More

    14 ಅಭ್ಯರ್ಥಿಗಳ ಭವಿಷ್ಯ ಸ್ಟ್ರಾಂಗ್ ರೂಂನಲ್ಲಿ ಭವಿಷ್ಯ ಭದ್ರ: ಮತಯಂತ್ರವಿರುವ ವಿಶ್ವವಿದ್ಯಾನಿಲಯದ ಸುತ್ತ ಸರ್ಪಗಾವಲು

    ಮಂಡ್ಯ: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧೆಯಿಂದಾಗಿ ಹೈವೊಲ್ಟೇಜ್ ಕ್ಷೇತ್ರ ಎನಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ಮುಗಿದಿದ್ದು, ಹದಿನಾಲ್ಕು ಅಭ್ಯರ್ಥಿಗಳ ಭವಿಷ್ಯವಿರುವ ಮತಯಂತ್ರಗಳು ಸ್ಟ್ರಾಂಗ್‌ನಲ್ಲಿ ಭದ್ರವಾಗಿವೆ.
    ಮತಯಂತ್ರಗಳನ್ನು ಇಡಲಾಗಿರುವ ನಗರದ ಮಂಡ್ಯ ವಿಶ್ವವಿದ್ಯಾನಿಲಯದಲ್ಲಿ ಸ್ಥಾಪಿಸಲಾಗಿರುವ ಸ್ಟ್ರಾಂಗ್ ರೂಂಗೆ ಬಿಗಿ ಬಂದೋಬಸ್ತ್ ಹಾಕಲಾಗಿದೆ. ಮತಯಂತ್ರವಿರುವ ವಿಭಾಗಕ್ಕೆ ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣ ನಿಷೇಧಿಸಲಾಗಿದ್ದು, ಇಡೀ ಆವರಣ ಗಡಿ ಭದ್ರತಾ ಪಡೆ ಹಾಗೂ ಪೊಲೀಸರ ಸುಪರ್ದಿಗೆ ಒಳಪಟ್ಟಿದೆ.
    ಕೆಲವೆಡೆ ಅವಧಿ ಮುಗಿದರೂ ಅಷ್ಟರೊಳಗೆ ಸರತಿ ಸಾಲಿನಲ್ಲಿ ನಿಂತಿದ್ದ ಮತದಾರರಿಗೆ ಮತದಾನ ಮಾಡಲು ರಾತ್ರಿ 7.30ವರೆಗೆ ಅವಕಾಶ ಕಲ್ಪಿಸಲಾಗಿತ್ತು. ಹೀಗಾಗಿ ಅಂತಹ ಮತಗಟ್ಟೆಗಳು ಹಾಗೂ ದೂರದ ಪ್ರದೇಶಗಳಿಂದ ಮತಯಂತ್ರಗಳು ನಗರಕ್ಕೆ ಬರುವುದು ತಡವಾಯಿತು. ರಾತ್ರಿಯಿಡೀ ಮತಯಂತ್ರಗಳ ವಾಹನಗಳು ಪೊಲೀಸ್ ಭದ್ರತೆಯಲ್ಲಿ ಬರುತ್ತಲೇ ಇದ್ದವು. ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸೇರಿದ ಎಂಟು ವಿಧಾನಸಭಾ ಕ್ಷೇತ್ರಗಳಿಂದ ಬಂದ ಮತಯಂತ್ರಗಳನ್ನು ಡಿ-ಮಸ್ಟರಿಂಗ್ ಮಾಡಿ ಕೊಠಡಿಗೆ ಸೇರಿಸಲಾಯಿತು. ಮತಯಂತ್ರ ಹಾಗೂ ವಿವಿ ಪ್ಯಾಟ್ ಮಿಷಿನ್‌ಗಳ ಲೆಕ್ಕ ಪಡೆದು, ಭದ್ರತಾ ಕೊಠಡಿಯೊಳಗೆ ಸೇರಿಸುವಷ್ಟರಲ್ಲಿ ತಡರಾತ್ರಿಯಾಗಿತ್ತು.
    ಅಂತೆಯೇ ಕೆ.ಆರ್.ನಗರ ಕ್ಷೇತ್ರದಿಂದ ಶನಿವಾರ ಬೆಳಗ್ಗೆ 8 ಗಂಟೆವರೆಗೂ ಮತಯಂತ್ರ ಬಂದಿದೆ. ಈ ಹಿನ್ನೆಲೆಯಲ್ಲಿ ರಾತ್ರಿಯಿಡೀ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಹಾಗೂ ಸಹಾಯಕ ಚುನಾವಣಾಧಿಕಾರಿಗಳು ಎಚ್ಚರವಿದ್ದು, ಕರ್ತವ್ಯ ನಿರ್ವಹಿಸುವ ಮೂಲಕ ವಿದ್ಯುನ್ಮಾನ ಮತಯಂತ್ರಗಳು ಭದ್ರತಾ ಕೊಠಡಿ ಸೇರುವಂತೆ ಮಾಡಿದರು. ಸಂಪೂರ್ಣ ಪ್ರಕ್ರಿಯೆ ಮುಗಿದ ಬಳಿಕ ಕೊಠಡಿಗಳಿಗೆ ಬೀಗ ಹಾಕಿ ಸೀಲ್ ಮಾಡಿ ವಿಶೇಷ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ.
    18 ಸ್ಟಾಂಗ್ ರೂಂಗಳು: ವಿವಿಯ ವಾಣಿಜ್ಯ ಬ್ಲಾೃಕ್‌ನ 18 ಕೊಠಡಿಗಳಲ್ಲಿ ಸ್ಥಾಪಿಸಿರುವ ಸ್ಟಾಂಗ್‌ರೂಂಗಳಲ್ಲಿ ಎಲ್ಲ ವಿದ್ಯುನ್ಮಾನ ಮತಯಂತ್ರಗಳನ್ನು ಇಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 2ರಂತೆ ಸ್ಟಾಂಗ್ ರೂಂಗಳನ್ನು ಸ್ಥಾಪಿಸಲಾಗಿದೆ. ಇದಲ್ಲದೆ ಅಂಚೆ ಮತಗಳು ಹಾಗೂ ಶಾಸನಬದ್ಧ ದಾಖಲೆಗಳಿಗಾಗಿ ತಲಾ ಒಂದೊಂದು ಸ್ಟಾಂಗ್ ರೂಂಗಳನ್ನು ತೆರೆಯಲಾಗಿದೆ.
    ವಿಧಾನಸಭಾ ಕ್ಷೇತ್ರವಾರು ಸ್ಥಾಪಿಸಿರುವ 16 ಭದ್ರತಾ ಕೊಠಡಿಯಲ್ಲಿ ಪ್ರತ್ಯೇಕವಾಗಿ ಎರಡು ಲಾಕ್ ಸಿಸ್ಟಂನಲ್ಲಿ ಸೀಲ್ ಮಾಡಿ, ಸುರಕ್ಷಿತವಾಗಿ ಇಡಲಾಗಿದೆ. ಸಿಆರ್‌ಪಿಎಫ್ ಮತ್ತು ಜಿಲ್ಲಾ ಪೊಲೀಸ್ ಸೇರಿದಂತೆ ರಕ್ಷಣಾ ಸಿಬ್ಬಂದಿ ವರ್ಗದವರಿಂದ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಎಲ್ಲ ಭದ್ರತಾ ಕೊಠಡಿಗಳ ಹೊರಭಾಗದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಭದ್ರತಾ ಕೊಠಡಿ ಸುರಕ್ಷತಾ ವ್ಯವಸ್ಥೆಯನ್ನು ವೀಕ್ಷಿಸಲು ಮತ ಎಣಿಕೆ ದಿನವಾದ ಜೂ.4ರವರೆಗೆ ದಿನದ 24 ಗಂಟೆ ಕಾರ್ಯನಿರ್ವಹಿಸಲು ಮೂರು ಪಾಳಿಯಲ್ಲಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಸಿಪಿಐ, ಪಿಎಸ್‌ಐ ಮೂರು ಪಾಳಿಯಲ್ಲಿ ಭದ್ರತೆ ಮೇಲ್ವಿಚಾರಣೆಗೆ ನಿಯೋಜನೆ ಮಾಡಲಾಗಿದೆ. ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತ ಎಣಿಕೆ ಕಾರ್ಯವರೆಗೂ ಭದ್ರತೆ ಮುಂದುವರೆಸಲಾಗುತ್ತದೆ.

    14 ಅಭ್ಯರ್ಥಿಗಳ ಭವಿಷ್ಯ ಸ್ಟ್ರಾಂಗ್ ರೂಂನಲ್ಲಿ ಭವಿಷ್ಯ ಭದ್ರ: ಮತಯಂತ್ರವಿರುವ ವಿಶ್ವವಿದ್ಯಾನಿಲಯದ ಸುತ್ತ ಸರ್ಪಗಾವಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts