಹಕಾರಿ ಮಾರ್ಗದರ್ಶನದಲ್ಲಿ ಖುದ್ದು ಬೆಳಗಿನ ಸಮಯದಲ್ಲಿ ಗಿಡಗಳಿಗೆ ನೀರಿನಲ್ಲಿ ತೋಯ್ದ ಚೀಲ ಹಾಕಿ ಹಾಗೂ ಗಿಡದ ಸುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿ ಪಕ್ಕದಲ್ಲಿ ಬೆಳೆದ ಹುಲ್ಲುಗಳಿಗೆ ಮುಂಗಡ ಸುಡುವ (ಅರ್ಲಿ ಬರ್ನಿಂಗ್) ಪದ್ಧತಿ ಅಳವಡಿಕೆಯಿಂದ ತಾವೇ ಬೆಂಕಿಯನ್ನು ಹಚ್ಚಿ ನಾಶಪಡಿಸುತ್ತಾರೆ.
ಹಾಗೂ ಉಳಿದ ಪ್ರದೇಶದಲ್ಲಿ ಹುಲ್ಲು ಸುಟ್ಟು ನಾಶವಾಗುವುದರಿಂದ ಗಿಡಗಳನ್ನು ಆಕಸ್ಮಿಕ ಬೆಂಕಿಯಿಂದ ರಕ್ಷಿಸುತ್ತಿದ್ದಾರೆ. ಈ ಪದ್ಧತಿ ಅಳವಡಿಕೆಯಿಂದ ಸಸಿಗಳ ಸುತ್ತಲೂ ಹುಲ್ಲು, ಕಸಕಡ್ಡಿ ಇಲ್ಲದಿರುವುದರಿಂದ ಸಸಿಗಳು ಬೆಂಕಿಗಾಹುತಿಯಾಗುವುದಿಲ್ಲ.
ನೆಡುತೋಪು ಕಾವಲುಗಾರರು ವರ್ಷ ಪೂರ್ತಿ ಗಿಡಗಳನ್ನು ಅತ್ಯಂತ ಜತನದಿಂದ ಕಾಯುತ್ತಿದ್ದು, ಪ್ರತಿದಿನ ಅವುಗಳ ರಕ್ಷಣೆ ಮಾಡಿ ಬೆಳೆಸುತ್ತಿದ್ದಾರೆ. ಆದರೆ, ಬೇಸಿಗೆ ಸಂದರ್ಭದಲ್ಲಿ ಬರುವ ಕಾಡ್ಗಿಚ್ಚಿನಿಂದ ಗಿಡಗಳ ರಕ್ಷಣೆಗೆ ಮುಂಗಡ ಸುಡುವ ಪದ್ಧತಿಯಿಂದ ಸುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿ ಸುಟ್ಟು ಕಸ ಕಡ್ಡಿ, ಹುಲ್ಲನ್ನು ತಾವೇ ಸ್ವತಃ ಸ್ವಚ್ಛಗೊಳಿಸುವುದರಿಂದ ಬೆಂಕಿಯಿಂದ ಗಿಡಗಳನ್ನು ರಕ್ಷಿಸಬಹುದು.| ಜಂಬುನಾಥ ಹಕಾರಿ, ಅರಣ್ಯ ರಕ್ಷಕ, ಕೊಪ್ಪಳ ವರ್ಷಪೂರ್ತಿ ಗಿಡಗಳ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದು ಖುಷಿ ಕೊಡುತ್ತಿದೆ. ಮಳೆಗಾದಲ್ಲಿ ಹುಲ್ಲು ಕೀಳುವುದು, ನೀರು ನಿಲ್ಲುವಂತೆ ಮಾಡುವುದು, ಬೇಸಿಗೆಯಲ್ಲಿ ಗಿಡಗಳು ಬೆಂಕಿಗಾಹುತಿಯಾಗದಂತೆ ಸುತ್ತಲೂ ಬೆಳೆದ ಹುಲ್ಲು, ಕಸ-ಕಡ್ಡಿಗಳನ್ನು ಮುಂಗಡವಾಗಿ ಸುಡುತ್ತಿದ್ದೇವೆ. ಹಾಗೂ ವರ್ಷಪೂರ್ತಿ ಆಡು, ಕುರಿ, ಜಾನುವಾರುಗಳಿಂದ ರಕ್ಷಿಸಲು ಸಸಿಗಳ ಸುತ್ತಲೂ ಮುಳ್ಳು ಬೇಲಿ ನಿರ್ಮಿಸಿದ್ದೇವೆ.| ಮಹೇಶ ಪೂಜಾರ, ನೆಡುತೋಪು ಕಾವಲುಗಾರ ಇತ್ತೀಚಿನ ವರ್ಷಗಳಲ್ಲಿ ಅರಣ್ಯ ಇಲಾಖೆ ರಸ್ತೆ ಬದಿ ಗಿಡಗಳನ್ನು ನೆಡುವುದರ ಜತೆಗೆ ಅವುಗಳ ಆರೈಕೆಯಲ್ಲಿ ತೊಡಗಿಸಿಕೊಂಡಿರುವುದು ಸಂತಸದ ವಿಷಯ. ಗಿಡಕ್ಕೆ ಆಗಾಗ ನೀರು ಹಾಕುವುದು, ಮುಳ್ಳುಕಂಟಿ ಕಟ್ಟಿ ಜಾನುವಾರುಗಳಿಂದ ರಕ್ಷಣೆ, ಬೇಸಿಗೆಯಲ್ಲಿ ಆಕಸ್ಮಿಕ ಬೆಂಕಿಯಿಂದ ಗಿಡಗಳ ರಕ್ಷಣೆಗೆ, ಸುತ್ತಲು ಬೆಳೆದ ಕಸವನ್ನು ಮುಂಗಡವಾಗಿ ಸುಟ್ಟು ರಕ್ಷಣೆ ಮಾಡುವುತ್ತಿರುವುದು ಮಾದರಿ ಕೆಲಸ.| ತೋಟಯ್ಯ ಅರಳೆಲೆಮಠ, ಗ್ರಾಮಸ್ಥ, ಅಳವಂಡಿ