

ಹಾಸನ: ನಗರದ ಸಿಟಿ ಬಸ್ ನಿಲ್ದಾಣ ರಸ್ತೆ ಬಳಿ ಇರುವ ಪೆಂಡಾಲ್ ಗಣಪತಿ 71ನೇ ವರ್ಷದ ಗಣೇಶ ಪ್ರತಿಷ್ಠಾಪನೆ ಕಾರ್ಯಕ್ರಮ ಗಣ್ಯರ ಮತ್ತು ಭಕ್ತರ ಸಮ್ಮುಖದಲ್ಲಿ ಬುಧವಾರ ನೆರವೇರಿತು.
ಮಧ್ಯಾಹ್ನ 12.35ರ ವೇಳೆಗೆ ಮಹಾಮಂಗಳಾರತಿ ನೆರವೇರಿಸಿ ಭಕ್ತರಿಗೆ ಪ್ರಸಾದ ನೀಡಲಾಯಿತು. ಶಾಸಕರು, ವಿವಿಧ ಕ್ಷೇತ್ರದ ಗಣ್ಯರು ಭಾಗಿಯಾಗಿದ್ದರು.
ಶಾಸಕ ಎಚ್.ಪಿ. ಸ್ವರೂಪ್ ಮಾತನಾಡಿ, ನಾಡಿನ ಹಾಗೂ ಹಾಸನ ಜಿಲ್ಲೆಯ ಜನತೆಗೆ ಓಳಿತು ಮಾಡುವಂತೆ ಗೌರಿ-ಗಣೇಶನಲ್ಲಿ ಪ್ರಾರ್ಥಿಸಲಾಗಿದೆ ಎಂದರು.
ಪೆಂಡಲ್ ಗಣಪತಿ ಸೇವಾ ಸಮಿತಿ 70 ವರ್ಷ ಪೂರೈಸಿದ್ದು, 24 ದಿನಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತವೆ. ಸಾರ್ವಜನಿಕರು ಪ್ರತಿದಿನ ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಗಣಪತಿ ಸೇವಾ ಸಮಿತಿ ಅಧ್ಯಕ್ಷ ಡಾ.ಎಚ್.ನಾಗರಾಜು ಮಾತನಾಡಿ, ಸೆ. 19ರಂದು ಗೌರಿ-ಗಣೇಶ ಮೂರ್ತಿಯನ್ನು ವಿಸರ್ಜಿಸಲಾಗುತ್ತದೆ. ಈ ವರ್ಷ 10 ಅಡಿಯ ಇಲಿ ಮೇಲೆ ಕುಳಿತಿರುವ ಮಹಾಗಣಪತಿಯನ್ನು ಪ್ರತಿಷ್ಠಾಪಿಸಲಾಗಿದೆ. ಪ್ರತಿದಿನ ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಪ್ರತಿದಿನ ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಇರುತ್ತದೆ. ಬಸ್ ನಿಲ್ದಾಣದ ಗಣಪತಿ ಇತಿಹಾಸವುಳ್ಳದ್ದಾಗಿದ್ದು, ಹಾಸನ ತಾಲೂಕಿನೆಲ್ಲೆಡೆ ಉತ್ತಮ ಮಳೆ, ಸಮೃದ್ಧಿಯ ಬೆಳೆ ಬರುವಂತೆ ಪ್ರಾರ್ಥಿಸಲಾಗಿದೆ ಎಂದರು.
ರಂಗೋಲಿ ಸ್ಪರ್ಧೆ, ವಿವಿಧ ಸಾಂಸ್ಕೃತಿಕ ಚಟುವಟಿಕೆ, ವೇಷಭೂಷಣ ಸ್ಪರ್ಧೆ, ಸಂಗೀತ, ನಾಟಕ, ಜನಪದ ಗೀತೆ, ಭಜನೆ ಕಾರ್ಯಕ್ರಮ ಸೇರಿದಂತೆ ವಿವಿಧ ಕಲೆಗಳ ಪ್ರದರ್ಶನ ಮಾಡಿ ಉತ್ತಮ ಪ್ರದರ್ಶನಕ್ಕೆ ಬಹುಮಾನ ವಿತರಣೆ ಮಾಡಲಾಗುತ್ತದೆ.
ಕೊನೆಯ ದಿನ ಬೆಳಗ್ಗೆ 10 ಗಂಟೆಗೆ ಶ್ರೀ ಮಹಾಗಣಪತಿ ಮತ್ತು ಶ್ರೀ ಸ್ವರ್ಣಗೌರಿ ಉತ್ಸವ ಪ್ರಾರಂಭವಾಗಿ ಸ್ಥಳೀಯ ಹಾಗೂ ವಿವಿಧ ಭಾಗಗಳಿಂದ ಆಗಮಿಸುವ ಸಾಂಸ್ಕೃತಿಕ ಜಾನಪದ ಕಲಾತಂಡಗಳೊಂದಿಗೆ ಪ್ರಮುಖ ರಾಜ ಬೀದಿಗಳಲ್ಲಿ ಮೆರವಣಿಗೆ ಮೂಲಕ ತೆರಳಿ ಸಂಜೆ 6.30ಕ್ಕೆ ದೇವಿಗೆರೆ ತಲುಪಲಿದೆ. ರಾತ್ರಿ 8 ಗಂಟೆ ಸುಮಾರಿಗೆ ದೇವಿಗೆರೆಯಲ್ಲಿ ತೆಪ್ಪೋತ್ಸವದೊಂದಿಗೆ ಗೌರಿ-ಗಣೇಶ ಮೂರ್ತಿ ವಿಸರ್ಜಿಸಲಾಗುತ್ತದೆ. ಸೆಪ್ಟಂಬರ್ 23 ರಂದು ಮಂಗಳವಾರ 12.30ಕ್ಕೆ ಮಹಾಗಣಪತಿ ಉತ್ಸವದ ಅಂಗವಾಗಿ ಅನ್ನ ಸಂತರ್ಪಣೆ ಕರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಮಹಾ ನಗರ ಪಾಲಿಕೆ ಮೇಯರ್ ಹೇಮಾಲತಾ ಕಮಾಲ್ ಕುಮಾರ್, ಗಣಪತಿ ಸೇವಾ ಸಮಿತಿ ಕಾರ್ಯದರ್ಶಿ ಚನ್ನವೀರಪ್ಪ, ಎಚ್.ಎಂ. ಸುರೇಶ್, ಲೀಲಾಕುಮಾರ್, ವೈ.ಎಸ್. ಮುರುಗೇಂದ್ರ, ಎಚ್.ಟಿ. ಶೇಖರ್, ಗಿರೀಶ್ ಚನ್ನವೀರಪ್ಪ, ಎಚ್.ಎಸ್. ಅನಂತನಾರಾಯಣ, ಎನ್.ಎಸ್. ಶಂಕರರಾವ್, ಎಚ್.ಪಿ. ಕಿರಣ್, ಎಂ.ಕೆ. ಕಮಲ್ ಕುಮಾರ್, ಸಿ.ಆರ್. ಶಂಕರ್, ಎಚ್.ಡಿ. ದೀಪಕ್, ಕಸಾಪ ಮಾಜಿ ಅಧ್ಯಕ್ಷ ರವಿನಾಕಲಗೂಡು, ನಗರಸಭೆ ಮಾಜಿ ಅಧ್ಯಕ್ಷೆ ನೇತ್ರಾವತಿ ಗಿರೀಶ್, ಕಾಂಗ್ರೆಸ್ ಮುಖಂಡ ಗೌಡಗೆರೆ ಪ್ರಕಾಶ್ ಇತರರು ಇದ್ದರು.