More

    ಆರು ತಿಂಗಳಲ್ಲೇ ಕಾಣದಂತೆ ಮಾಯವಾದವು ಸಸಿಗಳು…

    ಶಿರಹಟ್ಟಿ: ಪಟ್ಟಣದ ಸೌಂದರ್ಯ ಹಾಗೂ ಹಸಿರೀಕರಣಕ್ಕಾಗಿ ಸ್ಥಳೀಯ ಆಡಳಿತ ರಸ್ತೆಯ ಮಧ್ಯೆ ಸಸಿಗಳನ್ನು ನೆಟ್ಟಿತ್ತು. ಆದರೆ, ನಿರ್ವಹಣೆ ಕೊರತೆಯಿಂದ ಸಸಿಗಳು ಬಾಡಿದ್ದು, ಹಸಿರೀಕರಣದ ಉದ್ದೇಶವೇ ವಿಫಲವಾಗಿದೆ.

    2022ರ ನವೆಂಬರ್‌ನಲ್ಲಿ ಪಟ್ಟಣದಲ್ಲಿ ಮುಖ್ಯಮಂತ್ರಿಗಳ ಜನಸಂಕಲ್ಪ ಯಾತ್ರೆ ನಿಗದಿಯಾಗಿತ್ತು. ಅದರ ಪ್ರಯುಕ್ತ ಪಟ್ಟಣದ ಸೌಂದರ್ಯೀಕರಣಕ್ಕೆ ಸ್ಥಳೀಯ ಆಡಳಿತ ಮುಂದಾಯಿತು. ಪಟ್ಟಣ ಪಂಚಾಯಿತಿ ಸಿಬ್ಬಂದಿ ಕಾರ್ಯಕ್ರಮ ಜರುಗಲಿರುವ ಸ್ಥಳ, ಮುಖ್ಯರಸ್ತೆಯುದ್ದಕ್ಕೂ ಸಸಿಗಳನ್ನು ನೆಟ್ಟು ಹಸಿರೀಕರಣಕ್ಕೆ ಚಾಲನೆ ನೀಡಿದ್ದರು. 300ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು. ಪಟ್ಟಣದ ಪ್ರಜ್ಞಾವಂತರು, ಪರಿಸರ ಪ್ರೇಮಿಗಳು ಆಶ್ಚರ್ಯ ಚಕಿತರಾಗಿದ್ದರು. ಒಳ್ಳೆಯ ಕೆಲಸ ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದರು.

    ಆದರೆ, ವಾರ ಕಳೆಯುವಷ್ಟರಲ್ಲಿ ಸಸಿಗಳು ಒಣಗಲಾರಂಭಿಸಿದವು. ಅವುಗಳ ಸಂರಕ್ಷಣೆಗೆ ಯಾರೂ ಮುಂದಾಗಲಿಲ್ಲ. ಕ್ರಮೇಣ ಅವುಗಳ ಸುತ್ತ ಕಸ, ಕಂಟಿ ಬೆಳೆಯಿತು. ಎಚ್ಚರಗೊಂಡ ಪಪಂ ಸಿಬ್ಬಂದಿ ಟ್ರಾೃಕ್ಟರ್ ಮೂಲಕ ನೀರುಣಿಸಲು ಮುಂದಾದರು. ಆದರೆ ಕಿರಿದಾದ ಡಿವೈಡರ್, ಸಸಿ ಬೆಳವಣಿಗೆಗೆ ಪೂರಕವಾದ ಸ್ಥಳದ ಅಭಾವದ ಕಾರಣ ಒಂದೊಂದೇ ಸಸಿಗಳು ದನ, ಕರುಗಳ ಪಾಲಾದವು.

    ಜಾಣ ಮೌನ: ತೋಟಗಾರಿಕೆ ಇಲಾಖೆಯು ಸಸ್ಯಪಾಲನಾ ಯೋಜನೆ ಅಡಿಯಲ್ಲಿ ಬೆಳೆಸಿದ್ದ ವಿವಿಧ ಜಾತಿಯ ಸಸಿಗಳನ್ನು ಅರಣ್ಯ ಇಲಾಖೆ ಸುಪರ್ದಿಗೆ ಒಪ್ಪಿಸಿತು. ಆ ಮೇಲೆ ಅವರು ಪಪಂಗೆ ಹಸ್ತಾಂತರಿಸಿದರು. ಆದರೆ ಸಸಿ ನೆಡಲು ಗುರುತಿಸಿದ ವಿವಿಧ ಸ್ಥಳ, ಡಿವೈಡರ್‌ಗಳು ಅವೈಜ್ಞಾನಿಕವಾಗಿದ್ದವು. ಸಸಿಗಳ ಬೆಳವಣಿಗೆಗೆ ಅದು ಪೂರಕವಾಗಿರಲಿಲ್ಲ. ನೆಟ್ಟ ಸಸಿಗಳು ನಿರ್ವಹಣೆ ಕಾಣದೆ ಮಾಯವಾದವು. ಈಗ ಆ ಸ್ಥಳ ಭಣಗುಡುತ್ತಿದೆ. ಸಸಿ ಬಾಡಲು ಅಧಿಕಾರಿಗಳ ಕಾರ್ಯವೈಖರಿ ಕಾರಣ ಎಂದು ಜನತೆ ದೂರುವಂತಾಗಿದೆ. ಸಿಎಂ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮುಂದಾಲೋಚನೆ ಇಲ್ಲದೆ ತರಾತುರಿಯಲ್ಲಿ ಸಸಿಗಳನ್ನು ನೆಟ್ಟಿದ್ದರ ಪರಿಣಾಮ ಸಸಿಗಳು ಹೆಚ್ಚು ದಿನ ಬದುಕಿ ಉಳಿಯಲಿಲ್ಲ.

    ತೋಟಗಾರಿಕೆ ಇಲಾಖೆಯು ಸಸ್ಯಪಾಲನೆ ಯೋಜನೆ ಅಡಿಯಲ್ಲಿ ಸಸಿಗಳನ್ನು ಬೆಳೆಸಿ, ನಿರ್ವಹಣೆಗಾಗಿ ಅರಣ್ಯ ಇಲಾಖೆಗೆ ವಹಿಸಿತ್ತು. ಆದರೆ, ಅವುಗಳನ್ನು ಡಿವೈಡರ್‌ಗಳಲ್ಲಿ ನೆಟ್ಟಿದ್ದು ಸಮಂಜಸವಾಗಿಲ್ಲ. ಸಸಿ ಸಂರಕ್ಷಣೆಗೆ ಸ್ಥಳಾವಕಾಶವೇ ಇಲ್ಲದಂತಾಗಿದೆ. ನಿರ್ವಹಣೆ ಇಲ್ಲದೆ ಒಣಗಿವೆ. ನಮ್ಮ ಶ್ರಮ ಸಾರ್ಥಕವಾಗಲಿಲ್ಲ.
    -ಸುರೇಶ ಕುಂಬಾರ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ

    ಪಟ್ಟಣದ ಹಸಿರೀಕರಣದ ಉದ್ದೇಶದಿಂದ ಸಸಿಗಳನ್ನು ನೆಡಲಾಗಿತ್ತು. ಆದರೆ ಡಿವೈಡರ್‌ನಲ್ಲಿ ಸ್ಥಳಾವಕಾಶದ ಕೊರತೆ ಮತ್ತು ಸಸಿಗಳ ಬೆಳವಣಿಗೆಗೆ ಪೂರಕವಾದ ಮಣ್ಣು ಆ ಸ್ಥಳದಲ್ಲಿ ಇರಲಿಲ್ಲ. ಸರಿಯಾಗಿ ನೀರುಣಿಸುವ ಕೆಲಸವೂ ಆಗಲಿಲ್ಲ. ಈ ಎಲ್ಲ ಕಾರಣಗಳಿಂದ ಸಸಿ ಸಂರಕ್ಷಣೆ ಸವಾಲಾಗಿ, ಪರಿಶ್ರಮ ವ್ಯರ್ಥವಾಗಿದೆ.
    -ಎನ್.ಎಂ. ಹಾದಿಮನಿ, ಹಿರಿಯ ಆರೋಗ್ಯ ನಿರೀಕ್ಷಕ. ಪಪಂ. ಶಿರಹಟ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts